ಯುವಜನತೆ ನೈತಿಕತೆ, ಪ್ರಾಮಾಣಿಕತೆ ಅಳವಡಿಸಿಕೊಳ್ಳಲಿ

KannadaprabhaNewsNetwork |  
Published : Jul 12, 2026, 02:30 AM IST
ಪೋಟೋ, 11ಎಚ್‌ಎಸ್‌ಡಿ1 :  ಹೊಸದುರ್ಗದಲ್ಲಿ ಶನಿವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ  ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು . | Kannada Prabha

ಸಾರಾಂಶ

ಹೊಸದುರ್ಗದಲ್ಲಿ ಶನಿವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಗಣ್ಯರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಯುವಜನತೆ ಹಣ ಮತ್ತು ಅಧಿಕಾರವನ್ನು ಬೆನ್ನಟ್ಟುವುದರ ಜೊತೆಗೆ ನೈತಿಕತೆ, ಪ್ರಾಮಾಣಿಕತೆ ಮತ್ತು ಸಂಸ್ಕಾರಗಳನ್ನು ಜೀವನದ ಅಡಿಪಾಯವಾಗಿಸಿಕೊಳ್ಳಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಸಿದ್ದರಾಮೇಶ್ವರ ಸಭಾ ಭವನದಲ್ಲಿ ಶನಿವಾರ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮನುಷ್ಯ ಸ್ವಾರ್ಥಿಯಾಗದೆ ಸಮಾಜಕ್ಕೆ ತನ್ನಿಂದಾಗುವ ಸೇವೆ ಮತ್ತು ಸಹಕಾರವನ್ನು ನೀಡಿದಾಗಲೇ ಅವನ ಮಾನವೀಯತೆ ಸಾರ್ಥಕವಾಗುತ್ತದೆ. ಆದರೆ ಇಂದಿನ ಸಮಾಜದಲ್ಲಿ ಹಣ, ಅಧಿಕಾರ ಹಾಗೂ ಆಸೆ-ಆಕಾಂಕ್ಷೆಗಳ ಹಿಂದೆ ಓಡುವ ಭರದಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಸಂಸ್ಕೃತಿ ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುತ್ತದೆ ಎಂದರು.

ಗೋಡೇಕೆರೆ ಮಠದ ಶ್ರೀ ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗಾಯಿತ ಧರ್ಮಕ್ಕೆ ಸಂವಿಧಾನಿಕ ಮಾನ್ಯತೆ ದೊರೆಯಬೇಕು. ಎಲ್ಲರೂ ಒಟ್ಟಾಗಿ ಲಿಂಗವಂತ ಧರ್ಮ ಸ್ಥಾಪನೆಗೆ ಸಹಕಾರ ನೀಡಲಾಗುತ್ತಿದೆ. ಪ್ರತ್ಯೇಕ ಧರ್ಮದ ಮಾನ್ಯತೆ ದೊರೆತರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳು ಲಿಂಗಾಯಿತರಿಗೆ ದೊರೆಯುತ್ತವೆ. ನಮ್ಮ ಮನೆಯ ಮಕ್ಕಳಿಗೆ ಶೈಕ್ಷಣಿಕ ಮಾತು ಔದ್ಯೋಗಿಕ ಅವಕಾಶಗಳು ದೊರೆಯಲು ಸಾಧ್ಯವಾಗುತ್ತದೆ. ಈ ಕುರಿತು ಸಂಘಟನೆಯ ಅಗತ್ಯವಿದೆ ಎಂದರು.

ನಿವೃತ್ತ ಪೋಲೀಸ್ ಮಹಾ ನಿರ್ದೇಶಕ ಎಸ್.ಎನ್.ಸಿದ್ದರಾಮಪ್ಪ ಮಾತನಾಡಿ, ಬಸವಣ್ಣನ ಕಾಯಕ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಾಧನೆ ಸಾಧ್ಯವಾಗುತ್ತದೆ. ಅದೃಷ್ಟವನ್ನು ನಂಬುವ ಬದಲು ಕಠಿಣ ಪರಿಶ್ರಮದ ಅಗತ್ಯವಿದೆ. ಯಾವುದೇ ವೃತ್ತಿ ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಮಕ್ಕಳನ್ನು ಸಿದ್ಧಗೊಳಿಸಿ. ಸಮುದಾಯದ ಹಿತದೃಷ್ಟಿಯಿಂದ ಹೆಚ್ಚಿನ ಸಾಧನೆ ಅಗತ್ಯವಿದೆ ಎಂದರು.

ಚಿಂತಕ ಸಿದ್ದು ಯಾಪಲಪರವಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್‌ ಮಾತನಾಡಿದರು.

ನೌಕರರ ಸಂಘದ ಅಧ್ಯಕ್ಷ ಶಶಿಧರ್, ಗೌರವ ಅಧ್ಯಕ್ಷ ಎಲ್.ಜಯಪ್ಪ, ಬಿ.ಜಿ.ಅರುಣ ಕುಮಾರ್, ಶಾಸಕ ಟಿ.ಎಚ್. ಬಸವರಾಜಪ್ಪ, ಮಾಜಿ ಜಿಪಂ ಸದಸ್ಯ ಆರ್.ಹನುಮಂತಪ್ಪ, ಬಿ.ಎಸ್.ದ್ಯಾಮಪ್ಪ, ಕೆ.ಎಸ್.ಕಲ್ಮಠ, ಎಂ.ಶಿವಲಿಂಗಪ್ಪ, ಉದ್ಯಮಿ ಪ್ರವೀಣ್ ದ್ಯಾಮಪ್ಪ, ದಿಲೀಪ್, ಮರಿದಿಮ್ಮಪ್ಪ , ಹೆಚ್. ಬಿ. ರವಿಕುಮಾರ, ಮಲ್ಲಿಕಾರ್ಜುನಪ್ಪ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಸಂಸತ್ತಿನಲ್ಲಿ ಧ್ವನಿಯಾಗಲು ಮನವಿ
ಸಿದ್ದೇಶ್ವರ ಕೈ ಬಲಪಡಿಸಲು ಕಾರ್ಯಕರ್ತರಿಗೆ ಸುನಿಲ ಕರೆ