ಕನ್ನಡಪ್ರಭ ವಾರ್ತೆ ಮಂಡ್ಯ
ಡಾ.ಗುರುರಾಜ್ ಕರ್ಜಗಿ ಅವರು ಲಘು ಉಪಾಹಾರವನ್ನು ಸೇವಿಸುತ್ತಲೇ ಮಾತಿಗಿಳಿದರು. ಈ ಸಮಯದಲ್ಲಿ ಸತ್ಯಹರಿಶ್ಚಂದ್ರನ ಬದುಕು, ಶ್ರೀರಾಮನ ಆದರ್ಶ, ಸೀತಾ ಅಗ್ನಿಪ್ರವೇಶ ಪ್ರಸಂಗ, ಶ್ರೀಕೃಷ್ಣನ ಬಾಲಲೀಲೆ, ಜ್ಞಾನ ಸೂರ್ಯ ಭೀಷ್ಮ ಸೇರಿದಂತೆ ಅನೇಕ ಪುರಾಣ ಪ್ರಸಂಗಗಳು ಎದುರಾದವು. ಜಪಾನ್‌ನಲ್ಲಿರುವ ಜನರ ನಡವಳಿಕೆ, ಡಿವಿಜಿ ಅವರ ಬಗೆಗಿನ ಗಂಭೀರ ಮತ್ತು ಹಾಸ್ಯ ಸನ್ನಿವೇಶಗಳು, ಪೋಷಕರಾಗಿ ಮಕ್ಕಳಿಗೆ ಹೇಳಿಕೊಡಬೇಕಾದ ಮೌಲ್ಯಗಳು, ದ್ವೇಷದ ಮಾತುಗಳಿಂದ ದೂರವಿದ್ದು, ಮನಸ್ಸನ್ನು ಹಗುರವಾಗಿಸುವ ಮಾತುಗಳಿಂದ ಎಲ್ಲರನ್ನೂ ಆಕರ್ಷಿಸುವ ವ್ಯಕ್ತಿತ್ವ ಕಟ್ಟಿಕೊಳ್ಳುವುದನ್ನು ಸೊಗಸಾಗಿ ತಿಳಿಸಿಕೊಟ್ಟರು.
ಸತ್ಯಹರಿಶ್ಚಂದ್ರನ ಸಿನಿಮಾಗೆ ಅಜ್ಜನ ಜೊತೆ ಹೋದ ಮೊಮ್ಮಗ ಸಿನಿಮಾ ನೋಡಿ ಹೊರಬಂದ ನಂತರ ಹರಿಶ್ಚಂದ್ರನಂತೆ ನೀನಾಗಬೇಕು ಎಂದಾಗ ಆ ಮಗು ಒಪ್ಪಲಿಲ್ಲ. ಇಡೀ ಜೀವನ ಅಳುವುದಕ್ಕೆ ನನ್ನಿಂದ ಸಾಧ್ಯವಿಲ್ಲ ಎಂದಿತಂತೆ. ಆದರೆ, ಹರಿಶ್ಚಂದ್ರ ಕಷ್ಟಪಟ್ಟಿದ್ದು ಕೇವಲ ಎರಡೇ ವರ್ಷ. ನೂರಾರು ವರ್ಷ ಸುಖವಾಗಿ ಬಾಳಿ ಬದುಕಿದ್ದನ್ನು ಆ ಮಗುವಿಗೆ ಯಾರೂ ಹೇಳಿಕೊಡಲೇ ಇಲ್ಲ. ಹಾಗಾಗಿ ಮಕ್ಕಳಿಗೆ ಮೌಲ್ಯಗಳನ್ನು ತಿಳಿಸಿಕೊಡುವಲ್ಲಿ ಪೋಷಕರಾದ ನಾವು ವಿಫಲರಾಗಿದ್ದೇವೆ ಎಂದರು.ಶ್ರೀರಾಮ ಸೀತೆಯೊಂದಿಗೆ ಮಾಡಿದ್ದ ವನವಾಸವಲ್ಲ. ಡಿವಿಜಿ ಪ್ರಕಾರ ಅದು ಐತಿಹಾಸಿಕ ಹನಿಮೂನ್. ಸೀತೆಯನ್ನು ಎರಡು ಬಾರಿ ಶ್ರೀರಾಮ ಅಗ್ನಿಪ್ರವೇಶಕ್ಕೆ ಗುರಿಪಡಿಸಿದ. ಏಕೆಂದರೆ, ಸೀತೆ ಪತಿವ್ರತೆ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಡಬೇಕಿತ್ತು ಮತ್ತು ಎರಡನೇ ಬಾರಿ ಅಗ್ನಿಪ್ರವೇಶಿಸುವಾಗ ಶ್ರೀರಾಮನ ಅವತಾರ ಮುಗಿಯುವ ಹಂತದಲ್ಲಿತ್ತು. ಸೀತೆ ಭೂಮಿಯಿಂದ ಬಂದವಳು. ಅವಳು ಭೂಮಿಗೇ ಸೇರಬೇಕಿತ್ತು. ಆಕೆ ಸುಮಂಗಲಿಯಾಗಿ ಅಂತ್ಯ ಕಾಣಬೇಕಿತ್ತು. ಸಾಯುವ ಸಮಯದಲ್ಲೂ ಸೀತೆ ತಾನು ಎಷ್ಟೇ ಜನ್ಮ ಎತ್ತಿದರೂ ಶ್ರೀರಾಮನೇ ನನ್ನ ಪತಿಯಾಗಬೇಕೆಂದು ಹಂಬಲಿಸಿದವಳು. ಸೀತೆ ಸತ್ತ ನಂತರ ಶ್ರೀರಾಮನು ಹೆಚ್ಚು ಕಾಲ ಉಳಿಯಲಿಲ್ಲ ಇಬ್ಬರ ನಡುವಿನ ಪವಿತ್ರ ಬಂಧವನ್ನು ವಿವರಿಸಿದರು.
ಮಹಾಭಾರತ ಯುದ್ಧ ೧೭ನೇ ದಿನಕ್ಕೆ ಕಾಲಿಟ್ಟಿತ್ತು. ಪಾಂಡವರ ಕಡೆ ಹೆಚ್ಚು ಹಾನಿಯಾಗಿರಲಿಲ್ಲ. ಕೌರವರು ತುಂಬಾ ಕಳೆದುಕೊಂಡಿದ್ದರು. ಆ ಸಮಯದಲ್ಲಿ ಪಾಂಡವರ ಜೊತೆಯಲ್ಲಿದ್ದುಕೊಂಡು ಎಲ್ಲರನ್ನೂ ನಗಿಸುತ್ತಿದ್ದ ಶ್ರೀಕೃಷ್ಣ ಗಂಭೀರವಾಗಿದ್ದನು. ಆತನನ್ನು ಕಾಡುತ್ತಿರುವ ಚಿಂತೆಯ ಬಗ್ಗೆ ಕೇಳಿದಾಗ ಭೀಷ್ಮನೆಂಬ ಜ್ಞಾನ ಸೂರ್ಯ ಮುಳುಗುತ್ತಿದ್ದಾನೆ. ಅವನ ಬಳಿ ಹೋಗಿ ಬದುಕಿನ ರೀತಿ-ನೀತಿಗಳನ್ನು ತಿಳಿದುಕೊಳ್ಳಿ ಎಂದು ಪಾಂಡವರಿಗೆ ಹೇಳುತ್ತಾನೆ. ಆಗ ಅರ್ಜುನನು ಭೀಷ್ಮರ ಈ ಸ್ಥಿತಿಗೆ ನಾನು ಕಾರಣ ಎಂದು ನೊಂದು ಹೇಳಿದಾಗ ಶ್ರೀಕೃಷ್ಣ ಇದಕ್ಕೆ ಕಾರಣ-ಕರ್ತೃ ಎಲ್ಲವೂ ನಾನೇ. ನೀನು ನಿನ್ನ ಕರ್ತವ್ಯ ಮಾಡಿದ್ದೆಯಷ್ಟೇ ಎಂದು ಹೇಳುವ ಪ್ರಸಂಗವನ್ನು ಕಟ್ಟಿಕೊಟ್ಟರು.
ಸಾಹಿತಿ ಡಿ.ವಿ.ಗುಂಡಪ್ಪನವರ ಬಗ್ಗೆಯೂ ಸಾಕಷ್ಟು ವಿಚಾರಗಳನ್ನು ತೆರೆದಿಟ್ಟು ಮಾತನಾಡಿದರು. ಅವರೊಮ್ಮೆ ಧಾರವಾಡದ ವೈಸ್ ಛಾನ್ಸಲರ್ ಜೊತೆ ಕಾರಿನಲ್ಲಿ ಹೊರಟಿದ್ದರು. ದಾರಿ ಮಧ್ಯೆ ಕಾರು ಕೆಟ್ಟುನಿಂತಿತು. ಕಾರು ರಿಪೇರಿಗೆ ಅರ್ಧಗಂಟೆಯಾಗಲಿದೆ ಎಂದು ಚಾಲಕ ಹೇಳಿದಾಗ, ವೈಸ್ ಛಾನ್ಸಲರ್ ಅವರು ಡಿವಿಜಿ ಅವರನ್ನು ಸಮೀಪದಲ್ಲೇ ಇದ್ದ ಸ್ನೇಹಿತರ ಮನೆಗೆ ಕರೆದೊಯ್ದು ಕೂರಿಸಿದರು. ಅರ್ಧ ಗಂಟೆ ಬಳಿಕ ಹೊರಡೋಣವೇ ಎಂದಾಗ, ಮನೆಯಲ್ಲಿದ್ದ ಅಮ್ಮನವರು ಈಗಷ್ಟೇ ಅವರೆಕಾಯಿಯನ್ನು ಬಿಡಿಸಿಕೊಂಡು ಹೋಗಿದ್ದಾರೆ. ಬಹುಶಃ ಉಪ್ಪಿಟ್ಟು ಮಾಡಲು ಇರಬಹುದು. ತಿಂದೇ ಹೋದರಾಯಿತು ಎಂದು ಹೇಳಿದ ಹಾಸ್ಯ ಪ್ರಸಂಗವನ್ನು ನೆನಪಿಸಿ ಎಲ್ಲರನ್ನೂ ನಗಿಸಿದರು.
ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು, ಖ್ಯಾತ ವೈದ್ಯ ಡಾ.ಬಿ.ಕೆ.ಸುರೇಶ್, ಕ್ಯಾನ್ಸರ್ ತಜ್ಞ ಡಾ.ಸಿದ್ದಪ್ಪ, ಸಾಹಿತಿ ಡಾ.ಶುಭಶ್ರೀ ಪ್ರಸಾದ್, ಕವಿಯತ್ರಿ ಭವಾನಿ ಲೋಕೇಶ್, ಉಪನ್ಯಾಸಕಿ ಡಾ.ಅನಿತಾ ಮಂಗಲ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಅಧ್ಯಕ್ಷ ಎಂ.ವಿನಯ್‌ಕುಮಾರ್, ಡಾ.ತಾರಾ, ನಳಿನಾ ಇದ್ದರು.