ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ಎಲ್ಲರೂ ಕೈ ಜೋಡಿಸಿ

KannadaprabhaNewsNetwork |  
Published : Jun 05, 2025, 01:23 AM IST
4ಎಚ್ಎಸ್ಎನ್15 :  | Kannada Prabha

ಸಾರಾಂಶ

ಸಾಮಾಜಿಕ ಪಿಡುಗಾಗಿರುವ ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಬಹುಮುಖ್ಯ, ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವ ಮೂಲಕ ಸಮಾಜದ ಏಳಿಗೆಗಾಗಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಜೂನ್ ೧೩ರಿಂದ ೩೦ರವರೆಗೆ ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣಾ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಸಾಮಾಜಿಕ ಪಿಡುಗಾಗಿರುವ ಬಾಲಕಾರ್ಮಿಕ ಪದ್ಧತಿ ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಬಹುಮುಖ್ಯ, ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸುವ ಮೂಲಕ ಸಮಾಜದ ಏಳಿಗೆಗಾಗಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸತ್ಯಭಾಮ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಟಾಸ್ಕ್‌ಫೋರ್ಸ್ ಸಭೆ ನಡೆಸಿ ಮಾತನಾಡಿದ ಅವರು, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿಯ ಕುರಿತು ಪ್ರತೀ ಶಾಲೆಯಲ್ಲಿ ಪ್ರಾರ್ಥನೆಯ ಸಂದರ್ಭದಲ್ಲಿ ಅರಿವು ಮೂಡಿಸಿ ಎಂದರಲ್ಲದೆ, ಶಾಲೆಗಳಲ್ಲಿ ನಡೆಯುವ ಪೋಷಕರ ಸಭೆಯಲ್ಲಿಯೂ ಕೂಡ ಅರಿವು ಮೂಡಿಸಲು ಕ್ರಮವಹಿಸಿ ಎಂದು ತಿಳಿಸಿದರು.

ವಾಹನಗಳ ಮೇಲೆ ಸ್ಟಿಕರ್ ಅಂಟಿಸಿ ಹೆಚ್ಚಿನ ಪ್ರಚಾರ ಮಾಡಲು ಮತ್ತು ಆಕಾಶವಾಣಿಯಲ್ಲಿ ಅರಿವು ಮೂಡಿಸುವಂತೆ ಸೂಚಿಸಿದರು. ಬಾಲಕಾರ್ಮಿಕ ಮಕ್ಕಳು ಅಥವಾ ಬಾಲ್ಯವಿವಾಹ ಪದ್ಧತಿ ಕಂಡು ಬಂದಲ್ಲಿ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡುವಂತೆ, ಜನರಲ್ಲಿ ಜಾಗೃತಿ ಮೂಡಿಸಿ ಎಂದು ತಿಳಿಸಿದರು. ಶಾಲೆಯಿಂದ ಹೊರಗುಳಿದ ೯೦ ಮಕ್ಕಳಲ್ಲಿ ೪೮ ಮಕ್ಕಳು ಕೇರಳ, ಆಂಧ್ರ, ಅಸ್ಸಾಂ, ಬಿಹಾರ್‌ಗೆ ವಾಪಸ್ ಹೋಗಿದ್ದಾರೆ, ೨೯ ಮಕ್ಕಳು ಶಾಲೆಗೆ ವಾಪಸ್ ಬಂದಿದ್ದಾರೆ, ೧೩ ಮಕ್ಕಳು ಶಾಲೆಗೆ ಹೋಗಲು ಇಷ್ಟವಿಲ್ಲ ಎಂದು ಹೇಳಿದ್ದಾರೆ ಎಂದು ಕಾರ್ಮಿಕ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ವಿಶ್ವ ಬಾಲಕಾರ್ಮಿಕ ವಿರೋಧಿ ದಿನದ ಪ್ರಯುಕ್ತ ಜೂನ್ ೧೨ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರು ಕೆಲಸ ನಿರ್ವಹಿಸುತ್ತಿರುವ ಸ್ಥಳಗಳಲ್ಲಿಯೇ ಒಟ್ಟಾಗಿ ಸೇರಿ ಪ್ರಮಾಣ ವಚನ ಸ್ವೀಕರಿಸುವ ಕಾರ್ಯವನ್ನು ಆಯೋಜಿಸುವಂತೆ ಜಿಲ್ಲೆಯ ಎಲ್ಲಾ ಇಲಾಖೆಯ ಮುಖ್ಯಸ್ಥರಿಗೆ ಸೂಚನೆ ನೀಡಿದರು. ಪ್ರತಿ ಗ್ರಾಮಗಳಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಜೂನ್ ೧೨ರಂದು ಬಾಲ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ಧತಿಯ ಕುರಿತು ಡಂಗೂರವನ್ನು ಸಾರಿಸುವಂತೆ ನಿರ್ದೇಶಿಸಿದರು.

ಪ್ರತಿ ಗ್ರಾಮ, ತಾಲೂಕಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಜಾಥಾ ಕಾರ್ಯಕ್ರಮವನ್ನು ಆಯೋಜಿಸುವುದು, ಜಾಥಾ ಕಾರ್ಯಕ್ರಮದಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ಧತಿ ಕುರಿತು ಘೋಷಣೆಗಳನ್ನು ಕೂಗಿಸುವುದರ ಕುರಿತು ನಿರ್ದೇಶನ ನೀಡುವುದು. ಬಾಲ ಹಾಗೂ ಕಿಶೋರ ಕಾರ್ಮಿಕ ಪ್ರಕರಣಗಳನ್ನು ಪತ್ತೆ ಹಚ್ಚಿ ದಾಖಲು ಮಾಡಿ, ಮುಖ್ಯವಾಹಿನಿಗೆ ಸೇರಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಶೇ.೭೫ಕ್ಕಿಂತ ಹೆಚ್ಚಗೆ ಅಂಕ ಪಡೆದ ಮಕ್ಕಳಿಗೆ ಕಾರ್ಯಕ್ರಮದಲ್ಲಿ ರು.೨೦೦೦ಗಳ ಪ್ರೋತ್ಸಾಹಧನವನ್ನು ನೀಡಲು ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಿದರು.

ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಕುರಿತು ಪ್ರಾಥಮಿಕ, ಪ್ರೌಢಶಾಲಾ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ಕಥಾ, ಭಾಷಣ, ಚರ್ಚಾ ಸ್ಪರ್ಧೆ, ಚಿತ್ರಕಲೆ, ರಸಪ್ರಶ್ನೆ ಕಾರ್ಯಕ್ರಮ ಮತ್ತು ಮಕ್ಕಳಿಂದ ನಾಟಕ ಪ್ರದರ್ಶನಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲೆಯಾದ್ಯಂತ ಜೂನ್ ೧೩ರಿಂದ ೩೦ರವರೆಗೆ ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣಾ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ತಿಳಿಸಿದರು. ಜೂನ್ ೧೨ ರಂದು ಹಾಸನ ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯತಿ, ಪುರಸಭೆ ಹಾಗೂ ನಗರಸಭೆ ವತಿಯಿಂದ ಕಸ ವಿಲೇವಾರಿ ವಾಹನಗಳಲ್ಲಿ ಉಚಿತವಾಗಿ ಬಾಲ ಹಾಗೂ ಕಿಶೋರ ಕಾರ್ಮಿಕ ವಿರೋಧಿ ಪದ್ಧತಿ ಕುರಿತು ಜಿಂಗಲ್ ಮೂಲಕ ಘೋಷಣೆಯನ್ನು ಕೂಗಿಸಲು ಸೂಚಿಸಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಸದಸ್ಯರಾದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಾಕ್ಷಾಯಿಣಿ ಬಿ.ಕೆ, ಲೀಲಾವತಿ, ಕೆ.ಟಿ ಜಯಶ್ರೀ, ಜಿಲ್ಲಾ ಕಾರ್ಮಿಕ ಅಧಿಕಾರಿ ಯಮುನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ