- ನಂದಿಗುಡಿ, ಕುಂಬಳೂರು, ಜಿಗಳಿ, ಬೆಳ್ಳೂಡಿಯಲ್ಲಿ ಅಭಿವೃದ್ಧಿ ಪರಿಶೀಲನೆ
ಕನ್ನಡಪ್ರಭ ವಾರ್ತೆ ಹರಿಹರ/ ಮಲೇಬೆನ್ನೂರು
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ “ಬೆಳಗಿನ ನಡೆ – ಗ್ರಾಮಗಳ ಕಡೆ” ಕಾರ್ಯಕ್ರಮ ಅಂಗವಾಗಿ ಮಂಗಳವಾರ ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿಯನ್ನು ಸಮಗ್ರವಾಗಿ ಪರಿಶೀಲಿಸಿದರು.ತಾಲೂಕಿನ ಕುಂಬಳೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು, ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಗ್ರಾಮ ಗ್ರಂಥಾಲಯಕ್ಕೆ ಭೇಟಿ ನೀಡಿ, ಗ್ರಂಥಾಲಯವನ್ನು ಆಕರ್ಷಕವಾಗಿಸುವ ಉದ್ದೇಶದಿಂದ ಬಣ್ಣ ಬರೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಳೇ ಗ್ರಾ ಪಂ ಕಟ್ಟಡ ತೆರವುಗೊಳಿಸಿ ಅಂಗನವಾಡಿ ಕಟ್ಟಡ ನಿರ್ಮಿಸಲು, ಹೆಚ್ಚುವರಿ ಸಭಾಂಗಣದಲ್ಲಿ ಡಿಜಿಟಲ್ ಗ್ರಂಥಾಲಯ ಸ್ಥಳಾಂತರಕ್ಕೆ ಸೂಚಿಸಿದರು.
ಜಿಗಳಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಹಾಲು ಉತ್ಪಾದಕರ ಘಟಕ ವೀಕ್ಷಿಸಿದರು. ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಚಿಣ್ಣರಿಗೆ ಮುದ ನೀಡುವಂತೆ ಮಕ್ಕಳಸ್ನೇಹಿ ಬಣ್ಣ ಬರೆಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರು.
ಅಂತಿಮವಾಗಿ ಬೆಳ್ಳೂಡಿ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಡೆಯುತ್ತಿರುವ ಕಾಲುವೆ ಹೂಳೆತ್ತುವ ಕಾಮಗಾರಿ ವೀಕ್ಷಿಸಿದರು. ಕಾಮಗಾರಿಯಲ್ಲಿ ತೊಡಗಿರುವ ಕೂಲಿಕಾರರೊಂದಿಗೆ ಸ್ವತಃ ಪಾಲ್ಗೊಂಡು, ಕಾಮಗಾರಿ ಪ್ರಗತಿ ಕುರಿತು ಮಾಹಿತಿ ಪಡೆದರು. ಜೊತೆಗೆ ಕೂಲಿಕಾರರ ಆರೋಗ್ಯದ ಕಾಳಜಿ ಮತ್ತು ಸುರಕ್ಷತಾ ಕ್ರಮಗಳ ಕುರಿತು ಅರಿವು ಮೂಡಿಸಿದರು.
- - -
ಮಲೇಬೆನ್ನೂರು ಸಮೀಪದ ನಂದಿಗುಡಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ದಾಸ್ತಾನು ಮಾಡಿದ ತರಕಾರಿಗಳನ್ನು ವೀಕ್ಷಿಸಿದ ಸಿಇಒ ಅವರು ಕ್ರಿಮಿ, ಕೀಟಗಳು, ಜಿರಲೆ- ಹಲ್ಲಿಗಳಿಂದ ಆಹಾರ ಪದಾರ್ಥ, ತರಕಾರಿಗಳ ರಕ್ಷಣೆ ಮಾಡಲು ರ್‍ಯಾಕರ್ ಮೇಲೆ ಸಂಗ್ರಹಿಸಲು ಸೂಚಿಸಿದರು.
ಶಾಲೆಯ ವಿದ್ಯಾರ್ಥಿಗಳು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕವನ್ನು ಓದುವ ಕ್ರಮ ಪರಿಶೀಲಿಸಿದರು. ಮಕ್ಕಳಿಗೆ ನೀತಿ ಪಾಠಗಳ ಹೇಳಿದರು. ಮಕ್ಕಳು ಮೊರಾರ್ಜಿ ಶಾಲೆ ವಸತಿ ನಿಲಯದಲ್ಲಿ ಬಿಸಿನೀರು ಬರೋದಿಲ್ಲ, ಶಿಕ್ಷಕರು ಬೈತಾರೆ, ಹೊಡಿತಾರೆ, ಈ ತಿಂಗಳು ಆರೋಗ್ಯ ಪರೀಕ್ಷೆಯೇ ನಡೆಸಿಲ್ಲ ಎಂದು ದೂರಿದರು.
ಎಕ್ಕೆಗೊಂದಿ ಗ್ರಾಮದ ೧ ಕಿಮೀ ದೂರದ ನರೇಗಾ ಯೋಜನೆಯ ಚರಂಡಿ ಕಾಮಗಾರಿಯನ್ನು ವೀಕ್ಷಣೆ ಮಾಡಿ ಕೃಷಿ ಕಾರ್ಮಿಕರ ಜತೆ ಚರ್ಚಿಸಿದರು. ಸ್ವತಃ ಸಲಿಕೆ ಹಿಡಿದು ಚರಂಡಿಯಲ್ಲಿನ ಮಣ್ಣು ತೆಗೆದು ಕೆಲಸ ನಿರ್ವಹಿಸಲು ಸಲಹೆ-ಸೂಚನೆ ನೀಡಿದರು.
- - --23HRR.03:
ಹರಿಹರ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಬೇಟಿ ನೀಡಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಸ್ಥಿತಿ ಪರಿಶೀಲಿಸಿದರು.