ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕನ್ನಡದ ಪರ ನಿಲ್ಲುವುದಿಲ್ಲ. ಆದರೆ ಇದು ಕಹಿ ವಾಸ್ತವವಾಗಿದೆ ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದರು.‘ಕನ್ನಡ ಚಂದ್ರ ಪ್ರಶಸ್ತಿ ಪ್ರದಾನ ಸಮಿತಿ’ಯಿಂದ ರವೀಂದ್ರ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮತನವನ್ನು ಉಳಿಸಿಕೊಳ್ಳಲು ಶ್ರವ್ಯ ಮತ್ತು ದೃಶ್ಯ ಪರಂಪರೆ ಎರಡೂ ಬೇಕು. ಆದರೆ ಯಾವ ಪಕ್ಷದ ಸರ್ಕಾರ ಬಂದರೂ ಕನ್ನಡದ ಪರ ನಿಲ್ಲುವುದಿಲ್ಲ ಎನ್ನುವುದು ಕಹಿ ವಾಸ್ತವವಾಗಿದೆ. ಹೀಗಾಗಿ ಕನ್ನಡ ಮ್ಯೂಸಿಯಂ ಸ್ಥಾಪನೆ ಸೇರಿದಂತೆ ಕನ್ನಡದ ಕೆಲಸಗಳು ತಾರ್ಕಿಕ ಅಂತ್ಯವನ್ನೇ ಮುಟ್ಟುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಕನ್ನಡದ ಪರಂಪರೆಯ ಹಿರಿಮೆಗಳನ್ನು ಹೇಳುತ್ತಲೇ ಇರಬೇಕು. ರಾ.ನಂ.ಚಂದ್ರಶೇಖರ ಅವರು ಕನ್ನಡದ ಸಾಕ್ಷಿಪ್ರಜ್ಞೆ ಆಗಿದ್ದಾರೆ. ಇಂತಹ ವಾಙ್ಮಯವನ್ನು ಸೃಷ್ಟಿಸಿರುವ ರಾನಂ ಅವರು ವಸ್ತುನಿಷ್ಠ ಮತ್ತು ಪ್ರಾಮಾಣಿಕ ಕನ್ನಡ ಹೋರಾಟಕ್ಕೆ ಹೆಸರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಕನ್ನಡಪರ ಚಿಂತಕ ರಾ.ನಂ.ಚಂದ್ರಶೇಖರ ಅವರ ಗೌರವಾರ್ಥವಾಗಿ ಸಮಿತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರಾದ ಬಿಎಂಟಿಸಿಯ ಕೆ.ಎಸ್.ಎಂ.ಹುಸೇನ್ ಮತ್ತು ಅಂಚೆ ಇಲಾಖೆಯ ಎಸ್.ಮಂಜುಳಾಂಬ ಅವರಿಗೆ ಕ್ರಮವಾಗಿ 2025 ಮತ್ತು 2026ನೇ ಸಾಲಿನ ‘ಕನ್ನಡ ಚಂದ್ರ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾ.ನಂ.ಚಂದ್ರಶೇಖರ ಅವರ ವಿಮರ್ಶಾ ಲೇಖನಗಳ ಸಂಕಲನ ‘ಅಕ್ಷರಸಾಕ್ಷ್ಯ’ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಲೇಖಕ ಬಾಬು ಕೃಷ್ಣಮೂರ್ತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ, ಕನ್ನಡ ಸಂಘಟಕ ವ.ಚ.ಚನ್ನೇಗೌಡ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಮ.ಚಂದ್ರಶೇಖರ್, ಸಂಶೋಧಕ ಆರ್.ಶೇಷ ಶಾಸ್ತ್ರಿ, ಭಾರತಿ ಶೇಷಗಿರಿ ರಾವ್, ಶಿವಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.