ಬೆಲ್ಕಾನ್ ಪ್ರದರ್ಶನವು ಫೆ. 8 ರವರೆಗೆ ನಡೆಯಲಿದೆ ಎಂದು ಕ್ರೆಡಾಯ್‌ ಬೆಲ್ಕಾನ್ ಅಧ್ಯಕ್ಷ ಯುವರಾಜ ಕುಲಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಲ್ಕಾನ್ ಪ್ರದರ್ಶನವು ಫೆ. 8 ರವರೆಗೆ ನಡೆಯಲಿದೆ ಎಂದು ಕ್ರೆಡಾಯ್‌ ಬೆಲ್ಕಾನ್ ಅಧ್ಯಕ್ಷ ಯುವರಾಜ ಕುಲಜಿ ಹೇಳಿದರು. ನಗರದ ಕ್ಲಬ್ ರಸ್ತೆಯ ಸಿಪಿಇಡಿ ಮೈದಾನದಲ್ಲಿ ಕ್ರೆಡಾಯ್‌ ಬೆಳಗಾವಿ ವತಿಯಿಂದ ಆಯೋಜಿಸಿರುವ ಬೆಲ್ಕಾನ್-2026 ನಿರ್ಮಾಣ ಹಾಗೂ ವಸತಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಮೇಳ ಚಾಲನೆಯಲ್ಲಿ ಮಾತನಾಡಿದ ಅವರು, ಸುಮಾರು ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ 180 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, 300ಕ್ಕೂ ಹೆಚ್ಚು ರಿಯಲ್ ಎಸ್ಟೇಟ್ ಪ್ರೊಜೆಕ್ಟ್‌ಗಳು ಪ್ರದರ್ಶನಗೊಳ್ಳುತ್ತಿವೆ. ನಿರ್ಮಾಣ ಸಾಮಗ್ರಿ, ಗೃಹ ಹಣಕಾಸು ಹಾಗೂ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಪ್ರಸಿದ್ಧ ಕಂಪನಿಗಳು ಮತ್ತು ಹಣಕಾಸು ಸಂಸ್ಥೆಗಳ 60ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಿವೆ. ಪ್ರತಿದಿನ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಬೆಳೆಯುತ್ತಿರುವ ಬೆಳಗಾವಿಗೆ ಇಂತಹ ಮೇಳಗಳು ಅಗತ್ಯವಾಗಿವೆ. ರಿಯಲ್ ಎಸ್ಟೇಟ್ ವಲಯದ ಪ್ರಮುಖ ಬಿಲ್ಡರ್‌ಗಳು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಹಾಗೂ ತಜ್ಞರು ಒಂದಾಗಿ ಈ ಪ್ರದರ್ಶನವನ್ನು ಆಯೋಜಿಸಿದ್ದು ಯಶಸ್ವಿಯಾಗಲಿದೆ. ಸಾರ್ವಜನಿಕರು ಮನೆ, ಪ್ಲಾಟ್, ವಾಣಿಜ್ಯ ಸಂಕೀರ್ಣಗಳು, ಹೊಸ ನಿರ್ಮಾಣ ಸಾಮಗ್ರಿ ಹಾಗೂ ಒಳಾಂಗಣ ವಿನ್ಯಾಸ ಮಾದರಿಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಲು ಅವಕಾಶ ದೊರೆಯುತ್ತದೆ ಎಂದರು.ಚಲನಚಿತ್ರ ನಟಿ ಸೋನಾಲಿ ಕುಲಕರ್ಣಿ ಮಾತನಾಡಿ, ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಬೆಳಗಾವಿಯ ಅಭಿವೃದ್ಧಿಗೆ ಕ್ರೆಡಾಯ್‌ ಬೆಳಗಾವಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದೇ ಸೂರಿನಡಿ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳು ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಪ್ರದರ್ಶನದಲ್ಲಿನ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಆಸೀಫ್ ಸೇಠ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಮಾತನಾಡಿದರು. ಕರ್ನಾಟಕ ಕ್ರೆಡಾಯ್‌ ಅಧ್ಯಕ್ಷ ಬಾಸ್ಕರ್ ನಾಗೇಂದ್ರಪ್ಪ, ಪ್ರಶಾಂತ ವಾಂಡಕರ್, ಸುಧೀರ ಪನಾರೆ, ಪ್ರಶಾಂತ ಪಾಟೀಲ, ಸಚಿನ ಬೈಲವಾಡ, ಆನಂದ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.