ಬೆಂಗಳೂರು : ರಾಜ್ಯಾದ್ಯಂತ ಮಳೆ ಕೊರತೆಯಿಂದ ಜಲ ವಿದ್ಯುತ್ ಉತ್ಪಾದನೆ ಕುಂಠಿತವಾಗಿದ್ದು, ಇಂಧನ ಇಲಾಖೆ ವಿದ್ಯುತ್‌ಗಾಗಿ ಉಷ್ಣ ವಿದ್ಯುತ್‌ ಸ್ಥಾವರಗಳ ಮೊರೆ ಹೋಗಿದೆ. ಪರಿಣಾಮ ಜುಲೈ ತಿಂಗಳಲ್ಲಿ 84.34 ದಶಲಕ್ಷ ಯುನಿಟ್‌ ಉಷ್ಣ ವಿದ್ಯುತ್‌ ಸ್ಥಾವರಗಳಿಂದಲೇ ಉತ್ಪಾದನೆಯಾಗಿದೆ.

ರಾಜ್ಯದ ವಿದ್ಯುತ್‌ ಸ್ಥಾವರಗಳಿಂದ 4,091 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ

ಜು.21 ರಂದು ರಾಜ್ಯದ ವಿದ್ಯುತ್‌ ಸ್ಥಾವರಗಳಿಂದ 4,091 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಜಲವಿದ್ಯುತ್‌ ಸ್ಥಾವರಗಳಾದ ಶರಾವತಿಯಿಂದ 146 ಮೆ.ವ್ಯಾಟ್‌, ಎನ್‌ಪಿಎಚ್‌ನಿಂದ 104,ಆಲಮಟ್ಟಿಯಿಂದ 78, ವಾರಾಹಿಯಿಂದ 61, ಎಂಜಿಎಚ್‌ಇಯಿಂದ 70 ಮೆ.ವ್ಯಾಟ್‌ ಮಾತ್ರ ವಿದ್ಯುತ್‌ ಉತ್ಪಾದನೆಯಾಗಿದ್ದು, ಉಳಿದ ವಿದ್ಯುತ್ ಉಷ್ಣ ವಿದ್ಯುತ್ ಸ್ಥಾವರಗಳಿಂದ ಪೂರೈಕೆಯಾಗಿದೆ.

ಈಗ 84.34 ದಶಲಕ್ಷ ಯುನಿಟ್ ಉಷ್ಣವಿದ್ಯುತ್‌ ಉತ್ಪಾದನೆ ಏರಿಕೆ

ಪ್ರತಿನಿತ್ಯ ಸರಾಸರಿ ಉತ್ಪಾದನೆ 54.7 ದಶಲಕ್ಷ ಯುನಿಟ್ ನಿಂದ ಈಗ 84.34 ದಶಲಕ್ಷ ಯುನಿಟ್ ಉಷ್ಣವಿದ್ಯುತ್‌ ಉತ್ಪಾದನೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ದಿನ 100 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದನೆಗೆ ಸಿದ್ಧತೆ ನಡೆದಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.