ನಗರಸಭೆ ಅಧ್ಯಕ್ಷರಿಂದ ಅಧಿಕಾರ ದುರುಪಯೋಗ

KannadaprabhaNewsNetwork | Published : Mar 3, 2025 1:46 AM

ಸಾರಾಂಶ

ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಶಾಮೀಲಾಗಿ ಹಲವು ಅಕ್ರಮಗಳನ್ನು ಮಾಡುವ ಮೂಲಕ ನಗರಸಭೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಿ. ಗಿರೀಶ್ ಆರೋಪಿಸಿದ್ದಾರೆ. ಹಾಲಿ ಅಧ್ಯಕ್ಷರ ಕುಟುಂಬದ ಹೆಸರಿನಲ್ಲಿರುವ ೧೪ ಎಕರೆ ಜಮೀನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್‌ಟಿಪಿ ಪ್ಲಾಂಟ್‌ವರೆಗೆ ಬೀದಿ ದೀಪ ಅಳವಡಿಸಲು ಮುಂದಾಗಿರುವುದು ಖಂಡನೀಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ನಗರಸಭೆ ಅಧ್ಯಕ್ಷರು ಹಾಗೂ ಅಧಿಕಾರಿಗಳು ಶಾಮೀಲಾಗಿ ಹಲವು ಅಕ್ರಮಗಳನ್ನು ಮಾಡುವ ಮೂಲಕ ನಗರಸಭೆಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಸಿ. ಗಿರೀಶ್ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ ನಡೆಯುತ್ತಿರುವ ಕೆಲವು ಲೇಔಟ್‌ನಲ್ಲಿ ಚರಂಡಿ, ಇಂಟರ್‌ಲಾಕ್, ಪಾರ್ಕ್ ಅಭಿವೃದ್ಧಿ, ವಿದ್ಯುತ್, ರಸ್ತೆ, ನೀರಿಲ್ಲದಿರುವ ಬಗ್ಗೆ ಕಾನೂನಿನ ತೊಡಕಿದ್ದು ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿದ ಮೇಲೆ ನಗರಸಭೆ ಪೌರಾಯುಕ್ತರೆ ನೋಟಿಸ್ ನೀಡಿದ್ದು ಅಕ್ರಮಕ್ಕೆ ಸಾಕ್ಷಿಯಾಗಿದೆ. ಹೊಸ ಲೇಔಟ್‌ಗಳಿಗೆ ಖಾತೆ ನೀಡಲು ಅಧಿಕಾರಿಗಳು ಮುಂದಾದರೇ ಕಾನೂನಿನ ಮೂಲಕ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.

ನಗರದ ಗರುಡನಗಿರಿ ರಸ್ತೆಯ ಬಾಟಲ್ ನಾಗರಾಜು ಮನೆಯ ಸಮೀಪಕ್ಕೆ ನಗರ ಪ್ರದೇಶದ ವ್ಯಾಪ್ತಿ ಮುಗಿಯಲಿದೆ. ಆದರೆ ಹಾಲಿ ಅಧ್ಯಕ್ಷರ ಕುಟುಂಬದ ಹೆಸರಿನಲ್ಲಿರುವ ೧೪ ಎಕರೆ ಜಮೀನಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್‌ಟಿಪಿ ಪ್ಲಾಂಟ್‌ವರೆಗೆ ಬೀದಿ ದೀಪ ಅಳವಡಿಸಲು ಮುಂದಾಗಿರುವುದು ಖಂಡನೀಯವಾಗಿದೆ. ನಗರದಲ್ಲೇ ಹಲವು ಬಡಾವಣೆಗಳಲ್ಲಿ ಬೀದಿದೀಪವಿಲ್ಲದೇ ಕತ್ತಲೆಯಲ್ಲಿ ಜನರು ಓಡಾಡುವಂತ್ತಾಗಿದ್ದು, ಇದರ ಬಗ್ಗೆ ಗಮನಹರಿಸದಿದ್ದರೇ ಧರಣಿ ಮಾಡಲಾಗುವುದು ಎಂದು ಹೇಳಿದರು.

ಅಧ್ಯಕ್ಷರ ವಾರ್ಡ್‌ನಲ್ಲಿರುವ ಶಾದಿಮಹಲ್ ಮತ್ತು ಮಸೀದಿಯ ಮುಂದೆ ಚರಂಡಿ ತುಂಬಿ ರಸ್ತೆಯ ಮೇಲೆ ಹರಿಯುತ್ತಿದ್ದರೂ ಗಮನಹರಿಸಿಲ್ಲ, ದಲಿತ ಸಮಾಜಗಳು ಇರುವ ಬಡಾವಣೆಗಳಲ್ಲಿ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ, ಹೇಮಾವತಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ, ಅಲ್ಲದೇ ಸಾಮಾನ್ಯ ಸಭೆಗಳನ್ನು ಕರೆಯುತ್ತಿಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ಇಮ್ರಾನ್‌ಖಾನ್ ಮಾತನಾಡಿ, ೧೮ ಮತ್ತು ೧೯ನೇ ವಾರ್ಡ್‌ನಲ್ಲಿ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಅಲ್ಲಿ ನಿರ್ಮಾಣವಾಗಿರುವ ೧೧೫ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು.

ಶಿವನ್‌ರಾಜ್ ಮಾತನಾಡಿ, ೬ನೇ ವಾರ್ಡ್‌ನಲ್ಲಿ ಪ್ರಿಯದರ್ಶಿನಿ ಸ್ಕೂಲ್ ಮುಂಭಾಗ ಇಂಟರ್‌ಲಾಕ್ ಅಳವಡಿಕೆ, ಅಂಗಾಳ ಪರಮೇಶ್ವರಿ ದೇವಾಲಯದ ಮುಂಭಾಗ ಮೆಟಲ್ ಅಲೇಡ್ ಹೈಮಾಸ್ಟ್ ಅಳವಡಿಸಬೇಕೆಂದು ಮನವಿ ಮಾಡಿದ್ದರು ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ರಮೇಶ್ ಮಾತನಾಡಿ, ೩೧ನೇ ವಾರ್ಡ್‌ನಲ್ಲಿ ೧೪ನೇ ಹಣಕಾಸು ಯೋಜನೆಯಲ್ಲಿ ನಿರ್ಮಾಣವಾದ ಸಮುದಾಯ ಭವನಕ್ಕೆ ರಾಜಕೀಯ ದುರುದ್ದೇಶದಿಂದ ವಿದ್ಯುತ್ ವ್ಯವಸ್ಥೆ ಸರಿಪಡಿಸಿಲ್ಲ, ಅಲ್ಲದೇ ನಗರೋತ್ಥಾನ ಯೋಜನೆಯ ಹಲವು ರಸ್ತೆಗಳ ಕಾಮಗಾರಿಗಳನ್ನು ಸರಿಪಡಿಸಿರುವುದಿಲ್ಲ ಎಂದು ಹೇಳಿದರು.ಫೋಟೋ:

ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಸಿ. ಗಿರೀಶ್.

Share this article