ಕರ್ನಾಟಕ ಮರಾಟಿ ಸಂಘದಿಂದ ‘ಬೃಹತ್ ಉದ್ಯೋಗ ಮೇಳ’

KannadaprabhaNewsNetwork | Published : Nov 11, 2024 1:03 AM

ಸಾರಾಂಶ

ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪೆನಿಗಳಾದ ಸ್ಲೈಂಡರ್‌ ಎಲೆಕ್ಟ್ರಿಕ್ ಇಂಡಿಯಾ, ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲ್ಯೂಷನ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮೂತ್ತೂಟ್ ಫಿನಾನ್ಸ್ ಸೇರಿದಂತೆ ಒಟ್ಟು ೪೦ ಕಂಪನಿಗಳು ಪಾಲ್ಗೊಂಡವು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಸಮಗ್ರ ಮರಾಟಿಗರ ಬಲವರ್ಧನೆ ಹಾಗೂ ಪ್ರಗತಿಗಾಗಿ ನಡೆಯುತ್ತಿರುವ ‘ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ ಹಿನ್ನಲೆಯಲ್ಲಿ ಮರಾಟಿ ಸಮುದಾಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಉದ್ದೇಶದಿಂದ ಕರ್ನಾಟಕ ಮರಾಟಿ ಸಂಘ ಬೆಂಗಳೂರಿನ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಆವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಯಿತು.ಉದ್ಯೋಗ ಮೇಳದಲ್ಲಿ ಪ್ರಮುಖ ಕಂಪೆನಿಗಳಾದ ಸ್ಲೈಂಡರ್‌ ಎಲೆಕ್ಟ್ರಿಕ್ ಇಂಡಿಯಾ, ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲ್ಯೂಷನ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಮೂತ್ತೂಟ್ ಫಿನಾನ್ಸ್ ಸೇರಿದಂತೆ ಒಟ್ಟು ೪೦ ಕಂಪನಿಗಳು ಪಾಲ್ಗೊಂಡವು.ಪಾಲ್ಗೊಂಡ ಒಟ್ಟು ೪೦ ಕಂಪನಿಗಳು ೪೪೫ ಉದ್ಯೋಗಾಕಾಂಕ್ಷಿಗಳನ್ನು ಮುಂದಿನಹಂತಕ್ಕೆ ಆಯ್ಕೆ ಮಾಡಿದರೆ, ಅವುಗಳಲ್ಲಿ ೧೧ ಕಂಪನಿಗಳು ೨೧೩ ಜನರಿಗೆ ಸ್ಥಳದಲ್ಲಿ ನಿಯೋಜನೆಯ ಆದೇಶ (ಆನ್ ದಿ ಸ್ಪಾಟ್ ಪ್ಲೇಸ್‌ಮೆಂಟ್ ಆರ್ಡರ್) ಪತ್ರವನ್ನು ನೀಡಿವೆ. ೧೪೦೦ ಜನರು ಉದ್ಯೋಗ ಮೇಳಕ್ಕೆ ನೋಂದಣಿ ಮಾಡಿಕೊಂಡಿದ್ದರೆ, ೬೮೪ ಜನರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡರು.ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಕೌಶಲಭರಿತ ಆಕಾಂಕ್ಷಿಗಳಿಗೆ ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ವಿಫುಲ ಉದ್ಯೋಗ ಅವಕಾಶ ಲಭ್ಯವಿದೆ. ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಹಂತ ಹಂತವಾಗಿ ಜೀವನದಲ್ಲಿ ಉನ್ನತಿಯನ್ನು ಕಾಣಬೇಕು ಎಂದರು.

ಬೆಂಗಳೂರಿನ ಕರ್ನಾಟಕ ಮರಾಟಿ ಸಂಘ ಗೌರವ ಕಾರ‍್ಯದರ್ಶಿ ಹಾಗೂ ನ್ಯಾಯವಾದಿ ಪ್ರವೀಣ್‌ ಕುಮಾರ ಮುಗುಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕಾರ‍್ಯಕ್ರಮದಲ್ಲಿ ಬೆಂಗಳೂರಿನ ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ರಾಮ ನಾಯ್ಕ, ಚೆನ್ನೈ ಉದ್ಯಮಿ ಉಮೇಶ ಕುಮಾರ್, ಕೇರಳ ಮರಾಟಿ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸುಬ್ರಾಯ ನಾಯ್ಕ ಉಪಸ್ಥಿತರಿದ್ದರು.ಬೆಂಗಳೂರಿನ ಅಪರ ಪ್ರಧಾನ ಮುಖ್ಯ ಸಂರಕ್ಷಾಣಾಧಿಕಾರಿ ಡಾ.ಕೆ. ಸುಂದರ ನಾಯ್ಕ, ಮಂಗಳೂರಿನ ಅಬಕಾರಿ ಇಲಾಖೆಯ ಜಂಟಿ ಆಯುಕ್ತ ಡಾ.ಬಾಲಕೃಷ್ಣ ಸಿ.ಎಚ್., ಬಿ.ಇ.ಎಲ್ ಎಡಿಷನಲ್ ಜನರಲ್ ಮ್ಯಾನೇಜರ್ ನರಸಿಂಹ ನಾಯ್ಕ, ಮರಾಟಿ ಸಮುದಾಯದ ಪ್ರಮುಖರಾದ ದುರ್ಗಾ ಪ್ರಸಾದ ಮಜಕಾರ್, ಸದಾಶಿವ ನಾಯ್ಕ, ಡಾ ಸದಾಶಿವ ನಾಯ್ಕ ಇದ್ದರು.ಉಪನ್ಯಾಸಕ ಪ್ರಕಾಶ ನಾಯ್ಕ ನಿರೂಪಿಸಿದರು. ಬೆಂಗಳೂರಿನ ಕರ್ನಾಟಕ ಮರಾಟಿ ಸಂಘದ ಅಧ್ಯಕ್ಷೆ ಶೋಭಾವತಿ ಎಂ.ಟಿ. ವಂದಿಸಿದರು.

Share this article