ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ನಾಲ್ಕು ಗ್ರಾಮ ಪಂಚಾಯಿತಿಗಳು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಗೆ ಕೆನರಾ ಬ್ಯಾಂಕ್ ಸಹಯೋಗದೊಂದಿಗೆ ಎಲ್ಲಾ ಅರ್ಹ ಫಲಾನುಭವಿಗಳನ್ನು ನೋಂದಾಯಿಸುವ ಮೂಲಕ ಶೇಕಡ ೧೦೦ ರಷ್ಟು ಗುರಿಯನ್ನು ಸಾಧಿಸಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭಂ ಶುಕ್ಲಾ ಅವರು ತಿಳಿಸಿದ್ದಾರೆ.

ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಗುರಿಯನ್ನು ಸಾಧಿಸಿದ ಸಕಲೇಶಪುರ ತಾಲೂಕಿನ ಕುರುಭತ್ತೂರು ಹಾಗೂ ಐಗೂರು, ಹಾಸನ ತಾಲೂಕಿನ ಅಂಬುಗ, ಮತ್ತು ಬೇಲೂರು ತಾಲೂಕಿನ ಯಲಹಂಕ ಗ್ರಾಮ ಪಂಚಾಯಿತಿಗಳ ಪಿಡಿಒಗಳಿಗೆ ಘೋಷಣಾ ಪತ್ರವನ್ನು ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಗುರಿ ಸಾಧಿಸಲು ಶ್ರಮಿಸಿದ ಪಿಡಿಒಗಳಾದ ಸಿ ಎಂ ಮೋಹನ್, ದೀಪಾ ಜಿ ಎಂ, ವಸೀಮುದ್ದೀನ್, ಹಂಸ ಕುಮಾರಿ ಡಿ. ಆರ್‌. ಆರ್ಥಿಕ ಸಾಕ್ಷರತಾ ಕೇಂದ್ರದ ಪ್ರತಿನಿಧಿಗಳಾದ ಗಂಗಾಧರ, ವಿರೂಪಾಕ್ಷ ಹಾಗು ಮಲ್ಲೇಶ್ ಇವರನ್ನು ಅಭಿನಂದಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ತಫಝುಲ್ ಹುಸೇನ್, ಹಾಸನ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಲತಾ ಸರಸ್ವತಿ ಉಪಸ್ಥಿತರಿದ್ದರು.