ವಿಜಯನಗರ ಕುರಿತ ವಿಚಾರ ಸಂಕಿರಣ । ಕನ್ನಡ ವಿಶ್ವವಿದ್ಯಾಲಯ ಕುಲಪತಿ ಅಭಿಮತಕನ್ನಡಪ್ರಭ ವಾರ್ತೆ ಹಂಪಿ
ಹಂಪಿ ಉತ್ಸವ-2025ರ ಅಂಗವಾಗಿ ಶನಿವಾರ ಕಮಲಾಪುರದ ಪುರಾತತ್ತ್ವ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಲಾದ ವಿಜಯನಗರ ಅಧ್ಯಯನ ಕುರಿತು 27ನೇ ವಾರ್ಷಿಕ ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಜಯನಗರ ಸಾಮ್ರಾಜ್ಯವನ್ನು ಸಂಗಮ, ತುಳು, ಸಾಳ್ವ ಹಾಗೂ ಅರವೀಡು ವಂಶಗಳು ಆಳ್ವಿಕೆ ಮಾಡಿವೆ. ಇದುವರೆಗೂ ಸಂಗಮ ಹಾಗೂ ತುಳು ವಂಶಗಳ ಅರಸರ ಕೊಡುಗೆ ಕುರಿತು ಹೆಚ್ಚಿನ ಅಧ್ಯಯನಗಳು ನಡೆದಿವೆ. ಆದರೆ ಸಾಳ್ವ ಹಾಗೂ ಅರವೀಡು ವಂಶಗಳ ಕುರಿತು ವ್ಯಾಪಕ ಅಧ್ಯಯನಗಳು ನಡೆದಿಲ್ಲ. ವಿಜಯನಗರ ಕುರಿತು ಈವರೆಗೂ ನಡೆದ ಸಂಶೋಧನೆಗಳ ಪುನರ್ ಅಧ್ಯಯದ ಅವಶ್ಯಕತೆಯಿದೆ. ವಸ್ತುನಿಷ್ಠ, ಬಹುತ್ವ ಹಾಗೂ ವಿಶಾಲ ದೃಷ್ಟಿಕೋನದಿಂದ ಅಧ್ಯಯನವಾಗಬೇಕಿದೆ ಎಂದರು.ಇತಿಹಾಸಕಾರರು ಅರವೀಡು ವಂಶದ ಆಡಳಿತಾಗರರ ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎನಿಸುತ್ತದೆ. ಇದಕ್ಕೆ ಹಲವಾರು ಕಾರಣಗಳಿವೆ. ಅರವೀಡು ವಂಶಜರು ಆಂಧ್ರಪ್ರದೇಶದ ಕರ್ನೂಲು ಮೂಲದವರು, ಇವರ ಆಡಳಿತ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ಹಂಚಿಕೆ ಆಗಿತ್ತು. ರಕ್ಕಸತಂಗಡಿ ಯುದ್ಧದಲ್ಲಿ ಸಾಮ್ರಾಜ್ಯ ರಕ್ಷಣೆಗಿಂತ ತಮ್ಮ ಪ್ರಾಣ ಹಾಗೂ ಸಂಪತ್ತಿನ ರಕ್ಷಣೆ ಪ್ರಾಮುಖ್ಯತೆ ನೀಡಿದರು ಎಂಬ ಭಾವನೆಯಿದೆ. ಅರವೀಡು ವಂಶದ ಅಧ್ಯಯನಕ್ಕೆ ಕನ್ನಡ, ತೆಲುಗು, ತಮಿಳು ಭಾಷೆಗಳ ಸಾಹಿತ್ಯ ಹಾಗೂ ಐತಿಹ್ಯಗಳನ್ನು ಒಗ್ಗೂಡಿಸಿ ಸಂಶೋಧನೆ ಮಾಡಬೇಕಿದೆ. ಇದು ಬಹುಭಾಷೆಯ ಜ್ಞಾನ ಇಲ್ಲದ ಇತಿಹಾಸಕಾರಿಗೆ ತೊಡಕಾಗಿ ಪರಿಣಮಿಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರೊ. ಎಂ.ವಿ. ಶ್ರೀನಿವಾಸ್, ಕದಂಬ, ಚಾಲುಕ್ಯ, ಹೊಯ್ಸಳ, ರಾಷ್ಟ್ರಕೂಟ ಸೇರಿದಂತೆ ಹತ್ತಾರು ಸಾಮ್ರಾಜ್ಯಗಳು ಕರ್ನಾಟಕದಲ್ಲಿ ಆಳ್ವಿಕೆ ನಡೆಸಿವೆ. ಆದರೆ ವಿಜಯನಗರ ಸಾಮ್ಯಾಜ್ಯದ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆದಿವೆ. ರೋಮ್ ಸಾಮ್ರಾಜ್ಯದ ಹೊರತಾಗಿ ವಿಶ್ವದಲ್ಲೇ ಅತಿ ಹೆಚ್ಚು ಸಂಶೋಧನೆಗಳು ವಿಜಯನಗರ ಸಾಮ್ರಾಜ್ಯದ ಕುರಿತಾಗಿ ಇವೆ ಎಂಬುದಾಗಿ ಹೇಳಿದರು.
ಶಾಸಕ ಎಚ್.ಆರ್. ಗವಿಯಪ್ಪ ಮಾತನಾಡಿ, ಇಂದಿನ ಮಕ್ಕಳು ಕೃತಕ ಬುದ್ದಿಮತ್ತೆ ಯುಗದಲ್ಲಿ ಕಳೆದು ಹೋಗುತ್ತಿದ್ದಾರೆ. ಇವರಿಗೆ ಇತಿಹಾಸ ಪರಿಚಯವಾಗಬೇಕು. ಇದುವರೆಗೂ ಹಂಪಿ ಉತ್ಸವದ ಅಂಗವಾಗಿ ಏರ್ಪಡಿಸಿದ ವಿಚಾರ ಸಂಕಿರಣಗಳ ಸಂಶೋಧನೆಯ ಶೇ.10ರಷ್ಟು ಸಾರ ಜನರಿಗೆ ತಲುಪಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಪುರಾತತ್ತ್ವ ಇಲಾಖೆ ನಿರ್ದೇಶಕ ಡಾ. ಆರ್. ಶೇಜೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.