ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ನಮ್ಮ ತಾಲೂಕಿನ ರಸ್ತೆಗಳು ಹಾಗೂ ಸೇತುವೆಗಳ ಅಭಿವೃದ್ಧಿ ಕಾಮಗಾರಿಗೆ ಒಟ್ಟು ₹131 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.
ಕನ್ನಡಪ್ರಭ ವಾರ್ತೆ ಖಾನಾಪುರ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಡಿ ನಮ್ಮ ತಾಲೂಕಿನ ರಸ್ತೆಗಳು ಹಾಗೂ ಸೇತುವೆಗಳ ಅಭಿವೃದ್ಧಿ ಕಾಮಗಾರಿಗೆ ಒಟ್ಟು ₹131 ಕೋಟಿ ಅನುದಾನ ಮಂಜೂರಾಗಿದೆ ಎಂದು ಶಾಸಕ ವಿಠ್ಠಲ ಹಲಗೇಕರ ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಅನುದಾನದಲ್ಲಿ ಮುಖ್ಯವಾಗಿ ಮಂತುರ್ಗಾ ಬಳಿಯ ಅಲಾತ್ರಿ ಹಳ್ಳದ ಕೆಳಸೇತುವೆಯನ್ನು ಎತ್ತರಿಸುವುದು, ಪಾರಿಶ್ವಾಡ ಬಳಿಯ ಮಲಪ್ರಭಾ ನದಿಯ ಸೇತುವೆಯನ್ನು ದುರಸ್ತಿಗೊಳಿಸುವುದು, ಇಟಗಿ-ಬೀಡಿ-ಪಾರಿಶ್ವಾಡ-ಅವರೊಳ್ಳಿ-ಲಿಂಗನಮಠ ಹಾಗೂ ವಿವಿಧ ಭಾಗಗಳ ರಸ್ತೆ ಅಭಿವೃದ್ಧಿಗೊಳಿಸುವುದು ಸೇರಿದಂತೆ ತಾಲೂಕಿನ ಜನರಿಗೆ ಅನುಕೂಲವಾಗುವ ಅನೇಕ ಕಾಮಗಾರಿಗಳು ನಡೆಯಲಿವೆ. ಈಗಾಗಲೇ ಅನೇಕ ಕಾಮಗಾರಿಗಳು ಆರಂಭವಾಗಿದ್ದು, ಇನ್ನೂ ಕೆಲವು ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯ ಅಂತಿಮ ಹಂತದಲ್ಲಿವೆ ಎಂದರು.ಕೇಂದ್ರ ಸರ್ಕಾರದ ಸಿಆರ್‌ಐಎಫ್ ಯೋಜನೆಯ ಒಟ್ಟು ₹22 ಕೋಟಿ ಅನುದಾನದಲ್ಲಿ ನೀಲಾವಡೆ-ಕಾನಸುಲಿ ಕ್ರಾಸ್, ಗೋಲ್ಯಾಳಿ-ಬೆಟಗೇರಿ, ಖಾನಾಪುರ-ಲಿಂಗನಮಠ ಮಾರ್ಗದ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಿಎಂಐಡಿಪಿ ಯೋಜನೆಯಡಿ ಯಡೋಗಾ-ಚಾಪಗಾಂವ, ಗರ್ಲಗುಂಜಿ-ಸಣ್ಣಹೊಸೂರು, ತೋಪಿನಕಟ್ಟಿ-ಲೋಕೊಳ್ಳಿ ಕ್ರಾಸ್ ಹಾಗೂ ಬೈಲೂರು-ದೇವಾಚಿಹಟ್ಟಿ ರಸ್ತೆಗಳಿಗೆ ತಲಾ 1 ಕೋಟಿ ಅನುದಾನ ಮಂಜೂರಾಗಿದೆ. ರಾಜ್ಯ ಸರ್ಕಾರದ ಎಸ್‌ಎಚ್‌ಡಿಪಿ ಯೋಜನೆಯ 12 ಕೋಟಿ ಅನುದಾನದಲ್ಲಿ ಲಾಲವಾಡಿ-ಕೊಡಚವಾಡ, ಅವರೊಳ್ಳಿ-ಬಿಳಕಿ, ಇಟಗಿ-ಪಾರಿಶ್ವಾಡ ಮಾರ್ಗದಲ್ಲಿ ಸಿಸಿ ರಸ್ತೆ ಹಾಗೂ ಡಾಂಬರೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ 28 ಕೋಟಿ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಬೇಕವಾಡ ಕ್ರಾಸ್-ಇಟಗಿ ಕ್ರಾಸ್ ನಡುವಿನ ಸಿಂಧನೂರು ಹೆಮ್ಮಡಗಾ ರಾಜ್ಯ ಹೆದ್ದಾರಿಯ ಅಗಲೀಕರಣ ಕಾಮಗಾರಿ ನಡೆಯಲಿದೆ. ಜೊತೆಗೆ ತಾಲೂಕಿನಲ್ಲಿ ಈಗಿರುವ 3.5 ಮೀಟರ್ ಅಗಲದ ಎಲ್ಲ ರಸ್ತೆಗಳನ್ನು 5 ಮೀಟರ್ ಅಗಲಕ್ಕೆ ವಿಸ್ತರಿಸುವ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿದೆ ಎಂದು ತಿಳಿಸಿದರು.ಕೇಂದ್ರದ ಪ್ರಗತಿಪಥ ಯೋಜನೆಯ ₹15 ಕೋಟಿ ಅನುದಾನದಲ್ಲಿ ಗಣೇಬೈಲ-ಕಾಟಗಾಳಿ, ಕಕ್ಕೇರಿ-ಗುಂಡೇನಟ್ಟಿ, ಭೂರಣಕಿ ಕ್ರಾಸ್-ಘಷ್ಟೊಳ್ಳಿ, ಕಕ್ಕೇರಿ-ಚುಂಚವಾಡ, ಮುಗವಡೆ-ಕಬನಾಳಿ ರಸ್ತೆಗಳ ಅಭಿವೃದ್ಧಿಗೆ ಅನುಮೋದನೆ ದೊರೆತಿದ್ದು, ಈ ಕಾಮಗಾರಿಗಳು ಪ್ರಸ್ತುತ ಟೆಂಡರ್ ಪ್ರಕ್ರಿಯೆಯ ಹಂತದಲ್ಲಿವೆ. ಟೆಂಡರ್ ಹಂತದ ಎಲ್ಲ ಕಾಮಗಾರಿಗಳು ಮಳೆಗಾಲದ ನಂತರ ಆರಂಭವಾಗಲಿವೆ. ಮೇರಡಾ-ಹಲಸಿ ರಸ್ತೆಯ ಕಾಮಗಾರಿ ಪೂರ್ಣಗೊಂಡಿದ್ದು, ಈ ಮಾರ್ಗದ ಇನ್ನುಳಿದ ಕಾಮಗಾರಿಗೂ ಅನುಮೋದನೆ ದೊರೆತಿದೆ ಎಂದರು.
₹23 ಕೋಟಿ ಅನುದಾನದಲ್ಲಿ ಸಿಂಧನೂರು-ಹೆಮ್ಮಡಗ ರಾಜ್ಯ ಹೆದ್ದಾರಿಯ ಅಲಾತ್ರಿ ಹಳ್ಳದ ಸೇತುವೆ, ಪಾರಿಶ್ವಾಡ ಸಮೀಪದ ಮಲಪ್ರಭಾ ನದಿಯ ಮೇಲೆ ಸೇತುವೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ₹8 ಕೋಟಿ ವಿಶೇಷ ಅನುದಾನದಲ್ಲಿ ಬೈಲೂರು ಗ್ರಾಮದ ಸಂಪರ್ಕ ರಸ್ತೆಗೆ ₹4 ಕೋಟಿ, ಶಿವೋಲಿ-ಚಾಪಗಾಂವ, ಬೋಗೂರು ಮತ್ತು ಬಿದರಭಾವಿ ಗ್ರಾಮಗಳ ಸಂಪರ್ಕ ರಸ್ತೆಗೆ ಒಟ್ಟು ₹4 ಕೋಟಿ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದೆ. ಕಳೆದ ವರ್ಷ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ನಿಧಿಯಿಂದ ಮಂಜೂರಾಗಿದ್ದ ₹25 ಕೋಟಿ ಅನುದಾನದಲ್ಲಿ ದೇವಾಲಯಗಳ ಜೀರ್ಣೋದ್ಧಾರ, ಗ್ರಾಮೀಣ ಭಾಗದ ವಿವಿಧೆಡೆ ಸಿಸಿ ರಸ್ತೆಗಳ ನಿರ್ಮಾಣ, ಶಾಲೆಗಳ ದುರಸ್ತಿ, ಕ್ರೀಡಾಂಗಣಗಳ ಅಭಿವೃದ್ಧಿ ಸೇರಿದಂತೆ ವಿವಿಧ ಲೋಕೋಪಯೋಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಖಾನಾಪುರ ಪಟ್ಟಣದಲ್ಲಿ ಒಟಿಡಿಪಿ ಯೋಜನೆಯ ₹14 ಕೋಟಿ ಅನುದಾನದಲ್ಲಿ ಸಿ.ಸಿ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.ಖಾನಾಪುರ ತಾಲೂಕಿನ ಗರ್ಲಗುಂಜಿ-ನಂದಿಹಳ್ಳಿ, ಗರ್ಲಗುಂಜಿ-ತೋಪಿನಕಟ್ಟಿ, ಇದ್ದಲಹೊಂಡ-ಮಾಳ ಅಂಕಲೆ, ನಾಗುರ್ಡಾ-ಕಾಟಗಾಳಿ, ಅಲ್ಲೋಳಿ-ಕಾನಸುಲಿ, ಮಳವ-ನೀಲಾವಡೆ, ನಾಗುರ್ಡಾ ವಾಡಾ ಸಂಪರ್ಕ ರಸ್ತೆ, ಜಾಂಬೋಟಿ ವಾಡಾ ಸಂಪರ್ಕ ರಸ್ತೆ, ಪೂರ ಸಂಪರ್ಕ ರಸ್ತೆ ಹಾಗೂ ರುಮೇವಾಡಿ ಸಂಪರ್ಕ ರಸ್ತೆ ಸೇರಿದಂತೆ ಹತ್ತು ರಸ್ತೆ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ರಾಷ್ಟ್ರೀಯ ಹೆದ್ದಾರಿಯಿಂದ ಗಂಗವಾಳಿ ಗ್ರಾಮದ ಸಂಪರ್ಕ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ.
-ವಿಠ್ಠಲ ಹಲಗೇಕರ, ಶಾಸಕರು.