ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಪಂಚಮಸಾಲಿ ಸಮುದಾಯದ ನಾಯಕಿಯರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದರ ಮೂಲಕ ಸಮುದಾಯಕ್ಕೆ ಆದ್ಯತೆ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ನಗರ ಹೊರವಲಯದ ಕಂಠಿ ರೆಸಾರ್ಟ್‌ ನಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ವೀಣಾ ಕಾಶಪ್ಪನವರ, ಸಂಯುಕ್ತ ಪಾಟೀಲ ಅವರಿಗೆ ಟಿಕೆಟ್ ನೀಡಲಾಗಿತ್ತು. ಅವರಿಗೆ ಟಿಕೆಟ್ ಕೊಡಿಸುವಲ್ಲಿ ನಾನೂ ಕಾರಣ ಎಂದರು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನಾಗಿ ಘೋಷಿಸಿದಲ್ಲದೆ, ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಅಳವಡಿಸಲು ಕ್ರಮ ಕೈಗೊಂಡಿದ್ದೇನೆ. ರಾಣಿ ಚನ್ನಮ್ಮ ಜಯಂತಿ ಆಚರಣೆಗೆ ಆದೇಶಿಸಿದ್ದು ಸಹ ನಾನೇ, ಬಿಜೆಪಿ ಅವರಿಂದ ಇದು ಯಾಕೆ ಸಾಧ್ಯವಾಗಲಿಲ್ಲ ಎಂಬುದನ್ನು ಸಮಾಜ ಅರ್ಥ ಮಾಡಿಒಳ್ಳಬೇಕೆಂದು ಹೇಳಿದರು.

ಸಮುದಾಯದ ಎಲ್ಲ ವಿಷಯಗಳಿಗೆ ಸ್ಪಂದಿಸಲು ನಾವು ಸಿದ್ಧರಿದ್ದೇವೆ. ಉಪಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಬೇಕು, ಉಮೇಶ ಮೇಟಿ ಗೆಲುವಿಗೆ ಕಾರಣರಾಗಬೇಕೆಂದು ಮನವಿ ಮಾಡಿಕೊಂಡರು.


ಸಮಾಜ ಬಂಧುಗಳು ಪಕ್ಷಕ್ಕೆ ನಿರಂತರ ಬೆಂಬಲ ನೀಡುತ್ತಿದ್ದು, ಪ್ರಸಕ್ತ ಚುನಾವಣೆಯಲ್ಲೂ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಬೆಂಬಲಿಸಬೇಕು ಎಂದು ಕೋರಿದರು. ದಿ.ಎಚ್.ವೈ. ಮೇಟಿ ಅವರು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ. ಅಭಿವೃದ್ಧಿ ಬಗ್ಗೆ ಅವರು ಇನ್ನೂ ಸಾಕಷ್ಟು ಕನಸು ಕಂಡಿದ್ದರು. ಆ ಕನಸುಗಳು ಸಾಕಾರಗೊಳ್ಳಲು ಮತ್ತೊಮ್ಮೆ ಕಾಂಗ್ರೆಸ್‌ ಗೆ ಮತ ನೀಡಬೇಕು. ನಿಮ್ಮ ಸಮಾಜದ ಬೇಡಿಕೆ ಈಡೇರಿಸಲಾಗುವುದು ಎಂದರು.

ಸಮಾಜದ ಪರವಾಗಿಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಮಾತನಾಡಿ, ಸಮಾಜದ ಎಲ್ಲ ಬಂಧುಗಳು ಪಕ್ಷದ ಬೆಂಬಲಕ್ಕೆ ನಿಂತಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲ ಭರವಸೆ ಈಡೇರಿಸಲಿದೆ ಎಂಬ ವಿಶ್ವಾಸವಿದೆ .ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸೋಣ ಎಂದರು.

ಸಚಿವ ಶಿವಾನಂದ ಪಾಟೀಲ, ಶಾಸಕರಾದ ವಿಜಯಾನಂದ ಕಾಶಪ್ಪನವರ, ವಿನಯ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಅವರನ್ನು ಬೆಂಬಲಿಸುವಂತೆ ಮನವಿ ಮಾಡಿಕೊಂಡರು.

ಸಚಿವರಾದ ಭೈರತಿ ಸುರೇಶ, ಆರ್.ಬಿ. ತಿಮ್ಮಾಪೂರ, ಶಾಸಕ ಅಲ್ಲಮಪ್ರಭು ಪಾಟೀಲ, ಮಾಜಿ ಸಚಿವ ಎಸ್.ಆರ್. ಪಾಟೀಲ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ, ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಸಿದ್ದು ಕೊಣ್ಣೂರ, ನಗರಸಭೆ ಮಾಜಿ ಸದಸ್ಯ ಚೆನ್ನವೀರ ಅಂಗಡಿ ಮತ್ತಿತರರು ಇದ್ದರು.