ಪ್ರತಿಯೊಬ್ಬರ ಮೇಲೆ ಸಮಾಜದ ಋಣ ಇದೆ: ಸಂಕನೂರ

KannadaprabhaNewsNetwork |  
Published : Jun 05, 2025, 01:21 AM IST
ಗದಗದಲ್ಲಿ ನಡೆದ ಸಾಧಕರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಪ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿದರು. | Kannada Prabha

ಸಾರಾಂಶ

ಸಾಹಿತಿ, ಶಿಕ್ಷಕ ಹೊಳೆಆಲೂರಿನ ಎಸ್.ಕೆ. ಆಡಿನ ಅವರು ಮತ್ತಷ್ಟು ಸಮಾಜ ಸೇವೆ ಮಾಡುವ ಉದ್ದೇಶದಿಂದ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ಆರಂಭಿಸಿರುವುದು ಅಭಿನಂದನೀಯ

ಗದಗ: ಪ್ರತಿಯೊಬ್ಬರ ಮೇಲು ಸಮಾಜದ ಋಣ ಇರುತ್ತದೆ. ಹೀಗಾಗಿ ಹೆತ್ತವರ, ಶಿಕ್ಷಕರ, ಸಮಾಜದ ಋಣ ಮರೆಯಬಾರದು ಎಂದು ವಿಪ ಶಾಸಕ ಎಸ್.ವಿ. ಸಂಕನೂರ ಹೇಳಿದರು.

ನಗರದ ರೋಟರಿ ಸರ್ಕಲ್ ಹತ್ತಿರದ ಶ್ರೀ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ಹೊಳೆಆಲೂರಿನ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆಯ ಉದ್ಘಾಟನೆ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸಾಧಕರತ್ನ ಪ್ರಶಸ್ತಿ ಪ್ರದಾನ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ಕನ್ನಡ ಕುವರ-ಕುವರಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

ಸಾಹಿತಿ, ಶಿಕ್ಷಕ ಹೊಳೆಆಲೂರಿನ ಎಸ್.ಕೆ. ಆಡಿನ ಅವರು ಮತ್ತಷ್ಟು ಸಮಾಜ ಸೇವೆ ಮಾಡುವ ಉದ್ದೇಶದಿಂದ ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ಆರಂಭಿಸಿರುವುದು ಅಭಿನಂದನೀಯ. ಸಂಸ್ಥೆಗಳನ್ನು ಆರಂಭಿಸುವ ಜತೆಗೆ ಸಮಾಜಕ್ಕೆ ನೀಡುವ ಕೆಲಸಗಳ ಬಗ್ಗೆ ಮುಂದಿನ ವರ್ಷದ ಕ್ರಿಯಾಯೋಜನೆಯನ್ನೂ ತಯಾರಿಸಿಕೊಳ್ಳಬೇಕು ಎಂದರು.

ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಈ ಸಂಸ್ಥೆಯು ಸಮಾಜಮುಖಿ ಕಾರ್ಯಗಳ ಮೂಲಕವೇ ಸಮಾಜಕ್ಕೆ ತೆರೆದುಕೊಂಡಿದೆ. ಸಾಧಕರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ಪುರಸ್ಕಾರ, ಕವಿಗೋಷ್ಠಿ ಆಯೋಜನೆ ಮೂಲಕ ಸಂಸ್ಥೆಯು ಉತ್ತಮ ಆರಂಭ ಮಾಡಿದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಶಿಕ್ಷರಾಗಿರುವ ಎಸ್.ಕೆ. ಆಡಿನ ಅವರು ಸಾಹಿತ್ಯಿಕವಾಗಿಯೂ ಆಸಕ್ತಿ ಹೊಂದಿದ್ದಾರೆ. ಈ ಉದ್ದೇಶ ಇಟ್ಟುಕೊಂಡು ಸ್ಥಾಪಿಸಿರುವ ಸಂಸ್ಥೆ ಸಮಾಜದಲ್ಲಿ ಎಲೆ ಮರೆಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ, ಸಮಾಜಕ್ಕೆ ಪರಿಚಯಿಸುವ ಕೆಲಸ ನಿರಂತರವಾಗಿರಲಿ ಎಂದರು.

ಕಸಾಪ ಉತ್ತರ ಕನ್ನಡ ಜಿಲ್ಲಾ ಕಾರ್ಯದರ್ಶಿ ಗಣೇಶ ಬಿಷ್ಟಣ್ಣವರ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಭೈರನಹಟ್ಟಿ ದೊರೆಸ್ವಾಮಿಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ಎಸ್. ಆಡಿನ ಜನಸೇವಾ ಸಂಸ್ಥೆ ಅಧ್ಯಕ್ಷೆ ಶೋಭಾ ಎಸ್. ಆಡಿನ ಅಧ್ಯಕ್ಷತೆ ವಹಿಸಿದ್ದರು. ಗದಗ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡವಿನಮನಿ, ಗದಗನ ಅಶ್ವಿನಿ ಪ್ರಕಾಶನದ ಅಧ್ಯಕ್ಷೆ ವಿ.ವಿ. ಹಿರೇಮಠ, ನಿರ್ಮಲಾ ತೆರೆವಾಡೆ, ಡಾ. ಪ್ರವೀಣ ಕರೆಯಪ್ಪಣ್ಣವರ, ವಿ.ಎಂ. ವಸ್ತ್ರದ, ಈರಣ್ಣ ಮಾದರ, ಬಸವರಾಜ ನೆಲಜರಿ, ಮರುಳಸಿದ್ದಪ್ಪ ದೊಡ್ಡಮನಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಬಸವರಾಜ ಕೊರ್ಲಳ್ಳಿ, ಸುನೀಲ ಯಲಿಗಾರ ಇದ್ದರು. ಶಿಕ್ಷಕ, ಸಾಹಿತಿ ಎಸ್.ಕೆ. ಆಡಿನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಉಡತೆ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ