ಕನ್ನಡಪ್ರಭ ವಾರ್ತೆ ಕಲಬುರಗಿ
ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆ ಹಾಗೂ ಚುನಾವಣೆ ಸಾಕ್ಷರತಾ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳ ಅಣಕು ವಿಧಾನಸಭಾ ಅಧಿವೇಶನ ನೋಡುಗರ ಗಮನ ಸೆಳೆಯಿತು.
ಒಂದು ವಾರದ ಪೂರ್ವ ತಯಾರಿಯಲ್ಲಿ ಸಮಾಜವಿಜ್ಞಾನ ಶಿಕ್ಷಕ ಸಿದ್ದಲಿಂಗ ಬಾಳಿ ಆಯ್ದ ಮಕ್ಕಳಿಗೆ 9ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ ಬರುವ ವಿಧಾನಸಭೆಯ ಕಲಿಕಾoಶವನ್ನು ಒಂದು ಚಟುವಟಿಕೆ ರೂಪದಲ್ಲಿ ಅಣಕು ಅಧಿವೇಶನ ಮಾಡುವ ಮುಲಕ ಮಕ್ಕಳಿಗೆ ವಿಷಯವಸ್ತುವನ್ನು ಮನದಟ್ಟು ಮಾಡುವ ಜೊತೆಗೆ ಅವರ ಪ್ರತಿಭೆಯನ್ನು ಹೊರತರುವ ಪ್ರಯತ್ನ ಮಾಡಿದರು.ಅಧಿವೇಶನದಲ್ಲಿ ಭಾಗವಹಿಸಿದ 45 ಮಕ್ಕಳು ಸಭಾಪತಿಯಾಗಿ, ಮುಖ್ಯಮಂತ್ರಿಯಾಗಿ, ಸಚಿವರಾಗಿ, ಶಾಸಕರಾಗಿ ಪ್ರಸ್ತುತ ರಾಜ್ಯದಲ್ಲಿನ ವಿದ್ಯಮಾನಗಳ ಕುರಿತು ವಾದ ಪ್ರತಿವಾದ ಮಾಡಿದರು. ಮಕ್ಕಳ ನಿರರ್ಗಳ ಮಾತುಗಳು ಅವರ ವೇಷಭೂಷಣ, ಹಾವಭಾವ ನೋಡುಗರನ್ನು ಹುಬ್ಬರಿಸುವಂತೆ ಮಾಡಿತು.
ಅಧಿವೇಶನವನ್ನು ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಡoಗಿ ಸಸಿಗೆ ನೀರೇರೆದು ಉದ್ಘಾಟನೆ ಮಾಡಿ ಇಂತಹ ಪಠ್ಯದ ಕಲಿಕಾoಶಗಳನ್ನು ಚಟುವಟಿಕೆಗಳ ಮುಲಕ ಮಾಡಿಸಿದಾಗ ಕಲಿಕೆ ಮಕ್ಕಳಲ್ಲಿ ಶಾಶ್ವತವಾಗಿ ಮನದಟ್ಟಾಗುತ್ತದೆ. ಮಕ್ಕಳಲ್ಲಿ ಪ್ರತಿಭೆ ಇದೆ. ಕ್ರಿಯಾಶೀಲ ಶಿಕ್ಷಕರಿಂದ ಮಾತ್ರ ಇಂತಹ ಮಕ್ಕಳ ಪ್ರತಿಭೆ ಅನಾವರಣವಾಗಲು ಸಾಧ್ಯವೆಂದರು.ಸರಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಧರ್ಮರಾಜ ಜವಳಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಹೂಗಾರ, ಬಿ. ಆರ್. ಪಿ ಆದಪ್ಪ ಸಜ್ಜನ್ ಅವರು ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಪ್ರಾಚಾರ್ಯ ಕಾಂತಪ್ಪ ಬಡಿಗೇರ್, ಮುಖ್ಯಗುರು ವಿದ್ಯಾಧರ ಖಂಡಾಳ ಉಪಸ್ಥಿತರಿದ್ದರು. ಸಭಾತಿಯಾಗಿ ಕಾವ್ಯ, ಮುಖ್ಯಮಂತ್ರಿಯಾಗಿ ಅಪೂರ್ವ ಹಾಗೂ ವಿರೋಧಕ್ಷದ ನಾಯಕನಾಗಿ ಸುನೀಲ್ ಸೇರಿದಂತೆ ಸಚಿವರಾಗಿ, ಶಾಸಕರಾಗಿ ಮಕ್ಕಳು ಉತ್ತಮ ಪ್ರದರ್ಶನ ನೀಡಿ ಶಿಕ್ಷಕರ ಮೆಚ್ಚುಗೆ ಗಳಿಸಿದರು. ಈ ಸಂದರ್ಭದಲ್ಲಿ ಪ್ರೌಢ ವಿಭಾಗದ ಶಿಕ್ಷಕರು ಮಕ್ಕಳು ಪಾಲಕರು ಉಪಸ್ಥಿತರಿದ್ದರು. ಉತ್ತಮ ಪ್ರದರ್ಶನ ತೋರಿದ ಅಪೂರ್ವ, ಸುನೀಲ್ ಹಾಗೂ ಸೌಪರ್ಣಿಕಗೆ ನಗದು ಬಹುಮಾನ ನೀಡಲಾಯಿತು. ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.
ಕಾವ್ಯ (ಸಭಾಪತಿ ): ಸಭಾಪತಿ ಪಾತ್ರ ನನಗೆ ಹೆಚ್ಚು ಕಲಿಯಲು ಅವಕಾಶ ಮಾಡಿಕೊಟ್ಟಿದೆ. ನಮ್ಮ ಶಿಕ್ಷಕರು ಉತ್ತಮ ಅವಕಾಶ ನೀಡಿದ್ದರಿಂದ ಇಂತಹ ಪಾತ್ರ ಮಾಡಲು ಸಾಧ್ಯವಾಯಿತು. ಇದರಿಂದ ನಮ್ಮಲ್ಲಿ ಧೈರ್ಯ, ಆತ್ಮವಿಶ್ವಾಸ ಹೆಚ್ಚಾಗಿದೆ.ಸಿದ್ದಲಿಂಗ ಬಾಳಿ ( ಶಿಕ್ಷಕ ) : ಮಕ್ಕಳಲ್ಲಿ ಪ್ರತಿಭೆ ಇದೆ. ಆದರೆ ಶಿಕ್ಷಕರು ಪಠ್ಯದ ಕಲಿಕಾoಶಗಳನ್ನು ಮಕ್ಕಳಿಂದ ಚಟುವಟಿಕೆ ರೂಪದಲ್ಲಿ ಮಾಡಿಸುವ ಮೂಲಕ ಮಕ್ಕಳನ್ನು ಕ್ರಿಯಾಶೀಲಗೊಳಿಸಬೇಕು. ಆಡಳಿತ ಮಂಡಳಿ, ಶಿಕ್ಷಕರ ಸಹಕಾರದಿಂದ ಇದೆಲ್ಲವೂ ಸಾಧ್ಯವಾಗಿದೆ.