ಪಶುವೈದ್ಯಾಧಿಕಾರಿ ಹುದ್ದೆ ಮಾರಾಟ ಸಂಬಂಧ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ತಮ್ಮ ‘ಗುರು’ ಐಎಎಸ್ ಅಧಿಕಾರಿಗೆ ಯಮಾರಿಸಿ ಕೆಲ ಅಭ್ಯರ್ಥಿಗಳ ಜತೆ ‘ಡೀಲ್‌’ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಶುವೈದ್ಯಾಧಿಕಾರಿ ಹುದ್ದೆ ಮಾರಾಟ ಸಂಬಂಧ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ತಮ್ಮ ‘ಗುರು’ ಐಎಎಸ್ ಅಧಿಕಾರಿಗೆ ಯಮಾರಿಸಿ ಕೆಲ ಅಭ್ಯರ್ಥಿಗಳ ಜತೆ ‘ಡೀಲ್‌’ ಮಾಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಈ ಮಾಹಿತಿ ಹಿನ್ನೆಲೆಯಲ್ಲಿ ಕನ್ನಾಳೆಯ ಡೀಲ್‌ ಪತ್ತೆಗೆ ಸಿಐಡಿ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಆತನ ಸಂಪರ್ಕ ಜಾಲಗಳನ್ನು ತನಿಖಾ ತಂಡಗಳು ಜಾಲಾಡುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಕನ್ನಾಳೆ ಜತೆ ಆತ್ಮೀಯತೆ ಹೊಂದಿದ್ದ ಆತನ ಸಹಚರರು ಹಾಗೂ ಉಪಕೃತರಾಗಿದ್ದ ಕೆಲ ಅಭ್ಯರ್ಥಿಗಳಿಗೆ ತನಿಖೆ ಉರುಳು ಸುತ್ತಿಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಮೊದಲ ಹಂತದ ತನಿಖೆಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣ ಸಂಬಂಧ ಐಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಹಾಗೂ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಬಂಧನವಾಗಿದೆ. ಆದರೆ ತನಿಖೆಯ ಮತ್ತೊಂದು ಘಟ್ಟ ತಲುಪಿದ್ದು, ಇದರಲ್ಲಿ ಕನ್ನಾಳೆಯ ಬೇರೊಂದು ತಂಡ ಪಾತ್ರವಹಿಸಿರುವ ಬಗ್ಗೆ ಸುಳಿವು ಸಿಕ್ಕಿದೆ. ಹಣದಾಸೆಗೆ ಜ್ಞಾನೇಂದ್ರ ಅವರಿಗೆ ತಿಳಿಯದೆ ಮತ್ತಷ್ಟು ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯ ಪ್ರಶ್ನೆಗಳನ್ನು ಕನ್ನಾಳೆ ಮಾರಾಟ ಮಾಡಿರುವ ಅನುಮಾನವಿದೆ. ಈ ನಿಟ್ಟಿನಲ್ಲಿ ತನಿಖೆ ನಡೆದಿದೆ ಎಂದು ಸಿಐಡಿ ಮೂಲಗಳು ಹೇಳಿವೆ.

ನನ್ನ ಲೈಫ್ ಹಾಳಾಯಿತು: ಕನ್ನಾಳೆ ಗೋಳು:

ಐಎಎಸ್ ಅಧಿಕಾರಿ ಅಮಾನತು ರಿವೋಕ್ ಆಗುತ್ತೆ. ಅವರಿಗೆ ಮತ್ತೆ ಕೆಲಸ ಸಿಗುತ್ತೆ. ಅಭ್ಯರ್ಥಿಗಳು ಮರು ಪರೀಕ್ಷೆ ಬರೆದು ಪಶು ವೈದ್ಯರಾಗಿ ಆಯ್ಕೆಯಾಗುತ್ತಾರೆ. ಆದರೆ ಈ ಹಗರಣದಲ್ಲಿ ನನ್ನ ಜೀವನ ಮಾತ್ರ ಹಾಳಾಯಿತು!! ಹೀಗೆ ಸಿಐಡಿ ಅಧಿಕಾರಿಗಳ ಮುಂದೆ ಕನ್ನಾಳೆ ಗೋಳಾಡಿದ್ದಾನೆ ಎಂದು ತಿಳಿದು ಬಂದಿದೆ.

ತಾನು ಭಾಲ್ಕಿ ಕ್ಷೇತ್ರದಿಂದ ಎಂಎಎಲ್‌ ಆಗುತ್ತಿದ್ದೆ. ನನ್ನ ಪಕ್ಷ ನನಗೆ ಟಿಕೆಟ್ ನೀಡುತ್ತಿತ್ತು. ಆದರೆ ಈ ಕೇಸ್‌ನಲ್ಲಿ ನನ್ನನ್ನು ಬಂಧಿಸಿ ನೀವು ಎಲ್ಲ ಹಾಳು ಮಾಡಿದಿರಿ ಎಂದು ತನಿಖಾಧಿಕಾರಿ ಮುಂದೆ ಆತ ಅಲವತ್ತುಕೊಂಡಿದ್ದಾನೆ. ನಮ್ಮ ಕಡೆಯವರು (ಕಲ್ಯಾಣ ಕರ್ನಾಟಕ) ತೀರಾ ಬಡವರು. ಹಾಗಾಗಿ ಈ ರೀತಿ (ಹಗರಣ) ಮಾಡಿ ಸರ್ಕಾರಿ ಹುದ್ದೆ ಕೊಡಿಸುತ್ತಿದ್ದೆ. ಅದರಲ್ಲಿ ತಪ್ಪೇನಿದೆ? ಐಎಎಸ್ ಅಧಿಕಾರಿಗೆ ಯಾವುದೇ ತೊಂದರೆ ಇಲ್ಲ. ಜೈಲಿನಿಂದ ಹೊರಬಂದ ಬಳಿಕ ಅಮಾನತು ರಿವೋಕ್ ಆಗಿ ಮತ್ತೆ ಹುದ್ದೆ ಸಿಗುತ್ತದೆ. ಅಭ್ಯರ್ಥಿಗಳು ಸರ್ಕಾರಿ ವೈದ್ಯರಾಗುತ್ತಾರೆ. ಆದರೆ ಇಡೀ ಪ್ರಕರಣದಲ್ಲಿ ಭವಿಷ್ಯ ನಾಶವಾಗಿದ್ದು, ನನಗೆ ಮಾತ್ರ ಎಂದು ಆತ ಮರುಕಪಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.