ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಲಮಟ್ಟಿ ಎತ್ತರವನ್ನು ಹೆಚ್ಚಿಸುವುದರಿಂದ ಮಹಾರಾಷ್ಟ್ರ ಭಾಗದಲ್ಲಿ ಮುಳುಗಡೆ ಪ್ರಮಾಣ ಹೆಚ್ಚಾಗುತ್ತೆ ಎಂಬ ಕಾರಣ ನೀಡುವುದು ತಪ್ಪು. ಇಂತಹ ಪ್ರಶ್ನೆಗಳಿಗೆ ತಾಂತ್ರಿಕವಾಗಿ ಸೂಕ್ತ ಉತ್ತರ ಕೊಡುವುದಕ್ಕೆ ನಮ್ಮಲ್ಲಿ ಸಮರ್ಥರಿದ್ದಾರೆ. ಇದರಿಂದ ಮಹಾರಾಷ್ಟ್ರದವರಿಗೆ ಏನು ಲಾಭ ಆಗೋದಿಲ್ಲ. ಇದು ಒಳ್ಳೆಯದಲ್ಲ. ಇದರಿಂದ ರೈತಾಪಿ ವರ್ಗಕ್ಕೆ ಒಳ್ಳೆಯದಾಗುತ್ತದೆ. ದೇಶದ ರೈತ ಎಲ್ಲೇ ಇದ್ದರೂ ಒಂದೆನೇ. ರೈತರಿಗೆ ತೊಂದರೆ ಆಗುವಂತ ಕೆಲಸವನ್ನು ಮಹಾರಾಷ್ಟ್ರದವರು ಮಾಡ್ತಾ ಇದ್ದಾರೆ ಎಂದು ತಿಮ್ಮಾಪೂರ ಹೇಳಿದರು.
ಆಲಮಟ್ಟಿ ಎತ್ತರವನ್ನು ಹೆಚ್ಚಿಸುವುದರಿಂದ ಮಹಾರಾಷ್ಟ್ರ ಭಾಗದಲ್ಲಿ ಮುಳುಗಡೆ ಪ್ರಮಾಣ ಹೆಚ್ಚಾಗುತ್ತೆ ಎಂಬ ಕಾರಣ ಮುಂದಿಟ್ಟು ಅಲ್ಲಿನವರು ತಮ್ಮ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆದಿದ್ದಾರೆ. ಮಹಾರಾಷ್ಟ್ರದಂತೆಯೇ ನಮ್ಮ ಭಾಗದಲ್ಲೂ ಪ್ರವಾಹ ಉಂಟಾಗುತ್ತದೆ. ಪ್ರವಾಹ ಉಂಟಾಗುವ ಪ್ರದೇಶದಲ್ಲಿ ಪ್ರವಾಹ ತಡೆ ಕಮಿಟಿ ಮಾಡಿದ್ದೇವೆ. ಆ ಕಮಿಟಿ ವರದಿ ಇನ್ನೂ ಬರಬೇಕಿದೆ ಎಂದರು.ಬಿಜೆಪಿಗರಿಗೆ ನ್ಯಾಯದಲ್ಲಿ ನಂಬಿಕೆ ಇಲ್ಲ:
ಮಂಗಳೂರು ಕೋಮು ಗಲಾಟೆ ಪ್ರಕರಣದಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಬಿಜೆಪಿಗರ ಆರೋಪಕ್ಕೆ ಸಚಿವ ತಿಮ್ಮಾಪೂರ ತಿರುಗೇಟು ನೀಡಿ, ಬಿಜೆಪಿಗರು ಯಾವಾಗಲೂ ಇಂತಹುದನ್ನೇ ಮಾಡುತ್ತಾ ಬಂದಿದ್ದಾರೆ. ಬಿಜೆಪಿಗರಿಗೆ ನ್ಯಾಯದಲ್ಲಿ ಯಾವುದೇ ನಂಬಿಕೆ ಇಲ್ಲ. ಸಂವಿಧಾನದಲ್ಲೂ ಕೂಡ ನಂಬಿಕೆ ಇಲ್ಲ. ಧರ್ಮದ ವಿಚಾರದಲ್ಲೂ ಬಿಜೆಪಿಗರಿಗೆ ನಂಬಿಕೆ ಇಲ್ಲ. ಬಿಜೆಪಿಯವರು ಸುಳ್ಳುಗಳನ್ನೇ ಹಬ್ಬಿಸುತ್ತಾ ಹೋಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಡೀ ಮಂಗಳೂರೇ ಹೊತ್ತಿ ಉರಿತಾ ಇದೆ. ಇದನ್ನು ಶಮನ ಮಾಡುವುದು ಬಿಟ್ಟು ಅದಕ್ಕೆ ತುಪ್ಪ ಸುರಿಯುವ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಉದ್ವಿಗ್ನತೆ ಎತ್ತಿ ಹಿಡಿಯುವಂತ ಕೆಲಸ ಮಾಡುತ್ತಿರುವ ಬಿಜೆಪಿಗರು ಎಷ್ಟು ದುರ್ಬಲರು ಎಂಬುವುದನ್ನು ಎತ್ತಿ ತೋರಿಸುತ್ತದೆ. ಕೆಟ್ಟ ವಾತಾವರಣ ನಿರ್ಮಾಣ ಮಾಡುವಂತ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಮ ಪದ ಬಳಸಿಕೊಂಡೆ ಚುನಾವಣೆ ಮಾಡುತ್ತಾರೆ. ಬೆಳಗ್ಗೆ ಎದ್ದ ತಕ್ಷಣವೇ ಮುಸ್ಲಿಮ, ಮುಸ್ಲಿಮ ಎಂದು ಧ್ಯಾನ ಮಾಡುತ್ತಾರೆ. ಮುಸ್ಲಿಮರ ಧ್ಯಾನದಲ್ಲಿ ಇವರು ಲಾಭವನ್ನು ಪಡೆದುಕೊಳ್ಳುತ್ತಾರೆ. ತಮ್ಮ ರಾಜಕೀಯ ಲಾಭಕ್ಕಾಗಿ ದ್ವೇಷ ಹುಟ್ಟಿಸುವಂತಹ ಕುತಂತ್ರವಾದಿಗಳಿವರು. ಬಿಜೆಪಿಗರಿಗೆ ಶಾಂತಿನೂ ಬೇಡ ಧರ್ಮನೂ ಬೇಡ. ಹಿಂದೂ ಧರ್ಮದಲ್ಲಿರುವಂತ ಅನೇಕ ವಿಚಾರಗಳು ಬಿಜೆಪಿಗರಿಗೆ ಗೊತ್ತಿಲ್ಲ ಎಂದರು.
ಆರ್‌ಸಿಬಿ ಗೆದ್ದಿದ್ದಕ್ಕೆ ಖುಷಿಯಾಯಿತು:ಆರ್‌ಸಿಬಿ ಐಪಿಎಲ್ ನೂತನ ಚಾಂಪಿಯನ್ ಆಗಿರುವ ಕುರಿತು ಮಾತನಾಡಿದ ಸಚಿವರು, ಆರ್‌ಸಿಬಿ ತಂಡ ಗೆದ್ದಿದ್ದಕ್ಕೆ ಬಹಳ ಖುಷಿಯಾಯಿತು. 17 ವರ್ಷಗಳ ನಂತರ ಚಾಂಪಿಯನ್ ಆಗಿದ್ದು ಒಂದು ಹೆಮ್ಮೆ ನಮಗೆ, ನಿನ್ನೆ ಕರ್ನಾಟಕದ ತುಂಬೆಲ್ಲ ಸಂಭ್ರಮ ಮಾಡಿದ್ದಾರೆ. ಅಭಿಮಾನಿಗಳ ಜೊತೆಗೆ ನಾನು ಕೂಡ ಸಂಭ್ರಮಾಚರಣೆ ಮಾಡಿದ್ದೇನೆ ಎಂದರು. ಆರ್‌ಸಿಬಿ ಚಾಂಪಿಯನ್ ಆದ ಬೆನ್ನಲ್ಲಿ ಮದ್ಯದ ಮಾರಾಟದಲ್ಲಿ ದಾಖಲೆ ಆಗಿದೆ ಎಂಬ ಪ್ರಶ್ನೆಗೆ ಮಾರಾಟದ ಬಗ್ಗೆ ಆಮೇಲೆ ಅಂಕಿ ಅಂಶವನ್ನು ತೆಗೆದುಕೊಂಡು ಮಾಹಿತಿ ಕೊಡುತ್ತೇನೆ ಎಂದು ತಿಮ್ಮಾಪೂರ ತಿಳಿಸಿದರು.