ವ್ಯವಹಾರದಲ್ಲಿ ಮುನಿಸು: ಹಾಸನದಲ್ಲಿ ಸ್ನೇಹಿತನಿಗೆ ಗುಂಡಿಟ್ಟು ವ್ಯಕ್ತಿ ಆತ್ಮಹತ್ಯೆ

KannadaprabhaNewsNetwork |  
Published : Jun 21, 2024, 01:05 AM IST
20ಎಚ್ಎಸ್ಎನ್15ಎ : | Kannada Prabha

ಸಾರಾಂಶ

ಹಣಕಾಸಿನ ವಿಚಾರವಾಗಿ ವೈಮನಸ್ಯ ಉಂಟಾಗಿ ಒಬ್ಬ ಸ್ನೇಹಿತ ಮತ್ತೊಬ್ಬನಿಗೆ ಗುಂಡು ಹಾರಿಸಿ ನಂತರ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಹೊಯ್ಸಳ ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ಶರಾಫತ್ ಅಲಿ ಹಾಗೂ ಆಸೀಫ್‌ ಅಲಿ ಸಾವನ್ನಪ್ಪಿದವರು.

ಹಾಸನದ ಹೊಯ್ಸಳ ನಗರದಲ್ಲಿ ಘಟನೆ । ರಿಯಲ್‌ ಎಸ್ಟೇಟ್‌ ಉದ್ಯಮದಲ್ಲಿ ಹಣಕಾಸಿನ ವಿಚಾರ ಉಂಟಾದ ವೈಮನಸ್ಯ

ಕನ್ನಡಪ್ರಭ ವಾರ್ತೆ ಹಾಸನ

ಹಲವು ವರ್ಷಗಳಿಂದ ಒಟ್ಟಿಗೆ ವ್ಯವಹಾರ ಮಾಡುತ್ತಿದ್ದ ಸ್ನೇಹಿತರಿಬ್ಬರು ಅದೇ ವ್ಯವಹಾರದಲ್ಲಿನ ಹಣಕಾಸಿನ ವಿಚಾರವಾಗಿ ವೈಮನಸ್ಯ ಉಂಟಾಗಿ ಒಬ್ಬ ಸ್ನೇಹಿತ ಮತ್ತೊಬ್ಬನಿಗೆ ಗುಂಡು ಹಾರಿಸಿ ನಂತರ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಹೊಯ್ಸಳ ನಗರದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಶರಾಫತ್ ಅಲಿ ಹಾಗೂ ಆಸೀಫ್‌ ಅಲಿ ಸಾವನ್ನಪ್ಪಿದವರು. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಾಸನದ ಎಸ್ಪಿ ಮೊಹಮ್ಮದ್ ಸುಜೀತಾ, ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.‌ ಆರಂಭದಲ್ಲಿ ಯಾರೋ ದುಷ್ಕರ್ಮಿಗಳು ಬೈಕಿನಲ್ಲಿ ಬಂದು ಬಂದೂಕಿನಿಂದ ಶೂಟ್ ಮಾಡಿ ಕೊಂದು ಎಸ್ಕೇಪ್ ಆಗಿದ್ದಾರೆ ಎಂಬ ಸುದ್ದಿ ಹರಡಿತ್ತು. ಸುದ್ದಿ ತಿಳಿದು ನಗರದ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಆದರೆ, ಸ್ಥಳಕ್ಕೆ ಬಂದ ಪೊಲೀಸರು ಮೃತರ ಜೇಬಿನಲ್ಲಿದ್ದ ಗುರುತಿನ ಚೀಟಿಗಳ ಆಧಾರದ ಮೇಲೆ ಅವರ ಮನೆಯವರನ್ನು ಸಂಪರ್ಕಿಸಿದಾಗ ಒಂದಷ್ಟು ಅಸಲಿ ಸತ್ಯ ಗೊತ್ತಾಗಿದೆ.

ಮಾಧ್ಯಮದೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾತನಾಡಿ, ಸಾವನ್ನಪ್ಪಿರುವ ಶರಾಫತ್‌ ಹಾಸನ ಹಾಗೂ ಆಸೀಫ್‌ ಬೆಂಗಳೂರು ನಿವಾಸಿಗಳು. ಇಬ್ಬರೂ ರಿಯಲ್ ಎಸ್ಟೇಟ್ ವ್ಯವಹಾರದ ಪಾಲುದಾರರಾಗಿದ್ದರು. ಆಸೀಫ್ ಬೆಂಗಳೂರಿನ ನಿವಾಸಿಯಾಗಿದ್ದರೂ ಹಾಸನದಲ್ಲಿಯೇ ವಾಸವಿದ್ದರು.‌ ಶರಾಫತ್ ರಿಯಲ್ ಎಸ್ಟೇಟ್ ಬಿಸಿನೆಸ್ ಜತೆಗೆ ಶುಂಠಿ ವ್ಯಾಪಾರವನ್ನೂ ಮಾಡುತ್ತಿದ್ದರು. ಇಬ್ಬರೂ ರಾತ್ರಿ ಒಟ್ಟಿಗೆ ಇದ್ದು, ಗುರುವಾರ ಬೆಳಿಗ್ಗೆ ಯಾವುದೋ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ತಮ್ಮ ನಿಸಾನ್‌ ಟೆರಾನೋ ಕಾರಿನಲ್ಲಿ ಹೊಯ್ಸಳ ನಗರ ಬಡಾವಣೆಗೆ ಬಂದು ಅಲ್ಲಿಯೂ ಗಲಾಟೆ ಮಾಡಿಕೊಂಡಿದ್ದಾರೆ. ಆಸೀಫ್ ಮೊದಲಿಗೆ ಶರಾಫತ್ ಅಲಿಯನ್ನು ಶೂಟ್ ಮಾಡಿ ಕೊಂದಿದ್ದಾನೆ. ಬಳಿಕ ಕಾರಿನೊಳಗೆ ಆಸೀಫ್ ಅದೇ ರಿವಾಲ್ವರ್‌ನಿಂದ ತಾನು ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಹಿತಿ ನೀಡಿದರು.

ಸ್ಥಳದಲ್ಲಿ ಇಬ್ಬರೂ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಹಾಸನ ನಗರದ ಬಡಾವಣೆ ಪೊಲೀಸರು, ಸಂಬಂಧಿಕರಿಂದ ಮಾಹಿತಿ ಪಡೆದು, ಸಾವನ್ನಪ್ಪಿದವರ ಮೊಬೈಲ್ ಫೋನ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.

ಘಟನಾ ಸ್ಥಳಕ್ಕೆ‌ ದಕ್ಷಿಣ ವಲಯ ಐಜಿಪಿ ಡಾ.ಬೋರಲಿಂಗಯ್ಯ ಭೇಟಿ ನೀಡಿದ್ದು, ಘಟನೆ ಬಗ್ಗೆ ಐಜಿ ಮಾಹಿತಿ ಪಡೆದರು. ಈ ವೇಳೆ ಎಸ್ಪಿ ಮೊಹಮದ್ ಸುಜೀತ ಇತರರು ಇದ್ದರು.

PREV

Recommended Stories

ಬಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಶ್ರೀಕಾಂತ ಸ್ಪರ್ಧೆ
ಮೂಡಲಗಿ ಬ್ಯಾಂಕ್‌ನ 3 ಶಾಖೆಗಳು ಪ್ರಗತಿ ಪಥದತ್ತ