ಕನ್ನಡಪ್ರಭ ವಾರ್ತೆ ಹೊಳೆನರಸೀಪುರತಾಲೂಕಿನ ಐತಿಹಾಸಿಕ ಹಿನ್ನೆಲೆಯುಳ್ಳ ಮಾವಿನಕೆರೆ ಶ್ರೀ ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನ ಹಾಗೂ ಬೆಟ್ಟದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಫೆಬ್ರವರಿ ೧ರ ಭಾನುವಾರ ಶುಭ ಮಹೂರ್ತದಲ್ಲಿ ರಥೋತ್ಸವ ವೈಭವದಿಂದ ನೆರವೇರಿತು. ಮುಂಜಾನೆ ದೇವಾಲಯದಲ್ಲಿ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಆರ್ಚನೆ, ವಿಶೇಷ ಅಲಂಕಾರ ಬಳಿಕ ಸೂರ್ಯ ಮಂಡಲೋತ್ಸವ, ನಿತ್ಯಾರಾಧನೆ, ಬಲಿಪ್ರಧಾನ, ಕೃಷ್ಣಗಂಧೋತ್ಸವ ಹಾಗೂ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಶ್ರೀಸ್ವಾಮಿಯ ಉತ್ಸವ ಮೂರ್ತಿಗಳನ್ನು ವಿಶೇಷವಾಗಿ ಅಲಂಕರಿಸಿ, ಸಂಪ್ರದಾಯದ ಆಚರಣೆಯಂತೆ ರಥಬೀದಿ ಉತ್ಸವ ನಡೆಸಿದ ನಂತರ ರಥದಲ್ಲಿ ಪ್ರತಿಷ್ಠಾಪಿಸಿ, ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಯಿತು. ಬೆಳಗ್ಗೆ ೧೧.೩೦ರಿಂದ ೧೨ಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಶಾಸಕ ಎಚ್.ಡಿ.ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ಗೋವಿಂದನ ನಾಮಸ್ಮರಣೆ ಮಾಡುತ್ತ ರಥಬೀದಿಯಲ್ಲಿ ತೇರನ್ನು ಎಳೆದರು ಹಾಗೂ ಭಕ್ತರು ಹಣ್ಣು ಜವನ ರಥಕ್ಕೆ ಎಸೆದು ಭಕ್ತಿಯನ್ನು ಸಮರ್ಪಿಸಿ ಪುನೀತರಾದರು.ಹಿರಿಯ ಅರ್ಚಕರಾದಸ ಎಂ.ಎಸ್.ಜನಾರ್ಧನ ಭಟ್ಟರ ನೇತೃತ್ವದಲ್ಲಿ ಶ್ರೀನಿವಾಸ್, ಚೇತನ್, ಎಂ.ಜೆ. ಪ್ರಜ್ವಲ್ ಹಾಗೂ ಸಹಾಯಕರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಪೂಜಾ ಮಹೋತ್ಸವದಲ್ಲಿ ಭಾಗಿಯಾಗಿದ್ದ ಭಕ್ತಾದಿಗಳಿಗೆ ಪಟ್ಟಣದ ದೊಡ್ಡಮನೆ ಕುಟುಂಬ ಸದಸ್ಯರು ಹಾಗೂ ಇತರರು ಬೋಜನದ ವ್ಯವಸ್ಥೆ ಮಾಡಿದ್ದರು. ಪೂಜಾ ಮಹೋತ್ಸವದಲ್ಲಿ ಹಳೇಕೋಟೆ ಗ್ರಾಪಂ ಅಧ್ಯಕ್ಷ ಸೂರಿ ಕುಮಾರ್, ತಹಸೀಲ್ದಾರ್ ಎಲ್. ಎಸ್. ರಮೇಶ್, ಉಪ ತಹಸೀಲ್ದಾರ್ ಕಿರಣ್, ಡಿವೈಎಸ್ಪಿ ಮಹಮದ್ ಅಸ್ಮತ್ ಖಾನ್, ವೃತ್ತ ನಿರೀಕ್ಷಕ ಸಂತೋಷ್ ಕುಮಾರ್, ಪಿಎಸ್ಸೈ ಅಭಿಜಿತ್, ರಜಸ್ವ ನಿರೀಕ್ಷಕ ಯೋಗಾನಂದ, ಗ್ರಾಮ ಲೆಕ್ಕಾಧಿಕಾರಿಗಳಾದ ಗುರುಮೂರ್ತಿ, ಹರೀಶ್ ಬಣಕರ್, ಜಯರಾಮ್ ಕೆ.ಆರ್, ಹೇಮಾ, ಗ್ರಾಪಂ ಮಾಜಿ ಸದಸ್ಯ ಶೆಟ್ಟಿಗೌಡ, ಗ್ರಾಮದ ಹಿರಿಯರಾದ ಸುಬ್ಬರಾಜು, ಜೈಪ್ರಕಾಶ್ ಎಂ. ಎನ್, ಅಶೋಕ, ಸೀತರಾಮು, ಮಧು, ವಸಂತಕುಮಾರ್, ರಮೇಶ್, ಚಂದ್ರು, ವಾಸು, ಚಂದ್ರಶೇಖರ್, ವರಪ್ರಸಾದ್, ಪರಮೇಶ್ವರ್, ಎಂ ಜಿ ರವಿಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ಹಳೇಕೋಟೆ ಬೆಟ್ಟದ ಮೇಲಿನ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಕೇಶವಮೂರ್ತಿಗಳ ನೇತೃತ್ವದಲ್ಲಿ ರಂಗನಾಥಭಟ್ರು ಹಾಗೂ ಸಹಾಯಕರು ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ, ಪ್ರಾಕಾರೋತ್ಸವ ನಡೆಸಲಾಯಿತು. ಶಾಸಕ ಎಚ್.ಡಿ. ರೇವಣ್ಣ, ವಿ.ಪ. ಸದಸ್ಯ ಡಾ. ಸೂರಜ್ ರೇವಣ್ಣ ಹಾಗೂ ನೂರಾರು ಭಕ್ತರು ದೇವಾಲಯದ ಪ್ರಾಂಗಣದಲ್ಲಿ ಜರುಗಿದ ಪ್ರಾಕಾರೋತ್ಸವದಲ್ಲಿ ಭಾಗವಹಿಸಿದ್ದರು.