ಕನ್ನಡಪ್ರಭ ವಾರ್ತೆ ಹಾಸನ
ನಗರದ ಬಿಜಿವಿಎಸ್ ಕಚೇರಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯ ಹಾಸನ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ‘ಆಗಸದ ಅಚ್ಚರಿಗಳು- ಖಗೋಳ ವಿಜ್ಞಾನಿಯೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಜ್ಞಾನವು ಪ್ರಯೋಗಶಾಲೆ ಹಾಗೂ ಸಂಶೋಧನಾ ಪ್ರಬಂಧಗಳಿಗೆ ಮಾತ್ರ ಸೀಮಿತವಾಗದೇ, ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಲುಪಬೇಕು ಎಂದು ಹೇಳಿದರು. ಈ ನಿಟ್ಟಿನಲ್ಲಿ ಕನ್ನಡ ವಿಜ್ಞಾನ ಬರವಣಿಗೆಯ ಪ್ರಮಾಣ ಹೆಚ್ಚಾಗಬೇಕಿದ್ದು, ಕನ್ನಡ ಸಾಹಿತ್ಯ ಪರಿಷತ್ತು, ವಿಜ್ಞಾನಿಗಳು ಹಾಗೂ ವಿಜ್ಞಾನಾಸಕ್ತರ ಜವಾಬ್ದಾರಿ ದೊಡ್ಡದಿದೆ. ಕನ್ನಡದಲ್ಲಿ ವಿಜ್ಞಾನ ಬರವಣಿಗೆಯಲ್ಲಿ ತಪ್ಪು ಪದಬಳಕೆ ಹಾಗೂ ಅತಿರಂಜಿತ ಅನುವಾದಗಳು ವಿಜ್ಞಾನವನ್ನು ಅಂಧಶ್ರದ್ಧೆಯತ್ತ ಕರೆದೊಯ್ಯುವ ಅಪಾಯವಿದೆ ಎಂದು ಎಚ್ಚರಿಸಿದ ಅವರು, ‘ಗಾಡ್ ಪಾರ್ಟಿಕಲ್’ ಎಂಬ ಪದವನ್ನು ‘ದೇವಕಣ’ ಎಂದು ಬಳಸುವುದು ವೈಜ್ಞಾನಿಕವಾಗಿ ಸರಿಯಲ್ಲ ಎಂದರು.
ಮಾಧ್ಯಮಗಳು ಶೀರ್ಷಿಕೆ ಹಾಗೂ ರೋಚಕತೆಯ ಹಿಂದೆ ಹೋಗದೆ ವಿಷಯದ ವೈಜ್ಞಾನಿಕ ಸ್ಪಷ್ಟತೆಯನ್ನು ಕಾಪಾಡಬೇಕು ಎಂದು ಸಲಹೆ ನೀಡಿ, ಪಂಚಾಂಗ, ಅಧಿಕ ವರ್ಷ, ನಕ್ಷತ್ರಗಳು ಅಂಧನಂಬಿಕೆಗಳಲ್ಲ, ಅವು ಸೂರ್ಯ, ಚಂದ್ರ, ನಕ್ಷತ್ರಗಳ ಚಲನೆಯನ್ನು ಆಧರಿಸಿದ ವೈಜ್ಞಾನಿಕ ಕಾಲಗಣನಾ ವ್ಯವಸ್ಥೆಗಳೆಂದು ವಿವರಿಸಿದರು. ಯುಎಫ್‌ಓ, ಏಲಿಯನ್, ಧೂಮಕೇತುಗಳ ಕುರಿತ ಚರ್ಚೆಗಳಲ್ಲಿ ಊಹೆ ಮತ್ತು ವಿಜ್ಞಾನ ನಡುವಿನ ಗಡಿ ಸ್ಪಷ್ಟವಾಗಬೇಕು. ಯಾರು ಹೇಳಿದರು ಎಂಬುದಕ್ಕಿಂತ ಯಾವ ಸಾಕ್ಷ್ಯವಿದೆ ಎಂಬುದೇ ವಿಜ್ಞಾನದ ಅಳತೆ ಎಂದು ತಿಳಿಸಿದರು.ನಕ್ಷತ್ರಗಳಲ್ಲಿ ಜೀವ ಸಾಧ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವಿಜ್ಞಾನವು ಕಲ್ಪನೆಯಲ್ಲ, ಸಾಕ್ಷ್ಯ ಮತ್ತು ಕ್ರಮಬದ್ಧ ಪರಿಶೀಲನೆಯ ಮೂಲಕ ಉತ್ತರ ಹುಡುಕುತ್ತದೆ ಎಂದು ವಿವರಿಸಿದರು. ದೀರ್ಘಕಾಲ ಸ್ಥಿರವಾಗಿ ಬೆಳಗುವ ನಕ್ಷತ್ರಗಳು, ಅವುಗಳ ಸುತ್ತಲಿನ ಗ್ರಹಗಳು, ವಾತಾವರಣದ ಅನಿಲಗಳ ಸ್ಪೆಕ್ಟ್ರಮ್ ವಿಶ್ಲೇಷಣೆ ಮೂಲಕ ಜೀವದ ಸಾಧ್ಯತೆ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.
ಸೊನ್ನೆಯನ್ನು ಆರ್ಯಭಟರು ಕಂಡುಹಿಡಿದರು ಎಂಬ ಸಾಮಾನ್ಯ ನಂಬಿಕೆ ಸಂಪೂರ್ಣ ಸತ್ಯವಲ್ಲ. ಆರ್ಯಭಟರಿಗಿಂತಲೂ ಮುಂಚೆಯೇ ಸೊನ್ನೆಯ ಬಳಕೆಯ ಸಾಕ್ಷ್ಯಗಳು ದೊರಕಿವೆ. ಆದ್ದರಿಂದ ವಿಜ್ಞಾನ ಇತಿಹಾಸವನ್ನು ಸರಳವಾಗಿ, ಸತ್ಯಸಹಿತವಾಗಿ ಮಕ್ಕಳಿಗೆ ತಿಳಿಸಬೇಕೆಂದು ಹೇಳಿದರು.ಶಾಲಾ ಹಂತದಲ್ಲಿ ವಿಜ್ಞಾನ ಕಲಿಕೆಗೆ ಸರಳತೆ, ಸತ್ಯ ಮತ್ತು ಪ್ರಶ್ನಿಸುವ ಮನೋಭಾವ ಈ ಮೂರು ಅಂಶಗಳು ಅನಿವಾರ್ಯ. ಇಲ್ಲದಿದ್ದರೆ ವಿಜ್ಞಾನ ಪಾಠಗಳು ಮಕ್ಕಳಲ್ಲಿ ಭಯ ಹುಟ್ಟಿಸುವ ವಿಷಯವಾಗುತ್ತದೆ ಎಂದು ಡಾ. ಶೈಲಜಾ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಿಜಿವಿಎಸ್ ಕಾರ್ಯಕರ್ತ ಅಹಮದ್ ಹಗರೆ ಸ್ವಾಗತಿಸಿ, ಜಿಲ್ಲಾಧ್ಯಕ್ಷೆ ಸಿ. ಸೌಭಾಗ್ಯ ವಂದಿಸಿದರು. ಸಂವಾದದಲ್ಲಿ ಶಿಕ್ಷಣ ತಜ್ಞರು, ವಿಜ್ಞಾನ ಬರಹಗಾರರು, ಶಿಕ್ಷಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿ ಪ್ರಶ್ನೋತ್ತರ ಸಂವಾದ ನಡೆಸಿದರು.