ಬೀದರ್ : ಸಮಾಜಕ್ಕೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಸುದ್ದಿಗಳನ್ನು ವಿಸ್ತಾರವಾಗಿ ಬರೆಯಿರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರಲ್ಲಿ ಮನವಿಪೂರ್ವಕ ಕಿವಿಮಾತು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸರ್ಕಾರದ ಪರ ವರದಿ ಮಾಡುವಂತೆ ಈವರೆಗೆ ಯಾವ ಮಾಧ್ಯಮಕ್ಕೂ ಹೇಳಿಲ್ಲ. ಪತ್ರಕರ್ತರು ವಸ್ತುನಿಷ್ಠ ದಾಖಲೆ ಸಹಿತ ವರದಿ ಮಾಡಬೇಕು. ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ನೋಡಿಕೊಳ್ಳಬೇಕು. ಊಹಾಪೋಹ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾದದ್ದು, ಕ್ಷುಲ್ಲಕ ವಿಚಾರವನ್ನು ದಿನವಿಡೀ ತೋರಿಸುವವರು ಅದರ ಪರಿಣಾಮದ ಬಗ್ಗೆಯೂ ಯೋಚಿಸಬೇಕು. ಗಂಡ-ಹೆಂಡತಿ ಜಗಳವನ್ನು ಇಡೀ ದಿನ‌ ತೋರಿಸಿದರೆ ಅದರಿಂದ ಸಮಾಜಕ್ಕೆ ಏನು ಪ್ರಯೋಜನ ಎಂದೂ ಪ್ರಶ್ನಿಸಿದರು.

ಡಾ। ಅಂಬೇಡ್ಕರ್ ಮತ್ತು ಗಾಂಧೀಜಿ ಇಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಸಮಾಜದಲ್ಲಿರುವ ನ್ಯೂನತೆಗಳನ್ನು ಹೋಗಲಾಡಿಸಿ ಸಮಾಜವನ್ನು ಕಟ್ಟುವ ಕಾಯಕವನ್ನು ಬಸವಾದಿ ಶರಣರು ಮಾಡಿದ್ದರು. ಶರಣರ ಆಶಯದ ಸಮಸಮಾಜ ಆಗದಿದ್ದರೆ ಅಸಮಾನತೆ ಮುಂದುವರೆಯುತ್ತದೆ ಎಂದರು.


ಬಸವಣ್ಣ ತಿರಸ್ಕರಿದ್ದ ಧರ್ಮ ಸಿದ್ಧಾಂತವನ್ನು ಪಾಲಿಸುವವರು ಈಗ ಹೆಚ್ಚಾಗಿದ್ದಾರೆ. ಈ ಮೌಡ್ಯ ಆಚರಿಸುವವರೆಲ್ಲಾ ವಿದ್ಯಾವಂತರೇ ಎನ್ನುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ ವೈಚಾರಿಕತೆ ಇರುವ ವೈಜ್ಞಾನಿಕ ಶಿಕ್ಷಣ ಪದ್ಧತಿ ಅಗತ್ಯ. ಯಾವ ದೇವರೂ ಯಾರನ್ನೂ ಕೂಡ ಅವಿದ್ಯಾವಂತನಾಗು, ಕೆಳ ಜಾತಿಯಲ್ಲೇ ಹುಟ್ಟು ಎಂದು ಬಯಸುವುದಿಲ್ಲ. ಈ ಅರಿವನ್ನು ಜನರಲ್ಲಿ ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಪತ್ರಕರ್ತರು ಕೇವಲ ಮಾಹಿತಿ ಕೊಡುವವರಾಗದೆ ಸಮಾಜ ಸುಧಾರಣೆಗೂ ಒತ್ತು ನೀಡಬೇಕು ಎಂದರು.

ಬೇಸಿಕ್ ಇನ್‌ಕಂ ಆರ್ಥಿಕತೆ:

ಡಾ। ಅಂಬೇಡ್ಕರ್ ಅವರ ಆಶಯದಂತೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ‌ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ 2013ರಲ್ಲೂ ಮಾಡಿತ್ತು. ಈಗಲೂ ಮುಂದುವರೆಸಿದ್ದೇವೆ. ನಾವು ಬಡವರ ಪರವಾದ ಯೂನಿವರ್ಸವಲ್ ಬೇಸಿಕ್ ಇನ್‌ಕಂ ಆರ್ಥಿಕತೆಯನ್ನು ಪಾಲುಸುತ್ತಿದ್ದೇವೆ. ಇದನ್ನು ಪತ್ರಕರ್ತ ಅರ್ಥ ಮಾಡಿಕೊಳ್ಳಬೇಕು ಎಂದರು.

ಸಂಪಾದಕರಿಗೆ ಒತ್ತಡ:

ಕೆಲವು ಒಳ್ಳೆ ಪತ್ರಕರ್ತರೂ ಇದ್ದಾರೆ. ಆದರೆ ಬಹಳಷ್ಟು ಮಾಧ್ಯಮ‌ ಸಂಸ್ಥೆಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಪಟ್ಟಿವೆ. ಪತ್ರಕರ್ತರು ಸತ್ಯ ಬರೆದರೂ ಕೆಲವೊಮ್ಮೆ ಸಂಪಾದಕರು ಮಾಲೀಕರ ಒತ್ತಡಕ್ಕೆ ಮಣಿದು ಬದಲಾಯಿಸಿ ಬಿಡುತ್ತಾರೆ. ಜನಸಾಮಾನ್ಯರು ಇನ್ನೂ ಪತ್ರಿಕೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನೂ ನಂಬಿಕೆ ಇಟ್ಟಿದ್ದೇನೆ ಎಂದರು.

ನಿಯಮಗಳ ತೊಂದರೆ ನಿವಾರಣೆ:

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡುವ ಸವಲತ್ತನ್ನು ಜಾರಿ ಮಾಡಿದ್ದೇ ನಾನು. ಇದರಲ್ಲಿನ ನಿಯಮಗಳಲ್ಲಿ ಏನಾದರೂ ತೊಂದರೆ ಇದ್ದರೆ, ಆ ಬಗ್ಗೆ ಚರ್ಚಿಸಿ ನಿವಾರಿಸುವೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಹಾರಕುಡ ಹಿರೇಮಠ ಸಂಸ್ಥಾನದ ಡಾ। ಚನ್ನವೀರ ಶಿವಾಚಾರ್ಯರು, ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಡಾ। ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಈಶ್ವರ್ ಖಂಡ್ರೆ, ರಹೀಂಖಾನ್, ಡಾ। ಶರಣ ಪ್ರಕಾಶ್ ಪಾಟೀಲ, ಸಿಎಂ ಮಾಧ್ಯಮ‌ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಸಂಸದ ಸಾಗರ್ ಖಂಡ್ರೆ, ಶಾಸಕರಾದ ಶರಣು ಸಲಗರ, ಭೀಮರಾವ ಪಾಟೀಲ್, ಡಾ। ಚಂದ್ರಶೇಖರ ಪಾಟೀಲ್ ಇದ್ದರು.‌