ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ವರೆಗೆ 14,838 ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲಾಗಿದೆ. ಈ ಪೈಕಿ ಅರ್ಹ 959 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗಿದ್ದು, ಸ್ವಯಂ ಉದ್ಯೋಗಕ್ಕೆ ಇದು ನೆರವಾಗಲಿದೆ.

ಹುಬ್ಬಳ್ಳಿ:

ಮಹಿಳೆಯರನ್ನು ಕೇವಲ ಸಬಲೀಕರಣಗೊಳಿಸುವುದಷ್ಟೇ ಅಲ್ಲದೆ, ಉದ್ಯೋಗ ಸೃಷ್ಟಿಸುವ ಹಾಗೂ ಆರ್ಥಿಕವಾಗಿ ಸ್ವಾವಲಂಬಿಗಳಾಗುವ ಶಕ್ತಿಯನ್ನಾಗಿ ರೂಪಿಸುವುದು ಕೇಂದ್ರ ಸರ್ಕಾರದ ಆದ್ಯತೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ನಗರದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಕೇಂದ್ರ ಸಚಿವರ ಕಾರ್ಯಾಲಯದಲ್ಲಿ ಗುರುವಾರ ಗ್ರಾಮ ವಿಕಾಸ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಹಾಗೂ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ವರೆಗೆ 14,838 ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲಾಗಿದೆ. ಈ ಪೈಕಿ ಅರ್ಹ 959 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಲಾಗಿದ್ದು, ಸ್ವಯಂ ಉದ್ಯೋಗಕ್ಕೆ ಇದು ನೆರವಾಗಲಿದೆ ಎಂದರು.

ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಡಿ ಕ್ಷೇತ್ರದಲ್ಲಿ 10.35 ಲಕ್ಷ ಬ್ಯಾಂಕ್ ಖಾತೆ ತೆರೆಯಲಾಗಿದ್ದು, 5.74 ಲಕ್ಷ ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ 1,06,057 ಎಲ್‌ಪಿಜಿ ಸಂಪರ್ಕ ನೀಡಲಾಗಿದ್ದು, ಹೆಚ್ಚುವರಿಯಾಗಿ 2,000 ಫಲಾನುಭವಿಗಳಿಗೆ ಅಡುಗೆ ಒಲೆ ವಿತರಿಸಲಾಗಿದೆ ಎಂದು ತಿಳಿಸಿದ ಅವರು, ಮಹಿಳೆಯರು ಕೇವಲ ಉದ್ಯೋಗ ಆಕಾಂಕ್ಷಿಗಳಾಗದೆ, ಉದ್ಯೋಗ ನೀಡುವ ಶಕ್ತಿಯಾಗಿ ಬೆಳೆಯಬೇಕು ಎಂಬುದು ಪ್ರಧಾನಿ ಮೋದಿ ಅವರ ಆಶಯ ಎಂದರು.

ಮೂರುಸಾವಿರ ಮಠದ ಜ. ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು ಆಶೀರ್ವಚನ ನೀಡಿದರು. ಗ್ರಾಮ ವಿಕಾಸ ಸೊಸೈಟಿ ಅಧ್ಯಕ್ಷ ಜಗದೀಶ ನಾಯಕ, ಸಚಿನ್ ಅಲಾಟಗಿ ಸೇರಿದಂತೆ ಪದಾಧಿಕಾರಿಗಳು, ಮುಖಂಡರು ಹಾಗೂ ನೂರಾರು ಮಹಿಳಾ ಫಲಾನುಭವಿಗಳು ಉಪಸ್ಥಿತರಿದ್ದರು.

ದೀಪ ಬೆಳಗುವ ಕಾರ್ಯಕ್ರಮ:

ಈ ನಡುವೆ ಪ್ರಧಾನಿ ಮೋದಿ ಜನ್ಮದಿನದಂಗವಾಗಿ ಬಿಜೆಪಿ ವತಿಯಿಂದ ನಗರದ ವಿವಿಧ ದೇವಸ್ಥಾನಗಳಲ್ಲಿ ಆಶೀರ್ವಾದ ದಿಯಾ (ದೀಪ ಬೆಳಗುವ) ಕಾರ್ಯಕ್ರಮ ಗುರುವಾರ ಸಂಜೆ ಅದ್ಧೂರಿಯಾಗಿ ನಡೆಯಿತು. ಇಲ್ಲಿನ ಕರ್ಕಿ ಬಸವೇಶ್ವರ ನಗರದ ಹನುಮಾನ ದೇವಸ್ಥಾನದಲ್ಲಿ ಪೂರ್ವ ವಿಧಾನಸಭಾ ಕ್ಷೇತ್ರದ ವತಿಯಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ರಾಘವೇಂದ್ರ ಮಠ:ಬಿಜೆಪಿ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದ ವತಿಯಿಂದ ಇಲ್ಲಿನ ಭವಾನಿ ನಗರದ ಶ್ರೀರಾಘವೇಂದ್ರ ಮಠದಲ್ಲಿ ನಡೆದ ಆರ್ಶಿರ್ವಾದ ದಿಯಾ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಂ. ನಾಗರಾಜ, ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ವಿಪ ಸದಸ್ಯ ಲಿಂಗರಾಜ ಅಂಗಡಿ ಅವರು ಜಂಟಿಯಾಗಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ಬಿಜೆಪಿ ಮಾಧ್ಯಮ ವಕ್ತಾರ ರಾಜು ಕೋರ್ಯಾಣಮಠ, ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.ರಕ್ತದಾನ ಶಿಬಿರ:

ಇಲ್ಲಿನ ನಿಲಿಜನ್‌ ರಸ್ತೆಯ ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ಬೃಹತ್‌ ರಕ್ತದಾನ ಶಿಬಿರ ನಡೆಯಿತು. ಮೋದಿ ಜೀ ಅವರ ಅಭಿಮಾನಿ ಬಳಗ ಹಾಗೂ ಶಾ ದಾಮಜಿ ಜಾಧವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಆಶ್ರಯದಲ್ಲಿ ಜರುಗಿದ ರಕ್ತದಾನ ಶಿಬಿರದಲ್ಲಿ ನೂರಾರು ಜನರು ರಕ್ತದಾನ ಮಾಡಿದರು. ಇದೇ ವೇಳೆ ರಕ್ತದಾನ ಕೇಂದ್ರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಅವರು 100ನೇ ಬಾರಿ ಹಾಗೂ ವಿನೋದಕುಮಾರ ಪಟ್ವಾ 73ನೇ ಬಾರಿ ರಕ್ತದಾನ ಮಾಡಿದರು. ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್‌ ಹಾಗೂ ಲಿಂಗರಾಜ ಪಾಟೀಲ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಶಕ್ತಿ ಹಿರೇಮಠ, ಮಂಜುನಾಥ ಹೆಬಸೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.