ಜನರನ್ನು ಒಗ್ಗೂಡಿಸುವ ಉತ್ತಮ ಉದ್ದೇಶದಿಂದ ಶುರುವಾಗಿರುವ ಗಣೇಶೋತ್ಸವ ಹಬ್ಬವನ್ನು ಮಹಾನಗರದಲ್ಲಿ ಗದ್ದಲ-ಗೊಂದಲ ಇಲ್ಲದಂತೆ ಪಾವಿತ್ರ್ಯತೆಯಿಂದ ಆಚರಿಸಬೇಕು.
ಧಾರವಾಡ:
ಜನರನ್ನು ಒಗ್ಗೂಡಿಸುವ ಉತ್ತಮ ಉದ್ದೇಶದಿಂದ ಶುರುವಾಗಿರುವ ಗಣೇಶೋತ್ಸವ ಹಬ್ಬವನ್ನು ಮಹಾನಗರದಲ್ಲಿ ಗದ್ದಲ-ಗೊಂದಲ ಇಲ್ಲದಂತೆ ಪಾವಿತ್ರ್ಯತೆಯಿಂದ ಆಚರಿಸಬೇಕೆಂದು ಪೊಲೀಸ್ ಆಯುಕ್ತ ಭೂಷಣ್ ಬೋರ್ಸೆ ಜನರಲ್ಲಿ ಮನವಿ ಮಾಡಿದರು.ಗಣೇಶೋತ್ಸವ ಹಬ್ಬದ ನಿಮಿತ್ತ ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಮಂಗಳವಾರ ನಡೆದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ದಸರಾ ರೀತಿಯಲ್ಲಿ ಈ ಹಬ್ಬವನ್ನು ಅವಳಿ ನಗರದಲ್ಲಿ ಆಚರಿಸುವಂತೆ ಸಾರ್ವಜನಿಕರು ಪಣ ತೊಡಬೇಕೆಂದರು.
ಗಣೇಶೋತ್ಸವದಲ್ಲಿ ಅನಾಹುತಗಳು ನಡೆಯದಂತೆ ನಡೆಸಲು ಅನೇಕರಿಂದ ಸಲಹೆ ಪಡೆದಿದ್ದೇನೆ ಎಂದ ಅವರು, ದೊಡ್ಡ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆ ಎಲ್ಲಿ ಮಾಡಲಾಗುತ್ತಿದೆ? ಯಾವಾಗ ವಿಸರ್ಜನೆ ಎಂಬೆಲ್ಲ ಮಾಹಿತಿ ಪಡೆದಿದ್ದು, ಶಾಂತಿಯುತವಾಗಿ ಹಬ್ಬದಾಚರಣೆಗೆ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.ಬ್ರಿಟಿಷರ ವಿರುದ್ಧ ಭಾರತೀಯರು ಒಗ್ಗೂಡುವ ಉದ್ದೇಶದಿಂದ ಬಾಲಗಂಗಾಧರ ತಿಲಕ್ ಅವರು ಈ ಹಬ್ಬವನ್ನು ಶುರು ಮಾಡಿದ್ದು, ಇದೊಂದು ಭಕ್ತಿಯ ಹಬ್ಬ. ಆದರೆ, ಇದನ್ನು ಮೋಜಿಗಾಗಿ ಬಳಸಬಾರದು. ಜೂಜಾಟ, ಮದ್ಯ ಸೇವನೆ, ದೊಡ್ಡ ಶಬ್ದದಲ್ಲಿ ಡಿಜೆ ಹಚ್ಚುವುದು, ಅಸಹ್ಯ ರೀತಿಯ ನೃತ್ಯ ಮಾಡದೆ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕು. ಮಂಡಳಗಳು ಪೆಂಡಾಲ್ ಹಾಗೂ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಿ, ಪೆಂಡಾಲ್‌ನಲ್ಲಿಯೇ ಮಲಗಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಿ. ಕೇವಲ ಭಕ್ತಿ ಗೀತೆಯನ್ನು ಮಾತ್ರ ಹಾಕಬೇಕು ಎಂದು ಬೊರಸೆ ಹೇಳಿದರು.
ಇದಕ್ಕೂ ಮುಂಚೆ ಸಾರ್ವಜನಿಕರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕರ್ಕಶ ಶಬ್ದದ ಡಿಜೆ ಬಂದ್ ಮಾಡುವುದೇ ಸೂಕ್ತ. ಇದು ಜನರ ಅಭಿಪ್ರಾಯವೂ ಹೌದು. ಜತೆಗೆ ಹಬ್ಬದ ಹೆಸರಿನಲ್ಲಿ ಗುಂಪು ಕಟ್ಟಿಕೊಂಡು ಒತ್ತಾಯ ಪೂರ್ವಕವಾಗಿ ಹಣ ವಸೂಲಿ ಮಾಡುತ್ತಿದ್ದು, ಪೊಲೀಸರು ಇದನ್ನು ತಡೆಯಬೇಕು. ಪಿಒಪಿ ಗಣೇಶ ಮೂರ್ತಿಗಳ ತಯಾರಿ ಹಾಗೂ ಮಾರಾಟ ನಡೆಯದಂತೆ ಎಚ್ಚರ ವಹಿಸುವುದು, ಮೆರವಣಿಗೆ ಹೋಗುವಾಗ ವಿದ್ಯುತ್ ತಂತಿ ತಾಗದಂತೆ ಎಚ್ಚರಿಕೆ ವಹಿಸುವುದು, ಹಬ್ಬದ ಸಮಯದಲ್ಲಿ ಪಾಲಿಕೆಯಿಂದ ಸ್ವಚ್ಛತೆ ಕಾಪಾಡುವುದು, ರಾತ್ರಿ ವಿದ್ಯುತ್ ವ್ಯತ್ಯಯ ಆಗದಂತೆ ಹೆಸ್ಕಾಂಗೆ ಸೂಚನೆ ನೀಡುವ ಕೆಲಸ ಆಗಬೇಕೆಂದು ಮನವಿ ಮಾಡಿದರು.ಹುಡಾ ಅಧ್ಯಕ್ಷ ರಾಬರ್ಟ್ ದದ್ದಾಪುರಿ, ಮಾಜಿ ಮೇಯರ್ ಶಿವು ಹಿರೇಮಠ, ಮುಖಂಡರಾದ ದಾನಪ್ಪ ಕಬ್ಬೇರ, ವಸಂತ ಅರ್ಕಾಚಾರ, ಶಂಕರ ಶೆಳಕೆ ಮತ್ತಿತರರು ಇದ್ದರು.