ರಾಜ್ಯದಲ್ಲಿ 2028ಕ್ಕೆ ಎನ್‌ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಸಿಎಂ ಯಾರಾಗಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡುತ್ತಾರೆ ಎಂದು ವಿಧಾನಸೌಧ ವಿರೋಧ ಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ನಾಗಮಂಗಲ : ರಾಜ್ಯದಲ್ಲಿ 2028ಕ್ಕೆ ಎನ್‌ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಸಿಎಂ ಯಾರಾಗಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ತೀರ್ಮಾನ ಮಾಡುತ್ತಾರೆ ಎಂದು ವಿಧಾನಸೌಧ ವಿರೋಧ ಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಬುಧವಾರ ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀ ಕ್ಷೇತ್ರಕ್ಕೆತೆರಳಿ, ವ್ಯವಸ್ಥೆಗಳ ಪರಿಶೀಲನೆ ನಡೆಸಿದ ಬಳಿಕ ಅಶೋಕ್ ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ 2028ಕ್ಕೆ ರಾಜ್ಯದಲ್ಲಿ ಸಿಎಂ ಅಭ್ಯರ್ಥಿ ವಿಚಾರವಾಗಿ ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅಶೋಕ್, ‘2028ಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಬರೋದು ಖಚಿತ. ಬಿಜೆಪಿ, ಜೆಡಿಎಸ್ ನೇತೃತ್ವದ ಸರ್ಕಾರ ಇರಲಿದೆ. ನಮ್ಮಲ್ಲಿ ಸಿಎಂ ಆಕಾಂಕ್ಷಿಗಳು ತುಂಬಾ ಜನರಿದ್ದಾರೆ’ ಎಂದರು.
ಜೆಡಿಎಸ್ ಎನ್‌ಡಿಎ ಮೈತ್ರಿಕೂಟದಲ್ಲಿದೆ. ಸಂಸತ್ತಿನಲ್ಲೂ 3-4 ಸ್ಥಾನಗಳನ್ನು ಜೆಡಿಎಸ್ ನೀಡಲಾಗಿದೆ. ಅದೇ ರೀತಿ 2028 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ. ಬಿಜೆಪಿ ವರಿಷ್ಠರು ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದರು. ಸಿಎಂ ಅಭ್ಯರ್ಥಿಗೆ ನನ್ನನ್ನು ಸೇರಿದಂತೆ ಈಗಾಗಲೇ 10 ಹೆಸರು ಕೇಳಿಬಂದಿದೆ. ಮೋದಿ, ಅಮಿತ್ ಶಾ ಆಶೀರ್ವಾದವಿದ್ದರೆ ನಾನು ಸಿಎಂ ಆಗಬಹುದು. ನನ್ನಂತೆ ತುಂಬಾ ಜನ ಆಕಾಂಕ್ಷಿಗಳು ಬಿಜೆಪಿಯಲ್ಲಿದ್ದಾರೆ. ನಮಗೆ ಅಧಿಕಾರಕ್ಕೆ ಬರುವುದು ಮುಖ್ಯ, ಸಿಎಂ ಯಾರು ಆಗುತ್ತಾರೆ ಅನ್ನೋದು ಮುಖ್ಯವಲ್ಲ ಎಂದರು.
2028ಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ
ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯದಿಂದ ತೊಲಗುವುದು ಮುಖ್ಯ. 2028ಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರುವುದು ನಮ್ಮ ಗುರಿ. ಎನ್ ಡಿಎ ಮೈತ್ರಿಕೂಟದ ಎಲ್ಲಾ ಪಕ್ಷಗಳಿಗೂ ನೇತೃತ್ವ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ತೀರ್ಮಾನದಂತೆ ಸರ್ಕಾರ ರಚನೆಯಾಗಲಿದೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ
ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ವಿಚಾರ ಅವಧಿ ಮುಗಿದ ಮೆಡಿಸಿನ್ ರೀತಿ ಆಗಿದೆ. ನಿನ್ನೆಯೂ ಖರ್ಗೆ ಮನೆಗೆ ಹೋಗಿ ಸಿಎಂ ಮಾಡುವಂತೆ ಡಿಕೆ ಜಗಳವಾಡಿ ಬಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಕಳೆದ ಒಂದು ವರ್ಷದಿಂದ ಸಿಎಂ ಬದಲಾವಣೆ ಜಗಳ, ಕಿತ್ತಾಟದಲ್ಲೇ ಮುಳುಗಿದೆ ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷರಿಗೆ ಗೌರವ ಸಿಕ್ಕದ್ದರೆ 30-40 ಶಾಸಕರು ಯಾಕೆ ದೆಹಲಿಗೆ ಹೋಗ್ತಿದ್ರು? ಕಾಂಗ್ರೆಸ್ ಶಾಸಕರು ಡಿಸಿಎಂ ಡಿ.ಕೆ.ಶಿವಕುಮಾರ್ ಮಾತಿಗೆ ಬೆಲೆ ಕೊಡುತ್ತಿಲ್ಲ. ಕಾಂಗ್ರೆಸ್ ಪಾರ್ಟಿ ಜಗಳಗಳ ಪಾರ್ಟಿಯಾಗಿದೆ. ಸಿಎಂ ಹಾಗೂ ಸಚಿವ ಸ್ಥಾನದ ಆಸೆ ಇಟ್ಟುಕೊಂಡವರು ಜಗಳ ಆರಂಭಿಸಿದ್ದಾರೆ. ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತುಹೋಗಿದೆ ಎಂದು ಕಿಡಿಕಾರಿದರು.
