ದೇಶದಲ್ಲಿ ಜಾತೀಯತೆ ತೊಲಗಿ, ಸಮಾನತೆ ಬರಬೇಕಾದರೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ಅತ್ಯಗತ್ಯ. ನಮ್ಮ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳು ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು : ದೇಶದಲ್ಲಿ ಜಾತೀಯತೆ ತೊಲಗಿ, ಸಮಾನತೆ ಬರಬೇಕಾದರೆ ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ಅತ್ಯಗತ್ಯ. ನಮ್ಮ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳು ಸಾಮಾಜಿಕ ಮತ್ತು ಆರ್ಥಿಕ ಶಕ್ತಿ ತುಂಬುವ ಕೆಲಸ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ಬಂದಾಗ ಮಾತ್ರ ಸ್ವಾವಲಂಬಿಯಾಗಲು ಸಾಧ್ಯ. ಅದರಿಂದ ಜಾತೀಯತೆ ಹೋಗಲಾಡಿಸಿ, ಸಮಾನತೆ ಬರುತ್ತದೆ ಎಂದು ಡಾ. ಅಂಬೇಡ್ಕರ್ ತಿಳಿಸಿದ್ದರು. ಆದರೆ, ಈಗಲೂ ಸಂಪೂರ್ಣ ಸಮಾನತೆ ಸಾಧಿಸಲಾಗಿಲ್ಲ. ಇದು ನೋವಿನ ಸಂಗತಿ. ನಮ್ಮ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿಗಳು ಸಮಾನತೆ ಸಾಧಿಸುವುದಾಗಿದ್ದು, ಅದಕ್ಕೆ ತಕ್ಕಂತೆ ಆರ್ಥಿಕ ಮತ್ತು ಸಾಮಾಜಿಕ ಶಕ್ತಿ ತುಂಬುತ್ತಿದೆ ಎಂದು ತಿಳಿಸಿದರು.
ಡಾ.ಅಂಬೇಡ್ಕರ್ ಅವರು ಧಮನಿತರ ಪರ ಹೋರಾಡಿದರು. ಹಿಂದು ಧರ್ಮದ ಸುಧಾರಣೆಗಾಗಿ ಸಾಕಷ್ಟು ಪ್ರಯತ್ನಪಟ್ಟರಾದರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಹಿಂದು ಧರ್ಮ ತ್ಯಜಿಸಿದರು. ಅಸಮಾನತೆಗೆ ಕಾರಣವಾದ ಮನುವಾದ ತಿರಸ್ಕರಿಸಿದರು. ಆದರೆ, ಈಗಲೂ ಮನುವಾದಿಗಳು ಸಕ್ರಿಯವಾಗಿದ್ದು, ಅವರು ಸಂವಿಧಾನ ವಿರೋಧಿಗಳಾಗಿದ್ದಾರೆ. ಸುಳ್ಳುಗಳ ಮೂಲಕ ಸಮಾಜದ ದಾರಿ ತಪ್ಪಿಸುತ್ತಿದ್ದಾರೆ. ಡಾ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿತು, ದೆಹಲಿಯಲ್ಲಿ ಡಾ.ಅಂಬೇಡ್ಕರ್ ಅವರ ಶವ ಸಂಸ್ಕಾರಕ್ಕೆ ಅವಕಾಶ ನೀಡಲಿಲ್ಲ ಎಂಬಂತಹ ಅಪಪ್ರಚಾರ ಮಾಡುತ್ತಾರೆ. ಈ ರೀತಿಯ ಸುಳ್ಳುಗಳನ್ನು ಜನರು ನಂಬಬಾರದು ಎಂದರು.
ಸಂವಿಧಾನದಿಂದಾಗಿ ನಾನು ಸಿಎಂ:
ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ನಾನು ಈಗ ಮುಖ್ಯಮಂತ್ರಿಯಾಗಲು ಸಾಧ್ಯವಾಗಿದೆ. ನಮ್ಮ ಸಂವಿಧಾನ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಆ ಸಂವಿಧಾನದಿಂದಲೇ ನಾನು ರಾಜ್ಯದ ಮುಖ್ಯಮಂತ್ರಿ ಕೂಡ ಆಗಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಜಾತಿ ಪದ್ಧತಿ ಸಮರ್ಥಿಸುವ ಮನುಸ್ಮೃತಿ ವಿಷಕಾರಿ ವಸ್ತು
ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಜಾತಿ ಪದ್ಧತಿ ಸಮರ್ಥಿಸುವ ಮನುಸ್ಮೃತಿ ವಿಷಕಾರಿ ವಸ್ತು ಎಂಬ ಕಾರಣಕ್ಕೆ ಡಾ.ಅಂಬೇಡ್ಕರ್ ಅವರು ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು. ಅದನ್ನೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದರು. ಕೆಲ ಪಟ್ಟಭದ್ರ ಹಿತಾಸಕ್ತಿಗಳು ತಪ್ಪಾಗಿ ಅರ್ಥೈಸುವ ಕೆಲಸ ಮಾಡಿವೆ. ರಾಜಕೀಯ ಮಾತುಗಳು, ಪಕ್ಷಗಳ ನಡೆ, ಸರ್ಕಾರಗಳ ತೀರ್ಮಾನ ದಲಿತರು ಮತ್ತು ಶೋಷಿತರನ್ನು ಒಗ್ಗೂಡಿಸುವಂತಿರಬೇಕು. ಆದರೆ, ಈಗ ದುರ್ಬಲಗೊಳಿಸಿ, ವಿಭಜಿಸುವ ಸಂಗತಿಗಳು ನಡೆಯುತ್ತಿವೆ. ಅದನ್ನು ನಾವೆಲ್ಲ ಧಿಕ್ಕರಿಸಿ ಒಟ್ಟಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂಗ್ಳೂರು ವಿಜಯ, ಸಿ.ಎಂ.ಮುನಿಯಪ್ಪ, ಎಚ್.ಎನ್.ಅಣ್ಣಯ್ಯ, ಹನುಮಂತರಾವ್ ಬಿ.ದೊಡ್ಡಮನಿ ಹಾಗೂ ಶೋಭಾ ಗಸ್ತಿ ಅವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಚಿವ ಕೆ.ಎಚ್. ಮುನಿಯಪ್ಪ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯರಾದ ಭೋಜೇಗೌಡ, ಗೋವಿಂದರಾಜು, ಮಾಜಿ ಸಂಸದ ಚಂದ್ರಪ್ಪ, ಮಾಜಿ ಸಚಿವ ಎಚ್. ಆಂಜನೇಯ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಇತರರಿದ್ದರು.

