ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್‌ಗೆ ವರಿಷ್ಠರಿಗೆ ಸಂದೇಶ ರವಾನೆ । ಅಭಿಮಾನಿ, ಕಾರ್ಯಕರ್ತರಿಂದ ಒಕ್ಕೊರಲ ಆಗ್ರಹ
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಅವರು ಅಭಿಮಾನಿಗಳು ಮತ್ತು ಕಾರ್ಯಕರ್ತರ ಸಭೆ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದಾರೆ. ಇದರೊಂದಿಗೆ ತಮ್ಮ ಹಿರಿತನ, ಜನಬೆಂಬಲವನ್ನು ಪರಿಗಣಿಸಿ ತಮಗೇ ಟಿಕೆಟ್ ನೀಡುವಂತೆ ವರಿಷ್ಠರಿಗೆ ಸಂದೇಶ ರವಾನಿಸಿದ್ದಾರೆ.
ನಗರದ ತಾವರೆಗೆರೆ ಬಡಾವಣೆಯ ಚೀರನಹಳ್ಳಿ ರಸ್ತೆಯಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರ ಬೃಹತ್ ಸಭೆ ಆಯೋಜಿಸಿದ್ದರು. ಈ ಸಭೆಗೆ ವಿವಿಧ ಕ್ಷೇತ್ರಗಳ ಬಿಜೆಪಿ ಮುಖಂಡರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು. ಅವರೆಲ್ಲರೂ ಡಾ.ಸಿದ್ದರಾಮಯ್ಯ ಅವರಿಗೆ ಪಕ್ಷ ಟಿಕೆಟ್ ನೀಡಿದರೆ ಅವರ ಬೆಂಬಲಕ್ಕೆ ನಿಂತು ಒಮ್ಮತದಿಂದ ಗೆಲುವಿಗೆ ಶ್ರಮಿಸುವುದಾಗಿ ಸಂಕಲ್ಪ ಮಾಡಿದರು.೨೦೧೮ರ ಲೋಕಸಭೆ ಉಪ ಚುನಾವಣೆಯಲ್ಲಿ ೨.೪೪ ಲಕ್ಷ ಮತಗಳನ್ನು ಗಳಿಸಿದ್ದ ಡಾ.ಸಿದ್ದರಾಮಯ್ಯನವರು ಮೊದಲ ಬಾರಿಗೆ ಜಿಲ್ಲೆಯೊಳಗೆ ಬಿಜೆಪಿ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟಿದ್ದರು. ಬಿಜೆಪಿ ಹಿಂದೆಂದಿಗಿಂತಲೂ ಈಗ ಬಲವರ್ಧನೆಗೊಂಡಿದೆ. ಶೇಕಡಾವಾರು ಮತದಾನದ ಪ್ರಮಾಣ ಹೆಚ್ಚಿರುವುದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿದೆ. ಹಾಗಾಗಿ ಸ್ಥಳೀಯ ಹಾಗೂ ಸಮರ್ಥ ಅಭ್ಯರ್ಥಿಯಾಗಿರುವ ಡಾ.ಸಿದ್ದರಾಮಯ್ಯನವರಿಗೆ ಟಿಕೆಟ್ ನೀಡುವಂತೆ ಹಲವು ಮುಖಂಡರು ಆಗ್ರಹಿಸಿದರು.
ಶ್ರೀರಂಗಪಟ್ಟಣ ಕ್ಷೇತ್ರದ ಮುಖಂಡ ಎಸ್.ಸಚ್ಚಿದಾನಂದ ಮಾತನಾಡಿ, ಸಿದ್ದರಾಮಯ್ಯನವರು ಒಬ್ಬ ತ್ಯಾಗಿ, ಲೋಕಸಭಾ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದಿದ್ದರೂ ಅಧಿಕಾರಕ್ಕೆ ಆಸೆಪಡದೆ ಕರ್ಣನಂತೆ ಸುಮಲತಾ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟರು. ನಾವೆಲ್ಲರೂ ಸಿದ್ದರಾಮಯ್ಯನವರ ಕೈ ಬಲಪಡಿಸಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ತಾಳ್ಮೆ, ಜಾಣ್ಮೆ ಅವರಲ್ಲಿದೆ. ಅವರನ್ನು ಎಂಎಲ್ಸಿ ಮಾಡುವಿರೋ, ರಾಜ್ಯಸಭೆಗೆ ಕಳಿಸುವಿರೋ ಗೊತ್ತಿಲ್ಲ. ಲೋಕಸಭೆ ಟಿಕೆಟ್ ಕೊಟ್ಟರೆ ನಾವೆಲ್ಲರೂ ಅವರ ಬೆನ್ನಿಗೆ ನಿಂತು ಗೆಲ್ಲಿಸುತ್ತೇವೆಂದು ಅಭಯ ನೀಡಿದರು.
ಕೆ.ಆರ್.ಪೇಟೆ ಮುಖಂಡ ಶೀಳನೆರೆ ಅಂಬರೀಶ್ ಮಾತನಾಡಿ, ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆ ಇರಲಿ. ಆದರೆ, ಅಭ್ಯರ್ಥಿ ಮಾತ್ರ ನಮ್ಮ ಪಕ್ಷದವರು ಇರಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿ ಉಳಿಸಬೇಕು ಎಂದರು.
------