ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಕೈಗೊಂಡ ಜಾತಿಗಣತಿ ವರದಿ ಮಂಡಿಸಲು ಕಾಂಗ್ರೆಸ್ ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ. ಇದು ಹಲವಾರು ಅನುಮಾನಕ್ಕೆ ಕಾರಣವಾಗುತ್ತಿದೆ. ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ತಿಳಿಯುವ ಆಸಕ್ತಿಯೇ ಮುಖ್ಯಮಂತ್ರಿಗಳಿಗೆ ಇಲ್ಲವೇ ಎಂದು ಬಿಜೆಪಿ ಶಾಸಕ ಸುನಿಲಕುಮಾರ ಪ್ರಶ್ನಿಸಿದ್ದಾರೆ.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ವರದಿಯನ್ನು ಕ್ಯಾಬಿನೆಟ್ ಮುಂದೆ ತರದೇ, ಇರುವುದನ್ನು ನೋಡಿದರೆ ಹಲವಾರು ಅನುಮಾನಕ್ಕೂ ಕಾರಣವಾಗುತ್ತಿದೆ. ಜನರ ತೆರಿಗೆ ಹಣದಲ್ಲಿ ₹450 ಕೋಟಿ ಖರ್ಚು ಮಾಡಿ, ತಾನೇ ಮಾಡಿಸಿದ ಸಮೀಕ್ಷೆ ವರದಿಯನ್ನು ಮಂಡಿಸಲು ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕುತ್ತಿರುವುದೇಕೆ ಎಂದರು.
ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ತಿಳಿಯುವ ಆಸಕ್ತಿಯೇ ಮುಖ್ಯಮಂತ್ರಿ ಅವರಿಗೆ ಇಲ್ಲವೇ? ಸರ್ಕಾರ ತಕ್ಷಣವೇ ವರದಿಯನ್ನು ಬಿಡುಗಡೆ ಮಾಡಿ, ವಿಧಾನಸಭೆಯಲ್ಲಿ ಮಂಡಿಸಬೇಕು. ಸರ್ಕಾರದ ಕಾರ್ಯಕ್ರಮಗಳು ವರದಿಯ ಅಂಕಿ ಅಂಶಗಳ ಆಧಾರದಲ್ಲೇ ನಡೆಯಬೇಕು. ಅಂಕಿ ಅಂಶ ಸರಿ ಇಲ್ಲದಿದ್ದರೆ ಸರ್ಕಾರ ಯಾವುದೇ ಕಾರ್ಯಕ್ರಮಗಳೂ ನಡೆಯುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.ಮಧುಸೂದನ್ ನಾಯಕ್ ವರದಿಯನ್ನೇನಾರೂ ಗೌಪ್ಯವಾಗಿ ಕಸದ ಬುಟ್ಟಿಗೆ ಹಾಕುವ ಹುನ್ನಾರವೇನಾದರೂ ನಡೆದಿದೆಯಾ? ಇದರ ಹಿಂದೆ ಏನು ಷಡ್ಯಂತ್ರ ನಡೆದಿದೆಯೆಂಬ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟಪಡಿಸಲಿ ಎಂದು ಸುನಿಲಕುಮಾರ ಒತ್ತಾಯಿಸಿದರು.
- - -
* ಬರಪೀಡಿತ ತಾಲೂಕುಗಳ ಘೋಷಣೆಗೆ ಒತ್ತಾಯ
- ಸಮೀಕ್ಷೆ ಮಾಡಬೇಕೆಂಬ ಆಲೋಚನೆಯೇ ಕಾಂಗ್ರೆಸ್ ಸರ್ಕಾರಕ್ಕಿಲ್ಲ: ಸುನಿಲ್ ದಾವಣಗೆರೆ: ಮಳೆಯ ತೀವ್ರ ಕೊರತೆಯಿಂದಾಗಿ ರಾಜ್ಯದಲ್ಲಿ ಬರಗಾಲ ಬಂದಿದ್ದು, ರಾಜ್ಯದ ಎಷ್ಟು ತಾಲೂಕುಗಳು ಬರಪೀಡಿತವೆಂದು ಘೋಷಿಸಲು ಸಮೀಕ್ಷೆ ಮಾಡಬೇಕೆಂಬ ಆಲೋಚನೆಯನ್ನೇ ರಾಜ್ಯ ಸರ್ಕಾರ ಮಾಡಿಲ್ಲ ಎಂದು ಬಿಜೆಪಿ ಶಾಸಕ ಸುನಿಲಕುಮಾರ ದೂರಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ರೀತಿ ಬರಗಾಲ ಮುಂದುವರಿದರೆ ರೈತರ ಪರಿಸ್ಥಿತಿ ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಮರೋಪಾದಿಯಲ್ಲಿ ಸಚಿವ ಸಂಪುಟ ಕೆಲಸ ಮಾಡಬೇಕಾಗಿತ್ತು ಎಂದರು.
ಒಬ್ಬೊಬ್ಬ ಸಚಿವರಿಗೆ ಮೂರು ಜಿಲ್ಲೆಗಳ ಪ್ರಕೃತಿ ವಿಕೋಪ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿಗಳಾಗಿ ನೇಮಕ ಮಾಡಲಾಗಿದೆ. ಆದರೆ, ಯಾವೊಬ್ಬ ಪ್ರಕೃತಿ ವಿಕೋಪ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿಗಳಾದ ಸಚಿವರು ಆಯಾ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡುತ್ತಿಲ್ಲ, ಸಮೀಕ್ಷೆಯನ್ನೂ ಮಾಡುತ್ತಿಲ್ಲ ಎಂದು ಅವರು ಟೀಕಿಸಿದರು.ಪೂರ್ಣ ಪ್ರಮಾಣದ ಮಂತ್ರಿ ಮಂಡಲ ರಚನೆಗೆ ನಮ್ಮ ಆಗ್ರಹವಿದೆ. ಆದರೆ, ಪೂರ್ಣ ಪ್ರಮಾಣದ ಸಂಪುಟವೋ, ಈಗಿರುವಷ್ಟೇ ಸಾಕು ಎಂಬುದು ಆಡಳಿತದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷದ ವಿಚಾರವಾಗಿದೆ. ಬರಗಾಲದ ಬಗ್ಗೆ ರಾಜ್ಯ ಸರ್ಕಾರ ಯಾವುದೇ ತುರ್ತು ಕ್ರಮ ಕೈಗೊಳ್ಳುತ್ತಿಲ್ಲ. ಬರ ಹಿನ್ನೆಲೆಯಲ್ಲಿ ತಕ್ಷಣವೇ ವಿಧಾನಸಭೆ ಅಧಿವೇಶನ ಕರೆಯಬೇಕು. ಮಳೆ, ಬರ, ರೈತರ ಸಮಸ್ಯೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಲಿ ಎಂದು ಸುನಿಲಕುಮಾರ ಒತ್ತಾಯಿಸಿದರು.
- - -(ಫೋಟೋ:)
