ಕನ್ನಡಪ್ರಭ ವಾರ್ತೆ ಅರಸೀಕೆರೆ
"ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ " ಎಂಬ ಮಾತಿಗೆ ಅನುಗುಣವಾಗಿ, ಹೆಣ್ಣುಮಕ್ಕಳ ಅಭಿವೃದ್ಧಿಗೆ ಕೆನರಾ ಬ್ಯಾಂಕ್ ಮುಂಚೂಣಿಯಲ್ಲಿದೆ. ಹೆಣ್ಣು ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ತರಲಾಗಿದೆ ಎಂದು ಕೆನರಾ ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕರಾದ ಮಮತಾ ಕೆ. ಜೋಶಿ ತಿಳಿಸಿದರು.ನಗರದ ಎಸ್.ಎಚ್ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾದ ಮೂರು ತಿಂಗಳ ಹಣಕಾಸು ಸೇರ್ಪಡೆ ಪರಿಪೂರ್ಣತೆಯ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದ ಅವರು, ವಿಮೆ ಇದ್ದರೆ ಮಾನಸಿಕ ನೆಮ್ಮದಿ ಲಭ್ಯವಾಗುತ್ತದೆ. ಸರ್ಕಾರ ನೀಡುತ್ತಿರುವ ವಿವಿಧ ಯೋಜನೆಗಳನ್ನು ಪ್ರಜೆಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. ಇತ್ತೀಚೆಗೆ ಹೆಚ್ಚುತ್ತಿರುವ ಡಿಜಿಟಲ್ ವಂಚನೆಗಳ ಕುರಿತು ಎಚ್ಚರಿಸಿ, ವ್ಯವಹಾರದ ಅರಿವಿಲ್ಲದೆ ಓ.ಟಿ.ಪಿ ಯಾರಿಗಾದರೂ ನೀಡುವುದು ಅಪಾಯಕಾರಿಯಾಗಿದೆ. ಯಾವುದೇ ಬ್ಯಾಂಕ್ ಅಥವಾ ಅಧಿಕೃತ ಸಂಸ್ಥೆಗಳು ಓ.ಟಿ.ಪಿ ಅಥವಾ ಲಿಂಕ್ ಮೂಲಕ ಮಾಹಿತಿ ಕೇಳುವುದಿಲ್ಲ. ಹೀಗಾಗಿ ಮೋಸದಿಂದ ತಪ್ಪಿಸಿಕೊಳ್ಳುವುದು ಅಗತ್ಯ. ಯಾರಾದರೂ ವಂಚನೆಗೆ ಒಳಗಾದರೆ ತಕ್ಷಣವೇ 1930ಕ್ಕೆ ಕರೆ ಮಾಡಬೇಕು ಎಂದು ಸಲಹೆ ನೀಡಿದರು.ಈವರೆಗೆ ಹೆಣ್ಣು ಮಕ್ಕಳಿಗೆ ₹22,000 ಕೋಟಿ ರು. ಸಾಲ ನೀಡಲಾಗಿದೆ. ‘ಸುಕನ್ಯಾ ಸಮೃದ್ಧಿ ಯೋಜನೆ’ ಮೂಲಕ, 15 ವರ್ಷಗಳ ಕಾಲ ಹಣ ಪಾವತಿಸಿದರೆ, 18ನೇ ವಯಸ್ಸಿನಲ್ಲಿ ಅರ್ಧ ಮೊತ್ತ ಹಾಗೂ 21ನೇ ವರ್ಷಕ್ಕೆ ಪೂರ್ತಿ ಮೊತ್ತವನ್ನು ಮಕ್ಕಳಿಗೆ ನೀಡಲಾಗುತ್ತದೆ. ಈ ಯೋಜನೆಯಿಂದ ಮಕ್ಕಳ ವಿದ್ಯಾಭ್ಯಾಸ ಅಥವಾ ಮದುವೆಗೆ ನೆರವಾಗುತ್ತದೆ ಎಂದು ತಿಳಿಸಿದರು.ಹೆಸರು ಪಡೆದ ಹೊಸ ಖಾತೆ ''''''''ಕೆನರಾ ಏಂಜೆಲ್'''''''' ಎಂಬುದು ಹೆಣ್ಣು ಮಕ್ಕಳಿಗಾಗಿ ವಿಶೇಷವಾಗಿ ರೂಪಿಸಲಾಗಿದೆ. ಈ ಖಾತೆಯ ಮೂಲಕ ಕ್ಯಾನ್ಸರ್ ಕೇರ್ ಪ್ರೊಟೆಕ್ಷನ್ ಉಚಿತವಾಗಿ ಲಭ್ಯವಿದೆ. ಯಾವುದೇ ಶುಲ್ಕವಿಲ್ಲದೇ ಈ ಸೌಲಭ್ಯ ದೊರೆಯುತ್ತದೆ ಎಂದು ವಿವರಿಸಿದರು.ಲೀಡ್ ಬ್ಯಾಂಕ್ ಮ್ಯಾನೇಜರ್ ಲತಾ ಸರಸ್ವತಿ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಹಣಕಾಸಿನ ಅರಿವು ನೀಡಬೇಕು. 10 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೆನರಾ ಬ್ಯಾಂಕ್ ವ್ಯವಹಾರ ಮಾಡುವ ಅವಕಾಶ ನೀಡುತ್ತಿದೆ ಹಾಗೂ ಇದು ಶೂನ್ಯ ಬ್ಯಾಲೆನ್ಸ್ ಖಾತೆಗಳನ್ನು ಉಪಯೋಗಿಸಿಕೊಳ್ಳಲು ಸಲಹೆ ನೀಡಿದರು.ನಾಗರೀಕರು ತಮ್ಮ ಬೈಕ್ ಅಥವಾ ಕಾರಿಗೆ ಇನ್ಸೂರೆನ್ಸ್ ಮಾಡುತ್ತಾರೆ, ಆದರೆ ಜೀವನ ವಿಮೆ ಕಡೆಗಣಿಸುತ್ತಾರೆ. ಸರ್ಕಾರದ ಯೋಜನೆಯಾದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಎಲ್ಲರಿಗೂ ಲಭ್ಯವಿದೆ, ಅದನ್ನು ಉಪಯೋಗಿಸಬೇಕು ಎಂದು ಹೇಳಿದರು.ಈ ಸಮಾರಂಭದಲ್ಲಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಂಟನಿ ರಾಜ್, ಡಿವಿಜನ್ ಮ್ಯಾನೇಜರ್ ಸಂದೀಪ್ ಸಿಂಗ್, ಅರಸೀಕೆರೆ ಬ್ರಾಂಚ್ ಮ್ಯಾನೇಜರ್ ಧರ್ಮಲಿಂಗ ಹಾಗೂ ಆರ್ಥಿಕ ಸಾಕ್ಷರತಾ ಸಮಾಲೋಚಕರಾದ ಕುಸುಮ ಎಂ.ಎಸ್. ಅವರು ಜೀವವಿಮೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಜನರಿಗೆ ಪ್ರಧಾನ ಮಂತ್ರಿ ಝನ್ ಧನ್ ಯೋಜನೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ,ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ,ಅಟಲ್ ಪಿಂಚಣಿ ಯೋಜನೆಯ ಬಗ್ಗೆ ವಿವರಿಸಲಾಯಿತು.ಈ ಸಂದರ್ಭದಲ್ಲಿ ಶೋಭಾ, ತುಳಸಿ, ಡೆಲ್ಲಾ, ಕೃಷ್ಣ ಮತ್ತು ಅರಸೀಕೆರೆ ತಾಲೂಕಿನ ಎಲ್ಲಾ ಶಾಖೆಗಳ ವ್ಯವಸ್ಥಾಪಕರು ಹಾಜರಿದ್ದರು. ಲೋನ್‌ಗೆ ಅರ್ಜಿ ಸಲ್ಲಿಸಿದವರಿಗೆ ಸ್ಥಳದಲ್ಲೇ ಸಾಲ ವಿತರಣೆ ನಡೆಯಿತು.