- ದಾವಣಗೆರೆ ಲೋಕಸಭೆಗೆ ಸಿದ್ದೇಶಣ್ಣ, ದಕ್ಷಿಣಕ್ಕೆ ಶ್ರೀನಿವಾಸ ದಾಸಕರಿಯಪ್ಪ ಗೆಲ್ಲಬೇಕಿತ್ತು
- ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ 74ನೇ ಜನ್ಮದಿನದ ನಮ್ಮಭಿಮಾನ ಕಾರ್ಯಕ್ರಮ - - -ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜಕೀಯದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜವಾಗಿದ್ದು, ಇದನ್ನೆಲ್ಲಾ ಬದಿಗೊತ್ತಿ, ಹಿಂದುತ್ವ, ರಾಷ್ಟ್ರೀಯತೆ, ಹಿಂದುಳಿದ, ದಲಿತರು, ರೈತ, ಜನಪರ ವಿಚಾರಗಳನ್ನು ಇಟ್ಟುಕೊಂಡು ಬಿಜೆಪಿ ಕೆಲಸ ಮಾಡುತ್ತಿದ್ದು, ದಾವಣಗೆರೆಯಲ್ಲಿ ಜಿ.ಎಂ.ಸಿದ್ದೇಶ್ವರ ಕೈಗಳನ್ನು ಬಲಪಡಿಸಿದರೆ ಬಿಜೆಪಿಯನ್ನೇ ಬಲಪಡಿಸಿದಂತಾಗುತ್ತದೆ ಎಂದು ಕಾರ್ಕಳ ಕ್ಷೇತ್ರ ಶಾಸಕ ವಿ.ಸುನಿಲಕುಮಾರ ತಿಳಿಸಿದರು.ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಶನಿವಾರ ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರರ 74ನೇ ಜನ್ಮದಿನದ ನಮ್ಮಭಿಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿದ್ದೇಶಣ್ಣನಿಗೆ ಭೀಮಬಲ ಬಂದರೆ ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ಎಂದರು.
ಸಿದ್ದೇಶಣ್ಣನ 76ನೇ ಜನ್ಮದಿನದ ಹೊತ್ತಿಗೆ ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿ ಇರಬೇಕು. ಆಗ ಮತ್ತಷ್ಟು ಅದ್ಧೂರಿಯಾಗಿ ಸಿದ್ದೇಶಣ್ಣ ಜನ್ಮದಿನ ಆಚರಿಸೋಣ. ಈ ಹಿಂದೆ ನಾವೆಲ್ಲಾ ಒಟ್ಟಾಗಿ ಕೆಲಸ ಮಾಡಿದ್ದರಿಂದ ಅಧಿಕಾರಕ್ಕೆ ಬಂದಿದ್ದೆವು. ರಾಜಕೀಯದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇರುತ್ತವೆ. ಅದನ್ನೆಲ್ಲಾ ಬದಿಗೊತ್ತಬೇಕು. ರಾಜ್ಯದಲ್ಲೂ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ನಾವು, ನೀವೆಲ್ಲಾ ಸೇರಿ ಮಾಡೋಣ. ಜಿಲ್ಲೆಯಲ್ಲೂ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ದಾವಣಗೆರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಬೆಳವಣಿಗೆಯಲ್ಲಿ ಕೇಂದ್ರದ ಮಾಜಿ ಸಚಿವ, ಹಿರಿಯರಾದ ಡಾ. ಜಿ.ಎಂ. ಸಿದ್ದೇಶ್ವರ ಮತ್ತು ಕುಟುಂಬದ ಪಾತ್ರ ದೊಡ್ಡದಿದ್ದು, ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ಒಂದೇ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಹತ್ತಾರು ಏಳುಬೀಳುಗಳಿದ್ದರೂ ಇಂದಿಗೂ ಪಕ್ಷದ ಕೆಲಸ ಮಾಡುತ್ತಿರುವುದು, ನಮ್ಮ ಕಾರ್ಯಕರ್ತರಿಗೆ ಸ್ಪಂದಿಸುತ್ತಿರುವುದು ನಮ್ಮಂತವರಿಗೆ ಆದರ್ಶವಾಗಿದ್ದಾರೆ ಎಂದು ಹೇಳಿದರು.
ಚುನಾವಣೆ ವೇಳೆ, ಹಬ್ಬ ಹರಿದಿನಗಳಲ್ಲಿ ಮಾತ್ರ ಜನಪ್ರತಿನಿಧಿಗಳನ್ನು ನಾವು ಇಂದು ನೋಡುತ್ತೇವೆ. ಆದರೆ, ಕಾರ್ಯಕರ್ತರನ್ನು ಗುರುತಿಸುವ, ಪ್ರೋತ್ಸಾಹಿಸುವ ಯಶಸ್ವಿ ಕೆಲಸ ಮಾಡುವ ಗುಣ ಸಿದ್ದೇಶ್ವರರಿಗೆ ಇದೆ. ಸಿದ್ದೇಶ್ವರ ಸಂಸದರಾಗುವ ಮುನ್ನ ದಾವಣಗೆರೆ ನಗರ, ಜಿಲ್ಲೆ ಹೇಗಿತ್ತು? ಈಗ ಹೇಗಾಗಿದೆ ಎಂಬುದನ್ನು ಎಲ್ಲರೂ ಬಲ್ಲರು. ಸಿದ್ದೇಶ್ವರ ಸಂಸದರಾದ ನಂತರ ಇಡೀ ದಾವಣಗೆರೆ ಚಿತ್ರಣವೇ ಬದಲಾಗುತ್ತಾ ಬಂದಿತು. ಓರ್ವ ಯಶಸ್ವಿ ಸಂಸದರಾಗಿ ನಮ್ಮಂತಹವರಿಗೆ ಸಿದ್ದೇಶ್ವರ ಸದಾ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.ಶಿಕ್ಷಣ ಪ್ರೇಮಿ, ಯಶಸ್ವಿ ಉದ್ಯಮಿ, ಪ್ರಗತಿಪರ ರೈತ, ವರ್ತಕರಾಗಿ, ತುಂಬು ಕುಟುಂಬದ ಯಜಮಾನನಾಗಿ, ಯುವಕರನ್ನು, ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸಿ, ಪ್ರೋತ್ಸಾಹಿಸುವ ಮೂಲಕ ಆದರ್ಶರಾಗಿದ್ದಾರೆ. ದಾವಣಗೆರೆ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಕಾರ್ಯಕರ್ತರಿಗೆ ಸಂತೋಷವಿದೆ. ಹಿರಿಯಣ್ಣನಂತೆ ಸದಾ ನಮ್ಮಂತಹವರಿಗೆ ಸಿದ್ದೇಶಣ್ಣ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಸಿದ್ದೇಶಣ್ಣನ ಪಾತ್ರ ಇದ್ದೇ ಇದೆ ಎಂದು ವಿ.ಸುನಿಲಕುಮಾರ ಸ್ಮರಿಸಿದರು.
- - -(ಬಾಕ್ಸ್)
* ದೇವ ಮಕ್ಕಳೊಂದಿಗೆ ಪ್ರತಿ ವರ್ಷ ಜನ್ಮದಿನ: ಸಿದ್ದೇಶ್ವರ- ದಾವಣಗೆರೆಗೆ ವಿಶೇಷಚೇತನರ ಸಮಗ್ರ ಪುನರ್ವಸತಿ ಕೇಂದ್ರ ತಂದಿದ್ದು ಆತ್ಮತೃಪ್ತಿ ತಂದಿದೆ ದಾವಣಗೆರೆ: ಹೊಸದಾಗಿ ನಾನು ಸಂಸದನಾದ 2004-05ರಲ್ಲಿ ಯಶವಂತ ರಾವ್ ಜಾಧವ್, ನನ್ನ ಆಪ್ತ ಸಹಾಯಕ ಸಿ.ಎಚ್.ದೇವರಾಜ ಅಂಧ ಮಕ್ಕಳ ಶಾಲೆಯಲ್ಲಿ ನನ್ನ ಜನ್ಮದಿನ ಮೊದಲ ಬಾರಿಗೆ ಆಚರಿಸಿದ್ದು, ಅಂದಿನಿಂದಲೂ ಅಂಧ ಮಕ್ಕಳಿಗೆ ಊಟೋಪಚಾರ, ಬಟ್ಟೆ, ಶೈಕ್ಷಣಿಕ ಸಾಮಗ್ರಿ ನೀಡುವುದು ರೂಢಿಯಾಗಿತ್ತು. ನಾಲ್ಕೈದು ವರ್ಷದಿಂದ ಅಭಿಮಾನ ಬಳಗ ಇಷ್ಟೊಂದು ದೊಡ್ಡಮಟ್ಟದಲ್ಲಿ ಜನ್ಮದಿನ ಆಚರಿಸುತ್ತಿದೆ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ತಿಳಿಸಿದರು.
ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಶನಿವಾರ ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರರ 74ನೇ ಜನ್ಮದಿನದ ನಮ್ಮಭಿಮಾನ ಕಾರ್ಯಕ್ರಮದಲ್ಲಿ ಅಂಧ ಮಕ್ಕಳೊಂದಿಗೆ ಜನ್ಮದಿನ ಆಚರಿಸಿಕೊಂಡು, ಸನ್ಮಾನಿತರಾಗಿ ಅವರು ಮಾತನಾಡಿದರು. ನನ್ನ ಜನ್ಮದಿನದ ಅಂಗವಾಗಿ ಕಿವುಡು ಮತ್ತು ಮೂಕ ಮಕ್ಕಳ ಶಾಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಮಕ್ಕಳನ್ನು ನೋಡಿ ಕಣ್ಣೀರು ಬಂದಿತ್ತು. ಇವತ್ತಿಗೂ ಹೊಟ್ಟೆ ಚುರುಕ್ ಅನ್ನುತ್ತದೆ. ಅವು ನಮ್ಮ ಮಕ್ಕಳಲ್ಲ, ದೇವ ಮಕ್ಕಳೆಂದೇ ನಂಬಿದವನು ನಾನು ಎಂದು ಭಾವುಕರಾದರು.ದೇವ ಮಕ್ಕಳ ಮೇಲಿನ ಕಾಳಜಿಯಿಂದಾಗಿಯೇ 2015ರಲ್ಲಿ ಆಗಿನ ಕೇಂದ್ರ ಸಚಿವ ಕಾಲರಾಜ್ ಮಿಶ್ರಾ ಅವರನ್ನು ಕರೆಸಿ ಸಾವಿರಾರು ಜನರಿಗೆ ವ್ಹೀಲ್ ಚೇರ್, ಊರುಗೋಲು, ಶ್ರವಣ ದೋಷದ ಯಂತ್ರ ವಿತರಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ದಾವಣಗೆರೆ ಹೊರವಲಯದಲ್ಲಿ ಸಮಗ್ರ ಪುನರ್ವಸತಿ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಯಿತು. ಕಲಬುರಗಿಗೆ ಅಂತಹ ಕೇಂದ್ರ ಒಯ್ಯಲು ಮಲ್ಲಿಕಾರ್ಜುನ ಖರ್ಗೆ ತೀವ್ರ ಪ್ರಯತ್ನ ನಡೆಸುತ್ತಿದ್ದರು. ಅಂದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಬಳಿ ಹಠ ಹಿಡಿದು ಅದನ್ನು ದಾವಣಗೆರೆಗೆಂದೇ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾದೆ ಎಂದು ಅವರು ಸ್ಮರಿಸಿದರು.
ಇಡೀ ಮೈಸೂರು (ಕರ್ನಾಟಕ) ಮತ್ತು ಗೋವಾ ರಾಜ್ಯಗಳೆರಡಕ್ಕೂ ಸೇರಿ ಕೇವಲ ಒಂದೇ ಒಂದು ಇಂತಹ ಕೇಂದ್ರವಿದೆ. ಅದೂ ನಮ್ಮ ದಾವಣಗೆರೆಯಲ್ಲಿ ಇರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಯೋಜನೆಗೆ ಒಟ್ಟು ₹58 ಕೋಟಿ ಮಂಜೂರಾಗಿತ್ತು. ಥಾವರ್ ಚಂದ್ ಗೆಹ್ಲೋಟ್ ತಕ್ಷಣವೇ ₹25 ಕೋಟಿ ಬಿಡುಗಡೆ ಮಾಡಿದ್ದರು. ದಾವಣಗೆರೆ ಹೊರ ವಲಯದಲ್ಲಿರುವ ವಡ್ಡಿನಹಳ್ಳಿ ಬಳಿ ಸುಮಾರು 7 ಎಕರೆ ಜಾಗದಲ್ಲಿ ಅತ್ಯಂತ ಭವ್ಯ ಕಟ್ಟಡ ಸಿದ್ಧಗೊಂಡಿದೆ. ಅಲ್ಲಿ ವಿಕಲಚೇತನ ಮಕ್ಕಳಿಗೆ ವಿದ್ಯಾಭ್ಯಾಸ, ಟೈಪಿಂಗ್ ಸೇರಿದಂತೆ ವಿವಿಧ ಕೌಶಲ್ಯ ತರಬೇತಿ, ವಸತಿ ಸೌಲಭ್ಯ, ಮುಂದಿನ ಉದ್ಯೋಗ ಅವಕಾಶ ಕಲ್ಪಿಸಿಕೊಡುವ ಕ್ಯಾಂಪಸ್ ನಿರ್ಮಾಣವಾಗುತ್ತಿದೆ. ಇಂತಹ ಕಾರ್ಯಗಳು, ಯೋಜನೆಗಳು ತಮ್ಮ ಆತ್ಮಕ್ಕೆ ತೃಪ್ತಿ ನೀಡಿವೆ ಎಂದು ಜಿ.ಎಂ. ಸಿದ್ದೇಶ್ವರ ಗದ್ಗದಿತರಾದರು.- - -
(ಕೋಟ್) ಬಿಜೆಪಿ ನಾಯಕರು ಇನ್ನೂ ಸ್ವಲ್ಪ ಶ್ರಮಿಸಿದ್ದರೆ ಶ್ರೀನಿವಾಸ ದಾಸಕರಿಯಪ್ಪ ದಾವಣಗೆರೆ ದಕ್ಷಿಣದ ಶಾಸಕರಾಗಬಹುದಿತ್ತು. ಜಿ.ಎಂ.ಸಿದ್ದೇಶ್ವರ ಸಹ ಸತತವಾಗಿ ಸಂಸದರಾದ ಸಾಧನೆ ಮಾಡಬಹುದಿತ್ತು. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದರಿಂದ ಪಕ್ಷಕ್ಕೆ ಒಳಿತಾಗುತ್ತದೆ. ಪಕ್ಷದ ಕಾರ್ಯಕರ್ತರು ಈಗ ಅತೀವ ಬೇಸರದಲ್ಲಿದ್ದಾರೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯಲ್ಲಿ ಜಿ.ಎಂ.ಸಿದ್ದೇಶ್ವರ ಪಾತ್ರ ಮಹತ್ವದ್ದು. ಸಿದ್ದೇಶಣ್ಣನಿಗೆ ಮತ್ತಷ್ಟು ಶಕ್ತಿ ನೀಡಬೇಕಾಗಿದೆ. ಬಿಜೆಪಿ ಸಿದ್ಧಾಂತ, ರೀತಿನೀತಿ ಚೆನ್ನಾಗಿ ಅರಿತವರು. ವಾಜಪೇಯಿ-ಅಡ್ವಾಣಿಯವರ ಜೊತೆ ಸಿದ್ದೇಶಣ್ಣ ಒಡನಾಟ ಇದ್ದವರು.- ಎನ್.ರವಿಕುಮಾರ, ವಿಪ ಮುಖ್ಯ ಸಚೇತಕ.
- - -(ಟಾಪ್ ಕೋಟ್) ಭಾರತ ದೇಶದ ಹಿತ ಕಾಪಾಡದ ಕಾಕ್ರೋಚ್ ಪಾರ್ಟಿಗಳು ಸದ್ಯಕ್ಕೆ ಬಹಳ ಸದ್ದು ಮಾಡುತ್ತಿವೆ. ಅಂತಹವರಿಗೆ ದೇಶದ ಹಿತ ಬೇಕಾಗಿಲ್ಲ. ಹಾಗಾಗಿಯೇ ಕಾಕ್ರೋಚ್ ಪಾರ್ಟಿ ಬರುತ್ತಿವೆ. ಹಿಂದುತ್ವ, ರಾಷ್ಟ್ರೀಯತೆ, ರೈತರ ಪರ ವಿಚಾರ ಮುಂದಿಟ್ಟುಕೊಂಡು, ನಾವು, ನೀವೆಲ್ಲರೂ ಕೆಲಸ ಮಾಡೋಣ.
- ಸುನಿಲಕುಮಾರ, ಬಿಜೆಪಿ ಶಾಸಕ, ಕಾರ್ಕಳ ಕ್ಷೇತ್ರ.- - -
-11ಕೆಡಿವಿಜಿ3: ದಾವಣಗೆರೆಯಲ್ಲಿ ಅಂಧ ಮಕ್ಕಳೊಂದಿಗೆ ತಮ್ಮ 74ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ. ಪಕ್ಷದ ಮುಖಂಡರು, ಹಿತೈಷಿಗಳು, ಕುಟುಂಬ ವರ್ಗದವರು, ವಿಶೇಷ ಮಕ್ಕಳು ಇದ್ದರು. -11ಕೆಡಿವಿಜಿ4: ದಾವಣಗೆರೆಯಲ್ಲಿ ಅಂಧ ಮಕ್ಕಳೊಂದಿಗೆ ತಮ್ಮ 74ನೇ ವರ್ಷದ ಜನ್ಮದಿನ ಆಚರಿಸಿಕೊಂಡ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಅವರಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರ ಕೇಕ್ ತಿನ್ನಿಸಿ, ಶುಭ ಹಾರೈಸಿದರು.