ವಿಮಾನ ಇಂಧನ ಉತ್ಪಾದನೆಗೆ ಬೆಳಗಾವಿ ಹಬ್‌ ಆಗಲಿ

KannadaprabhaNewsNetwork | Published : Feb 23, 2024 1:47 AM

ಸಾರಾಂಶ

ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. 38 ಸಕ್ಕರೆ ಕಾರ್ಖಾನೆಗಳಿವೆ. ಹಾಗಾಗಿ ಇಲ್ಲಿ ಎಥೆನಾಲ್ ಉತ್ಪಾದನೆ ಮತ್ತು ಬಳಕೆಗೆ ಹೆಚ್ಚು ಅವಕಾಶಗಳಿವೆ. ಎಥೆನಾಲ್ ಆರ್ಥಿಕತೆ ತೀವ್ರ ಬೆಳವಣಿಗೆ ಕಂಡಿದೆ. ಪೆಟ್ರೋಲ್ ಬದಲಾಗಿದೆ ಎಥೆನಾಲ್ ಬಳಕೆಗೆ ಪ್ರೋತ್ಸಾಹ ನೀಡಲು ಎಥೆನಾಲ್ ಪಂಪ್ ಸ್ಥಾಪನೆಗೆ ಅನುಮತಿ ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ವಿಮಾನ ಇಂಧನ ಉತ್ಪಾದನೆ ಹಬ್‌ ಆಗಬೇಕು ಎಂದು‌ ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಆಶಯ ವ್ಯಕ್ತಪಡಿಸಿದರು.

ಜಿಲ್ಲೆಯ ₹1622 ಕೋಟಿ ವೆಚ್ಚದ ಹೊನಗಾ-ಝಾಡಶಹಾಪುರ ಚತುಷ್ಪಥ ರಿಂಗ್ ರಸ್ತೆ, ₹941 ಕೋಟಿ ವೆಚ್ಚದ ಚಿಕ್ಕೋಡಿ ಬೈಪಾಸ್‌ನಿಂದ-ಗೋಟೂರವರೆಗಿನ ಚತುಷ್ಪಥ ಹಾಗೂ ಶಿರಗುಪ್ಪಿಯಿಂದ ಅಂಕಲಿವರೆಗಿನ ₹887 ಕೋಟಿ ವೆಚ್ಚದ ರಸ್ತೆ ಅಗಲೀಕರಣ ಸೇರಿದಂತೆ ಒಟ್ಟಾರೆ ₹13 ಸಾವಿರ ಕೋಟಿ ಮೌಲ್ಯದ 680 ಕಿಮೀ ಉದ್ದದ 36 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ರಾಷ್ಟ್ರಸಮರ್ಪಣೆ ಹಾಗೂ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಬೆಳಗಾವಿಯಲ್ಲಿ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಅವಕಾಶಗಳಿವೆ. ರೈತರ ಅಭಿವೃದ್ಧಿ ಮತ್ತು ಪರಿಸರ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯಾದ್ಯಂತ ಎಥೆನಾಲ್ ಬಳಕೆಗೆ ರಾಜ್ಯ ಸರ್ಕಾರ ಪ್ರೋತ್ಸಾಹ ನೀಡಬೇಕು. ಮುಂಬರುವ ದಿನಗಳಲ್ಲಿ ಜಗತ್ತಿಗೆ ಎಥೆನಾಲ್ ರಫ್ತುಗೊಳಿಸುವ ಗುರಿಯನ್ನು ಹೊಂದಲಾಗಿದೆ. ಭವಿಷ್ಯದಲ್ಲಿ ಎಥೆನಾಲ್ ಹಾಗೂ‌ ಮಿಥೆನಾಲ್ ಆಧಾರಿತ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಪರಿಸರ ರಕ್ಷಣೆ ಜತೆಗೆ ರೈತರ ಆರ್ಥಿಕಾಭಿವೃದ್ಧಿಗೂ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.

ರಾಜ್ಯಕ್ಕೆ ₹2000 ಕೋಟಿ ಕಾಮಗಾರಿಗಳು ಮಂಜೂರು:

ಲೋಕೋಪಯೋಗಿ ಇಲಾಖೆ ಕಳಿಸಿದ 17 ಪ್ರಮುಖ ಯೋಜನೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆದಷ್ಟು‌ ಬೇಗನೇ ಇವುಗಳಿಗೆ ಅಗತ್ಯ ಮಂಜೂರಾತಿ ನೀಡಲಾಗುವುದು. ಸಿಆರ್‌ಎಫ್ ಅಡಿ ₹2000 ಕೋಟಿ ವೆಚ್ಚದ ಕಾಮಗಾರಿಗಳನ್ನು ಕರ್ನಾಟಕಕ್ಕೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ದೇಶಾದ್ಯಂತ ಗ್ರೀನ್ ಕಾರಿಡಾರ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವುದು ಕೇಂದ್ರದ ಆದ್ಯತೆಯಾಗಿದೆ. ದೇಶದ ಪ್ರಮುಖ ನಗರಗಳ ಮಧ್ಯೆ ಹೆದ್ದಾರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರಯಾಣದ ಅವಧಿ ಕಡಿಮೆಗೊಳಿಸಿ ಸುಗಮ, ಸುರಕ್ಷಿತ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.

ಕಳೆದ ಅನೇಕ ವರ್ಷಗಳಿಂದ ಬೆಳಗಾವಿ ರಿಂಗ್ ರಸ್ತೆ ಸಮಸ್ಯೆ ಚರ್ಚೆಯಾಗಿತ್ತು. ಸುರೇಶ್ ಅಂಗಡಿ ಹಾಗೂ ಎಲ್ಲ ಶಾಸಕರು ಪ್ರಸ್ತಾಪಿಸಿದ್ದರು. ಇದೀಗ ಬೆಳಗಾವಿ ರಿಂಗ್ ರಸ್ತೆಗೆ ಕಾಲ ಕೂಡಿ ಬಂದಿದೆ. ರಾಜ್ಯದಲ್ಲಿ 8,200 ಕಿಮೀ ರಾ.ಹೆ.‌ಇದೆ. ರಾಜ್ಯದಲ್ಲಿ ₹3 ಲಕ್ಷ ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳುವ ಗುರಿ ಇತ್ತು. ಇಂದು ಬಹುತೇಕ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ರಸ್ತೆಗಳು ಅಭಿವೃದ್ಧಿಗೆ ಮಾರ್ಗಗಳಾಗಿವೆ. ಬೆಳಗಾವಿ ಬೈಪಾಸ್ ₹3,400 ಕೋಟಿ ವೆಚ್ಚದ ಈ ಕಾಮಗಾರಿಯಿಂದ ಬೆಳಗಾವಿ-ಗೋವಾ ನಡುವಿನ ಪ್ರಯಾಣದ ಅವಧಿ ಕಡಿತಗೊಳಿಸಲಿದೆ ಎಂದರು.

ಬೆಳಗಾವಿ-ರಾಯಚೂರ ಮಹತ್ವದ ಕಾರಿಡಾರ್:

ಬೆಳಗಾವಿ-ಹುನಗುಂದ-ರಾಯಚೂರು ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣದ ₹9,000 ಕೋಟಿ ವೆಚ್ಚದ ಕಾಮಗಾರಿಯು ಪೂರ್ಣಗೊಂಡ ಬಳಿಕ ಪ್ರಯಾಣದ ಅವಧಿಯು ಮೂರೂವರೆ ಗಂಟೆಗೆ ಇಳಿಯಲಿದೆ. ಬೆಳಗಾವಿ-ಸಂಕೇಶ್ವರ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿ ಸಕಾಲದಲ್ಲಿ ದೊರಕದಿರುವುದರಿಂದ ಕಾಮಗಾರಿ ಕುಂಠಿತಗೊಂಡಿದೆ. ಆದ್ದರಿಂದ ರಾಜ್ಯ ಸರ್ಕಾರವು ಅರಣ್ಯ ಇಲಾಖೆಯ ಅನುಮತಿ ದೊರಕಿಸಿಕೊಡುವುದರ ಜತೆಗೆ ಇತರೆ ಅಡ್ಡಿಗಳನ್ನು ನಿವಾರಿಸಿಕೊಟ್ಟರೆ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅನುಕೂಲವಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹೆದ್ದಾರಿ ಜಾಲವನ್ನು ಜೋಡಿಸುವ ಮೂಲಕ ಒಟ್ಟಾರೆ ಪ್ರಯಾಣದ ಅವಧಿಯನ್ನು ಕಡಿಮೆಗೊಳಿಸುವುದರ ಜತೆಗೆ ಅಭಿವೃದ್ಧಿಗೆ ಪೂರಕವಾದ ವಾತಾವರಣ ಲಭಿಸಲಿದೆ ಎಂದರು.

ಬೆಂಗಳೂರು ರಿಂಗ್ ರಸ್ತೆ- ಜನವರಿ 2025 ರಲ್ಲಿ ಪೂರ್ಣ:

ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಗೊಳಿಸಲು ₹17 ಸಾವಿರ ಕೋಟಿ ವೆಚ್ಚದ ರಿಂಗ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸಾರಿಗೆ ಸಮಸ್ಯೆ ನಿವಾರಣೆ ಜತೆಗೆ ರಾಜ್ಯದ ಜನರಿಗೆ ಅನುಕೂಲವಾಗಲಿದೆ. ಜನವರಿ 2025ರ ವೇಳೆಗೆ 6 ಪ್ಯಾಕೇಜ್‌ಗಳ ರಿಂಗ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕದ ಬಂದರು ಅಭಿವೃದ್ಧಿಗೊಂಡರೆ ರಾಜ್ಯದ ಅಭಿವೃದ್ಧಿಯ ವೇಗ ಇನ್ನಷ್ಟು ಹೆಚ್ಚಾಗಲಿದೆ. ರಾಜ್ಯದ ಒಟ್ಟಾರೆ ಪ್ರಗತಿಯಲ್ಲಿ ರಸ್ತೆಗಳ ಪಾತ್ರ ಪ್ರಮುಖವಾಗಲಿದೆ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಕೇವಲ ಬೆಳಗಾವಿ ಜಿಲ್ಲೆಯೊಂದರಲ್ಲೇ ₹4237 ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದೆ. ಜತ್ ಜಾಂಬೋಟಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಬೇಕು. ರಾಜಹಂಸಗಡ ಕೋಟೆಯನ್ನು ಪ್ರವಾಸಿತಾಣವಾಗಿ ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಕೇಬಲ್ ಕಾರ್ ಸೌಕರ್ಯ ಕಲ್ಪಿಸಬೇಕು ಎಂದು ತಿಳಿಸಿದರು.

ಸಂಸದರಾದ ಪಿ.ಸಿ.ಗದ್ದಿಗೌಡರ, ಸಂಗಣ್ಣ ಕರಡಿ, ರಾಜಾ ಅಮರೇಶ್ವರ ನಾಯಕ, ಶಾಸಕರಾದ ಅಭಯ್ ಪಾಟೀಲ, ವಿಠ್ಠಲ ಹಲಗೇಕರ, ನವದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ, ಮೇಯರ್‌ ಸವಿತಾ ಕಾಂಬಳೆ ಮೊದಲಾದವರು ಉಪಸ್ಥಿತರಿದ್ದರು.

ಬಾಕ್ಸ್‌...

ಕೇಂದ್ರ ಸಚಿವ ಗಡ್ಕರಿ ರಸ್ತೆಗಳ ಮಹಾರಾಜ್: ಸಚಿವ ಸತೀಶ ಬಣ್ಣನೆ

ಕೇಂದ್ರ ಸಚಿವ ನಿತಿನ ಗಡ್ಕರಿ ಪಕ್ಷಾತೀತವಾಗಿ ಕೆಲಸ ಮಾಡುವ ಮೂಲಕ ರಾಜ್ಯದ ರಸ್ತೆ ಕಾಮಗಾರಿಗಳಿಗೆ ವೇಗ ಸಿಕ್ಕಿದೆ‌. ಅವರು ದೇಶಾದ್ಯಂತ ಮಾಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಗಮನಿಸಿದರೆ ಅವರಿಗೆ ರಸ್ತೆಗಳ ಮಹಾರಾಜ್ ಎಂದು ಕರೆಯಬಹುದು ಎಂದು ಜಿಲ್ಲಾ ಉಸ್ತುವಾರಿಸಚಿವ ಸತೀಶ ಜಾರಕಿಹೊಳಿ ಬಣ್ಣಿಸಿದರು.

9 ತಿಂಗಳ ಅವಧಿಯಲ್ಲಿ ನಾನು ಗಡ್ಕರಿ ಅವರೊಂದಿಗೆ 5 ಬಾರಿ ಸಭೆ ಮಾಡಿದ್ದೇನೆ. ಮುಂದಿನ ಎರಡ್ಮೂರು ವರ್ಷಗಳಲ್ಲಿ ರಾಜ್ಯದ ರಸ್ತೆಗಳು ಸುಧಾರಣೆಯಾಗಬೇಕು. ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸಮಗ್ರ ಅಭಿವೃದ್ಧಿಗೊಳಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕನಸಾಗಿದೆ. ಕೇಂದ್ರ ಸಚಿವ ಗಡ್ಕರಿ ಅವರು ಕುಂಠಿತಗೊಂಡಿರುವ 18 ಕಾಮಗಾರಿಗಳನ್ನು ತ್ವರಿತಗೊಳಿಸಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ತಿಳಿಸಿದರು.

--------------

ಬಾಕ್ಸ್‌...

ಬಿಜೆಪಿ ಸಂಸದರ ಕ್ಷೇತ್ರಗಳಲ್ಲಿಯೇ ಕುರ್ಚಿಗಳು ಖಾಲಿ ಖಾಲಿ...!

ಜಿಲ್ಲಾ ಕ್ರೀಡಾಂಗಣದಲ್ಲಿ ಕೇಂದ್ರ ಸಚಿವ ನಿತಿನ ಗಡ್ಕರಿ ನೇತೃತ್ವದಲ್ಲಿ ನಡೆದ ಉತ್ತರ ಕರ್ನಾಟಕದ 18 ರಾಷ್ಟ್ರೀಯ ಹೆದ್ದಾರಿಗಳ ಯೋಜನೆಗಳ ಕಾಮಗಾರಿಗಳ ಶಂಕುಸ್ಥಾಪನೆ ಸಮಾರಂಭಕ್ಕೆ ಜನರ ಬರ ಎದುರಾಯಿತು. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರೇ ಇದ್ದರೂ ವೇದಿಕೆ ಮುಂಭಾಗದಲ್ಲಿ ಹಾಕಲಾಗಿದ್ದ ಕುರ್ಚಿಗಳೆಲ್ಲವೂ ಖಾಲಿ ಖಾಲಿಯಾಗಿದ್ದವು.ಮಧ್ಯಾಹ್ನ 12.30ಕ್ಕೆ ನಡೆಯಬೇಕಿದ್ದ ಕಾರ್ಯಕ್ರಮ ವಿಳಂಬವಾಗಿ ಆರಂಭವಾಯಿತು. ಜನರಿಲ್ಲದೇ ಭಣಗುಡುತ್ತಿತ್ತು. ಜನರು ಇಲ್ಲದಿರುವುದನ್ನು ಗಮನಿಸಿದ ಕಾರ್ಯಕ್ರಮ ಆಯೋಜಕರು ವೇದಿಕೆ ಮುಂಭಾಗದಲ್ಲಿ ಖಾಲಿಯಾಗಿದ್ದ ಕುರ್ಚಿಗಳಲ್ಲೇ ಕುಳಿತುಕೊಳ್ಳುವಂತೆ ಪದೇ ಪದೇ ಮನವಿ ಮಾಡಿಕೊಂಡರು. ಅಲ್ಲಲ್ಲಿ ಚದುರಿರುವ ಜನರನ್ನು ಒಂದೆಡೆ ಸೇರುವಂತೆ ಆಯೋಜಕರಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್‌ ಜೊಲ್ಲೆ ಸೂಚನೆ ನೀಡಿದರು. ಜನರಿಲ್ಲದೇ ಬಣಗುಡುತ್ತಿರುವ ದೃಶ್ಯ ಕಂಡು ಕಾರ್ಯಕ್ರಮ ಆಯೋಜಕರಿಗೂ ಆತಂಕ ಮನೆ ಮಾಡಿತ್ತು.----------

ಕೋಟ್‌...

ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. 38 ಸಕ್ಕರೆ ಕಾರ್ಖಾನೆಗಳಿವೆ. ಹಾಗಾಗಿ ಇಲ್ಲಿ ಎಥೆನಾಲ್ ಉತ್ಪಾದನೆ ಮತ್ತು ಬಳಕೆಗೆ ಹೆಚ್ಚು ಅವಕಾಶಗಳಿವೆ. ಎಥೆನಾಲ್ ಆರ್ಥಿಕತೆ ತೀವ್ರ ಬೆಳವಣಿಗೆ ಕಂಡಿದೆ. ಪೆಟ್ರೋಲ್ ಬದಲಾಗಿದೆ ಎಥೆನಾಲ್ ಬಳಕೆಗೆ ಪ್ರೋತ್ಸಾಹ ನೀಡಲು ಎಥೆನಾಲ್ ಪಂಪ್ ಸ್ಥಾಪನೆಗೆ ಅನುಮತಿ ನೀಡಲಾಗುತ್ತಿದೆ.

-ನಿತಿನ್ ಗಡ್ಕರಿ, ಕೇಂದ್ರ ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವರು.

Share this article