ಕಳೆದ ಒಂದು ವರ್ಷದಿಂದ ನಡೆದ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರ ನಡೆಸುವ ನೇರ ನೇಮಕಾತಿಗಳಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿತ್ತು. ಇದರ ಜತೆಗೆ ಆರು ತಿಂಗಳ ಒಳಗೆ 72,000 ಹುದ್ದೆ ಭರ್ತಿ ಮಾಡುವುದಾಗಿ ರಾಜ್ಯ ಸರ್ಕಾರವು ಜೂನ್‌ನಲ್ಲಿ ಘೋಷಿಸಿತ್ತು. ಆದರೆ, ಈ ವರೆಗೆ ಹೊರಡಿಸಿರುವ ಎಲ್ಲ ಅಧಿಸೂಚನೆ ಸೇರಿದರೂ 25,000 ಹುದ್ದೆ ದಾಟುತ್ತಿಲ್ಲ.

ಧಾರವಾಡ:

ರಾಜ್ಯ ಸರ್ಕಾರ ಘೋಷಿಸಿದಂತೆ 72,000 ಹುದ್ದೆಗಳಿಗೆ ಕೂಡಲೇ ಅಧಿಸೂಚನೆ ಹೊರಡಿಸಿ ಆರು ತಿಂಗಳ ಒಳಗೆ ನೇಮಕಾತಿ ಪತ್ರ ನೀಡಬೇಕು ಹಾಗೂ ಕೆಪಿಎಸ್‌ಸಿ ಭ್ರಷ್ಟಾಚಾರ ತಡೆಗಟ್ಟಿ ಪಾರದರ್ಶಕ ನೇಮಕಾತಿಗೆ ಒತ್ತಾಯಿಸಿ ಎಐಡಿವೈಒ ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ವಿವಿಧ ಹುದ್ದೆಗಳಿಗೆ ಐಟಿಐ ಅನ್ನು ಪಿಯುಸಿಗೆ ತತ್ಸಮಾನವಾಗಿ ಪರಿಗಣಿಸಲು ಸರ್ಟಿಫಿಕೇಟ್ ಕಡ್ಡಾಯ ಮಾಡಿರುವುದನ್ನು ರದ್ದುಗೊಳಿಸಲು ಹಾಗೂ ವಿಷಯವಾರು ಮತ್ತು ಚಿತ್ರಕಲೆ, ಸಂಗೀತ ಸೇರಿದಂತೆ ವಿಶೇಷ ಶಿಕ್ಷಕರನ್ನು ನೇಮಕಾತಿ ಮಾಡಲು ಇದೇ ಸಂದರ್ಭದಲ್ಲಿ ಆಗ್ರಹಿಸಲಾಯಿತು.

ಎಐಡಿವೈಒ ಜಿಲ್ಲಾಧ್ಯಕ್ಷ ಭವಾನಿ ಶಂಕರಗೌಡ ಮಾತನಾಡಿ, ಕಳೆದ ಒಂದು ವರ್ಷದಿಂದ ನಡೆದ ಹೋರಾಟದ ಪ್ರತಿಫಲವಾಗಿ ರಾಜ್ಯ ಸರ್ಕಾರ ನಡೆಸುವ ನೇರ ನೇಮಕಾತಿಗಳಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿತ್ತು. ಇದರ ಜತೆಗೆ ಆರು ತಿಂಗಳ ಒಳಗೆ 72,000 ಹುದ್ದೆ ಭರ್ತಿ ಮಾಡುವುದಾಗಿ ರಾಜ್ಯ ಸರ್ಕಾರವು ಜೂನ್‌ನಲ್ಲಿ ಘೋಷಿಸಿತ್ತು. ಆದರೆ, ಈ ವರೆಗೆ ಹೊರಡಿಸಿರುವ ಎಲ್ಲ ಅಧಿಸೂಚನೆ ಸೇರಿದರೂ 25,000 ಹುದ್ದೆ ದಾಟುತ್ತಿಲ್ಲ. ಆದ್ದರಿಂದ ಈ ಕೂಡಲೇ ಉಳಿದ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಜತೆಗೆ ಜತೆಗೆ ರಾಜ್ಯದಲ್ಲಿ ಖಾಲಿ ಇರುವ 2.84 ಲಕ್ಷ ಹುದ್ದೆಗಳಿಗೂ ನೇಮಕಾತಿ ಮಾಡಬೇಕು ಎಂದು ಒತ್ತಾಯಿಸಿದರು.

ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ:

ಕೆಪಿಎಸ್‌ಸಿ ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ತನಿಖೆಯು ನಿತ್ಯ ಭ್ರಷ್ಟಾಚಾರದ ಹೊಸ ಮಗ್ಗುಲುಗಳನ್ನು ತೆರೆದಿಡುತ್ತಿದೆ. ಇದನ್ನು ಗಮನಿಸಿದರೆ ಕಳೆದ ಐದಾರು ವರ್ಷಗಳಲ್ಲಿ ನಡೆದ ಎಲ್ಲ ನೇಮಕಾತಿಗಳನ್ನು ಭ್ರಷ್ಟಾಚಾರ ನಡೆದಿರುವುದು ಅತ್ಯಂತ ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ ಕೆಪಿಎಸ್‌ಸಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಹಾಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಯಾವುದೇ ಪ್ರಭಾವಗಳಿಲ್ಲದೆ, ಸ್ವತಂತ್ರ ಹಾಗೂ ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಸಂಘಟನಾಕಾರ ಯಲ್ಲಪ್ಪ ದೊರೆ ಮಾತನಾಡಿ, ನೇಮಕಾತಿ ಪರೀಕ್ಷೆಗಳಿಗೆ ದುಬಾರಿ ಅರ್ಜಿ ಶುಲ್ಕ ಸೇರಿದಂತೆ, ವಿವಿಧ ಜಿಲ್ಲೆಗಳಲ್ಲಿ ನಡೆಯುವ ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಸಾರಿಗೆ ವೆಚ್ಚವು ಉದ್ಯೋಗಾಕಾಂಕ್ಷಿಗಳಿಗೆ ಹೊರೆಯಾಗುತ್ತಿದೆ. ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಸುಸ್ಸಜ್ಜಿತ ಸರ್ಕಾರಿ ಗ್ರಂಥಾಲಯಗಳ ಅವಶ್ಯಕತೆ ಇದೆ. ರಜಾ ದಿನಗಳಲ್ಲಿಯೂ ಗ್ರಂಥಾಲಯಗಳನ್ನು ತೆರೆಯುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗುತ್ತದೆ ಎಂದರು.

ಈ ವೇಳೆ ಮಲ್ಲೇಶ ಚವ್ಹಾಣ, ಹನುಮಗೌಡ ದೇಸಿಗೌಡರ, ಮೌಲಾಲಿ ಹಾಗೂ ಉದ್ಯೋಗಾಕಾಂಕ್ಷಿಗಳಿದ್ದರು.