ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದಲ್ಲಿನ (ಕೆಪಿಎಸ್‌ಸಿ) ಪಶು ವೈದ್ಯಾಧಿಕಾರಿ, ಇತರೆ ನೇಮಕಾತಿ ಹಗರಣಗಳ ಸಂಬಂಧ ಹೊಸದಾಗಿ ತನಿಖೆ ನಡೆಸಲು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿರುವ ಹೈಕೋರ್ಟ್‌, 100 ದಿನಗಳಲ್ಲಿ ತನಿಖೆಯ ಅಂತಿಮ ವರದಿ ಹಾಗೂ 30 ದಿನಕ್ಕೊಮ್ಮೆ ತನಿಖಾ ಪ್ರಗತಿ ವರದಿಯನ್ನು ಸಲ್ಲಿಸಬೇಕೆಂದು ಆದೇಶಿಸಿದೆ.

ಕೆಪಿಎಸ್‌ಸಿ ಹಗರಣದ ತನಿಖೆಯನ್ನು ಕೇಂದ್ರ ತನಿಖಾ ಸಂಸ್ಥೆಗೆ (ಸಿಬಿಐ) ವಹಿಸಲು ಕೋರಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಮತ್ತು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಸೋಮವಾರ ಈ ತೀರ್ಪು ನೀಡಿದೆ.

ಅಲ್ಲದೆ, ಪ್ರಕರಣದ ತನಿಖೆ ನಡೆಸಲು ಅಪರಾಧ ತನಿಖಾ ದಳ (ಸಿಐಡಿ) ಸಮರ್ಥವಾಗಿದೆ. ಇದರಿಂದ ಸಿಐಡಿಯೇ ತನಿಖೆ ಮುಂದುವರಿಸಲು ಅನುಮತಿಸಬೇಕು ಎಂಬ ರಾಜ್ಯ ಸರ್ಕಾರದ ವಾದವನ್ನು ನ್ಯಾಯಪೀಠ ಸಾರಾಸಗಟಾಗಿ ತಿರಸ್ಕರಿಸಿದೆ.


ತಂಡ ರಚನೆ:

ರಾಜ್ಯ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್‌ ಕುಮಾರ್‌ ಅವರು ಎಸ್‌ಐಟಿಯ ಮುಖ್ಯಸ್ಥರಾಗಿರುತ್ತಾರೆ. ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕಿಯಾದ ಐಜಿಪಿ ಡಾ.ದಿವ್ಯಾ ಗೋಪಿನಾಥ್‌, ಉಪ ಪೊಲೀಸ್‌ ಆಯುಕ್ತ ಅನೂಪ್‌ ಶೆಟ್ಟಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್‌ ಚೌಕ್ಸೆ ಮತ್ತು ಉಪ ಪೊಲೀಸ್‌ ಆಯುಕ್ತೆ ಕ್ಷಮಾ ಮಿಶ್ರಾ ಅವರು ಎಸ್ಐಟಿ ಸದಸ್ಯರಾಗಿರುತ್ತಾರೆ. ತಾನು ರಚಿಸಿರುವ ಎಸ್‌ಐಟಿಯನ್ನು ಪೊಲೀಸ್‌ ಠಾಣೆಯನ್ನಾಗಿಸಿ ಘೋಷಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು ಎಂದು ಪೀಠ ತಿಳಿಸಿದೆ.

ವಾರದೊಳಗೆ ದಾಖಲೆ ಹಸ್ತಾಂತರಿಸಿ:

ಪ್ರಕರಣ ಸಂಬಂಧ 2026ರ ಸೆ.8ರಿಂದ ಸಿಐಡಿ ತನಿಖೆ ನಡೆಸುತ್ತಿದೆ. ಸಿಐಡಿಯು ಈವರೆಗೆ ನಡೆಸಿರುವ ತನಿಖೆಯ ವರದಿ, ಸಂಗ್ರಹಿಸಿರುವ ಎಲ್ಲ ದಾಖಲೆಗಳು, ವಿದ್ಯುನ್ಮಾನ ಸಾಕ್ಷ್ಯಗಳನ್ನು ಒಂದು ವಾರದಲ್ಲಿ ಎಸ್‌ಐಟಿಗೆ ಹಸ್ತಾಂತರಿಸಬೇಕು. ಸಿಐಡಿ ಮತ್ತು ಸಂಬಂಧಪಟ್ಟ ಠಾಣಾ ಪೊಲೀಸರು ಎಸ್‌ಐಟಿ ಕೋರುವ ಎಲ್ಲ ನೆರವು ಒದಗಿಸಬೇಕು. ಸರ್ಕಾರದ ಎಲ್ಲ ಇಲಾಖೆಗಳು, ತನಿಖಾ ಸಂಸ್ಥೆಗಳು, ಸಾರ್ವಜನಿಕ ಪ್ರಾಧಿಕಾರಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣವಾದ ಸಹಕಾರವನ್ನು ಎಸ್‌ಐಟಿಗೆ ನೀಡಬೇಕು. ತನಗೆ ಅಗತ್ಯವಾದ ವಿಧಿ ವಿಜ್ಞಾನ ಪ್ರಯೋಗಾಲಯದ ಸೌಲಭ್ಯ, ಸೈಬರ್‌, ಆರ್ಥಿಕ, ತಾಂತ್ರಿಕ ಮತ್ತು ಇತರೆ ವಿಶೇಷ ನೆರವು ಪಡೆಯಲು ಎಸ್‌ಐಟಿ ಸ್ವತಂತ್ರವಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಕೆಪಿಎಸ್‌ಸಿ ನೇಮಕಾತಿ ಹಗರಣದ ಕುರಿತು ವಿಧಾನಸೌಧ ಠಾಣೆಯಲ್ಲಿ ದಾಖಲಾಗಿರುವ ಎರಡೂ ಎಫ್‌ಐಆರ್‌ಗಳಲ್ಲಿನ ಆರೋಪಗಳು ಮತ್ತು ತನಿಖೆ ಸಂದರ್ಭದಲ್ಲಿ ಹೊರಹೊಮ್ಮುವ ಎಲ್ಲ ವಿಚಾರಗಳ ಕುರಿತು ಎಸ್‌ಐಟಿಯು ವಿಸ್ತೃತವಾದ ತನಿಖೆ ನಡೆಸಬೇಕು. ಪ್ರಕರಣದ ಮೆರಿಟ್‌ ಮೇಲೆ ಈ ಆದೇಶದಲ್ಲಿ ನ್ಯಾಯಾಲಯ ವ್ಯಕ್ತಪಡಿಸಿರುವ ಅಭಿಪ್ರಾಯದ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರ ಮತ್ತು ಪಾರದರ್ಶಕವಾಗಿ ಎಸ್‌ಐಟಿ ತನಿಖೆ ನಡೆಸಬೇಕು. ಯಾವುದೇ ಅಧಿಕಾರಿ ಅಥವಾ ಪ್ರಾಧಿಕಾರ ತನಿಖೆಯಲ್ಲಿ ಮೂಗು ತೂರಿಸಬಾರದು ಹಾಗೂ ಪ್ರಭಾವಿಸಲು ಯತ್ನಿಸಬಾರದು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ಈ ಎಸ್‌ಐಟಿ ತನಿಖೆಯು ಪ್ರಸ್ತುತ ಹೆಸರಿಸಲಾದ ವ್ಯಕ್ತಿಗಳು, ಮಾಡಲಾದ ಆರೋಪಗಳು ಅಥವಾ ಈಗ ಗ್ರಹಿಸಲಾದ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರಬಾರದು. ತನಿಖೆಯ ವಿಷಯ ವಸ್ತುವಿನೊಂದಿಗೆ ಸಂಬಂಧವಿರುವ ಬೇರೆ ಯಾವುದೇ ವ್ಯಕ್ತಿ, ಅಪರಾಧ, ವ್ಯವಹಾರ ಅಥವಾ ಕೃತ್ಯದಲ್ಲಿ ಭಾಗಿಯಾಗಿರುವಿಕೆ ಕುರಿತು ತನಿಖೆ ವೇಳೆ ಸಾಕ್ಷ್ಯಗಳು ಕಂಡುಬಂದರೆ, ಎಸ್‌ಐಟಿಯು ಆ ಸಾಕ್ಷ್ಯಗಳು ಎಲ್ಲಿಗೆ ಕೊಂಡೊಯ್ಯುತ್ತವೆಯೋ ಅಲ್ಲಿಗೆಲ್ಲಾ, ಕಾನೂನಿಗೆ ಸಂಪೂರ್ಣವಾಗಿ ಬದ್ಧವಾಗಿ ತನಿಖೆ ಮುಂದುವರಿಸಬೇಕು. ಹಗರಣ ಸಂಬಂಧ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಇ.ಡಿ ಮತ್ತು ಎಸ್‌ಐಟಿಯು ಪರಸ್ಪರ ಸಹಕಾರ ಮತ್ತು ನೆರವಿನ ಮೂಲಕ ತನಿಖೆ ನಡೆಸಬೇಕು ಎಂದು ಎಸ್‌ಐಟಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಅಂತಿಮವಾಗಿ ಪ್ರಕರಣ ಸಂಬಂಧ ತಮ್ಮ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಕೆಲ ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಗಳನ್ನು ಎಸ್‌ಐಟಿ ಸಲ್ಲಿಸಲಿರುವ ವರದಿ ಆಧರಿಸಿ ಪರಿಗಣಿಸಲಾಗುವುದು ಎಂದು ತಿಳಿಸಿರುವ ಪೀಠ, ಅರ್ಜಿಗಳ ವಿಚಾರಣೆಯನ್ನು ಮುಂದಿನ ವರ್ಷ ಜನವರಿ 5ಕ್ಕೆ ಮುಂದೂಡಿದೆ.

- ಅಲೋಕ್‌ ನೇತೃತ್ವದ ಪಂಚಸದಸ್ಯರ ಟೀಂ ರಚಿಸಿದ ಹೈಕೋರ್ಟ್‌

- 100 ದಿನದಲ್ಲಿ ವರದಿ, ತಿಂಗಳಿಗೊಮ್ಮೆ ಪ್ರಗತಿ ತಿಳಿಸಲು ಸೂಚನೆ

- ಸಾಲು ಸಾಲು ಅಕ್ರಮಗಳಿಂದ ವಿವಾದಕ್ಕೆ ಸಿಲುಕಿರುವ ಕರ್ನಾಟಕ ಲೋಕಸೇವಾ ಆಯೋಗ

- 400 ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಿಂದ ರಾಜ್ಯಾದ್ಯಂತ ಭಾರಿ ಸಂಚಲನ

- ಒಂದೇ ಹಂತದಲ್ಲಿ ಡಿಗ್ರಿ ಪಾಸ್‌ ಮಾಡಲು ವಿಫಲರಾದವರಿಗೆ ಕೆಪಿಎಸ್ಸಿ ಪರೀಕ್ಷೆಯಲ್ಲಿ ರ್‍ಯಾಂಕ್‌

- ಹಣದಾಸೆಗೆ ಐಎಎಸ್‌ ಅಧಿಕಾರಿ, ಆತನ ಆಪ್ತ ಕನ್ನಾಳೆಯಿಂದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪ

- ಕೆಲವು ಅಭ್ಯರ್ಥಿಗಳಿಗೆ ರೆಸಾರ್ಟ್‌ನಲ್ಲಿ ಪರೀಕ್ಷಾ ತರಬೇತಿ ನೀಡಿದ ಬಗ್ಗೆ ಗುರುತರವಾದ ದೂರು

- ಈಗಾಗಲೇ ಐಎಎಸ್‌ ಜ್ಞಾನೇಂದ್ರ, ಕನ್ನಾಳೆ ಬಂಧನ. ಇದೀಗ ಪ್ರಕರಣ ಎಸ್‌ಐಟಿ ಹೆಗಲಿಗೆ