ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯಲ್ಲಿ ನಡೆಯುತ್ತಿರುವ ನಿರಂತರ ನೀರು ಪೂರೈಕೆ ಯೋಜನೆ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ವೇಳೆ ಮಣ್ಣು ಕುಸಿದು ಮೃತಪಟ್ಟ ಚೇತನ ಜಾಧವ ಅಂತ್ಯಕ್ರಿಯೆ ಬುಧವಾರ ನಡೆಯಿತು. ಈ ನಡುವೆ ಗಾಯಗೊಂಡಿರುವ ಇನ್ನೊಬ್ಬ ಕಾರ್ಮಿಕ ಚೇತರಿಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೇಟಿ ಮಾಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ನಡುವೆ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಬುಧವಾರ ಮೃತ ಚೇತನ ಜಾಧವನ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಮಂಗಳವಾರ ಸಂಜೆ ಘಟನೆ ನಡೆದಿದ್ದು, ಚರಂಡಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ ಹಾಗೂ ಮೌಲಾಸಾಬ್ ಎಂಬುವರ ಮೇಲೆ 8 ಅಡಿ ಎತ್ತರದಿಂದ ಮಣ್ಣು ಬಿದ್ದು ಈ ಘಟನೆ ನಡೆದಿದೆ. ನಿಜಕ್ಕೂ ಬೇಸರ ಸಂಗತಿ ಎಂದರು.ಸುರಕ್ಷತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಮಾಡಿರುವ ಕಾರಣಕ್ಕೆ ಅವಘಡ ನಡೆದಿದೆ. ಗುತ್ತಿಗೆದಾರ ಕಂಪನಿ ಸುರಕ್ಷತಾ ಕ್ರಮ ಕೈಗೊಳ್ಳಬೇಕಿತ್ತು. ಆಗಿರುವ ಘಟನೆ ಬಗ್ಗೆ ಸಮರ್ಥನೆ ಮಾಡಲ್ಲ. ನಿರ್ಲಕ್ಷ್ಯ ಎಲ್ಲ ಕಡೆ ನಡೆಯುತ್ತದೆ. ಇಂಥ ಕಾಮಗಾರಿ ನಡೆಯುವ ಸಮಯದಲ್ಲಿ ಗುತ್ತಿಗೆದಾರರು, ಕೆಲಸ ಮಾಡುವ ಕಾರ್ಮಿಕರು ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಆ ಸ್ಥಳ ಸುರಕ್ಷತೆ ಇಲ್ಲದಿದ್ದರೆ ಅಲ್ಲಿ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.
ಸರ್ಕಾರದಿಂದ ಮೃತ ಕುಟುಂಬಸ್ಥರಿಗೆ ಪರಿಹಾರ ಕೊಡಿಸಲಾಗುವುದು. ಹಣ ನೀಡುವುದರಿಂದ ಮೃತ ಪಟ್ಟಿರುವ ವ್ಯಕ್ತಿ ಮರಳಿ ಬರಲ್ಲ. ದೊಡ್ಡ ಕಾಮಗಾರಿ ಪಡೆದಿರುವ ಕಂಪನಿಗಳು ಉಪಗುತ್ತಿಗೆದಾರರಿಗೆ ನೀಡಿರುತ್ತಾರೆ. ಇಲ್ಲಿ ಕಾರ್ಮಿಕರು ಸುರಕ್ಷತೆಯಿಂದ ಕೆಲಸ ಮಾಡಬೇಕು. ಗುತ್ತಿಗೆದಾರರು ಸಹ ಮುಂದೆ ನಿರ್ಲಕ್ಷ್ಯ ಮಾಡಬಾರದು ಎಂದು ತಿಳಿಸಿದರು.ಜಿಲ್ಲಾಧಿಕಾರಿ ದಿವ್ಯಪ್ರಭು, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ರೂಪಾ ಶೆಟ್ಟಿ ಸೇರಿದಂತೆ ಅನೇಕರಿದ್ದರು.