ಕೇವಲ ಅಂಕಗಳ ಹಿಂದೆ ಬೀಳುವ ಮಾರ್ಕ್‌ ವಾದಿಗಳಾಗದಿರಿ

KannadaprabhaNewsNetwork | Published : Mar 3, 2025 1:46 AM

ಸಾರಾಂಶ

ಪರೀಕ್ಷೆಯಲ್ಲಿ ಫೇಲ್ ಎಂದರೆ ಜೀವನದಲ್ಲಿ ಫೇಲ್ ಎಂದರ್ಥವಲ್ಲ. ಜೀವನ ಬಹಳ ದೊಡ್ಡದಿದ್ದು, ಅಲ್ಲಿ ನೂರಾರು ಪರೀಕ್ಷೆಗಳು ಎದುರಾಗುತ್ತವೆ

ಕನ್ನಡಪ್ರಭ ವಾರ್ತೆ ಮೈಸೂರು

ಕೇವಲ ಅಂಕಗಳ ಹಿಂದೆ ಬೀಳುವ ಮಾರ್ಕ್‌ ವಾದಿಗಳಾಗಬೇಡಿ ಎಂದು ಸೃಜನಶೀಲ ಅಧ್ಯಾಪನಾ ಕೇಂದ್ರದ ಮುಖ್ಯಸ್ಥ ಹಾಗೂ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ತಿಳಿಸಿದರು.

ನಗರದ ಜೆ.ಕೆ. ಮೈದಾನದ ಸಭಾಂಗಣದಲ್ಲಿ ಭಾನುವಾರ ನಡೆದ ಪ್ರೇರಣ ಫೌಂಡೇಷನ್‌ ರಜತ ಮಹೋತ್ಸವದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ, ಅವರನ್ನು ಅರ್ಥ ಮಾಡಿಕೊಂಡು ಕಲಿಕೆಯಲ್ಲಿ ತೊಡಗಿಸಬೇಕು. ಆಗ ಮಾತ್ರ ಉನ್ನತ ಸಾಧನೆ ಎದುರು ನೋಡಬಹುದು ಎಂದರು.

ಪರೀಕ್ಷೆಯಲ್ಲಿ ಫೇಲ್ ಎಂದರೆ ಜೀವನದಲ್ಲಿ ಫೇಲ್ ಎಂದರ್ಥವಲ್ಲ. ಜೀವನ ಬಹಳ ದೊಡ್ಡದಿದ್ದು, ಅಲ್ಲಿ ನೂರಾರು ಪರೀಕ್ಷೆಗಳು ಎದುರಾಗುತ್ತವೆ. ಭರವಸೆಯನ್ನು ಯಾರೂ ಕಳೆದುಕೊಳ್ಳಬಾರದು. ಯಾವ ತಾಯಿಯೂ ತಮ್ಮ ಮಕ್ಕಳನ್ನು ದಡ್ಡರು ಎಂದು ಹೇಳುವುದಿಲ್ಲ. ಕಡಿಮೆ ಅಂಕ ತೆಗೆದಿದ್ದಾನೆ. ಆದರೆ, ಬೇರೆಲ್ಲಾ ವಿಷಯದಲ್ಲೂ ಬುದ್ಧಿವಂತ ಎನ್ನುತ್ತಾರೆ. ಈ ಮಾತು ಸತ್ಯ ಕೂಡ. ಯಾವುದೋ ಒಂದು ವಿಷಯದಲ್ಲಿ ಆಸಕ್ತಿ ಇಲ್ಲ ಎಂಬ ಮಾತ್ರಕ್ಕೆ ಉಳಿದ ವಿಷಯಗಳಲ್ಲೂ ದುರ್ಬಲ ಎಂದು ಹೇಳಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಭರವಸೆ ನೀಡಿ ಭವಿಷ್ಯ ರೂಪಿಸುತ್ತಿರುವ ಪ್ರೇರಣ ಫೌಂಡೇಷನ್ ಸಮಾಜದಲ್ಲಿ ಮಾದರಿ ಸ್ಥಾನದಲ್ಲಿ ನಿಲ್ಲುತ್ತದೆ. ಇಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಇಂತಹ ಸಾಧನೆಯನ್ನು ಹೊಮ್ಮಿಸುವಲ್ಲಿ ಸಫಲರಾಗಿದ್ದಾರೆ’ ಎಂದರು.

ಗುರುವಂದನೆ

ಇದೇ ವೇಳೆ ಪ್ರೇರಣ ಫೌಂಡೇಷನ್‌ ಅಧ್ಯಕ್ಷ ಎಸ್‌.ಎಸ್‌. ಭಟ್‌, ಕಾರ್ಯದರ್ಶಿ ಕೆ.ಆರ್. ನಿರಂಜನ್ ರಾಜೇ ಅರಸ್, ಖಜಾಂಚಿ ಎನ್‌.ಬಿ. ಪ್ರದೀಪ್ ಕುಮಾರ್ ಅವರಿಂದ ಪಾಠ ಕಲಿತ ವಿದ್ಯಾರ್ಥಿಗಳು, ಗುರುಗಳನ್ನು ಅಭಿನಂದಿಸಿದರು.

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ದಾರಿದೀಪ ಸಂಶೋಧನಾ ಕೇಂದ್ರದ ಮುಖ್ಯಸ್ಥ ಪ್ರೊ. ಬೋರಲಿಂಗಯ್ಯ ಮತ್ತು ಪ್ರೊ. ಸರಸ್ವತಿ ಬೋರಲಿಂಗಯ್ಯ ಉದ್ಘಾಟಿಸಿದರು. ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಚಿತ್ರ ಸಾಹಿತಿ ವಿ. ನಾಗೇಂದ್ರಪ್ರಸಾದ್, ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ವ್ಯಕ್ತಿತ್ವ ವಿಕಸನ ಮತ್ತು ಕಲಿಕಾ ತರಬೇತುದಾರ ಆರ್.ಎ. ಚೇತನ್ ರಾಮ್ ಮೊದಲಾದವರು ಇದ್ದರು.

----

ಕೋಟ್...

ಸಾಂಪ್ರದಾಯಿಕ ಶಿಕ್ಷಣ ಸಂಸ್ಥೆಗಳ ವಿಫಲತೆಯು ಪ್ರೇರಣದಂಥ ಸಂಸ್ಥೆಯ ಉದಯಕ್ಕೆ ಕಾರಣವಾಗುತ್ತದೆ. ಮಕ್ಕಳನ್ನು ಸಂತೈಸುವ, ಅವರನ್ನು ಅರ್ಥ ಮಾಡಿಕೊಂಡು ಕಲಿಕೆಯಲ್ಲಿ ತೊಡಗಿಸುವಲ್ಲಿ ಹಲವು ಸಂಸ್ಥೆಗಳು ಸೋಲುತ್ತಿವೆ. ಪ್ರೇರಣ ಯಾವುದೇ ಶಿಕ್ಷಣ ಸಂಸ್ಥೆಗೂ ಕಡಿಮೆಯಲ್ಲದ ಸಾಧನೆ ಮಾಡಿದೆ.

- ವಿ. ನಾಗೇಂದ್ರಪ್ರಸಾದ್, ಸಾಹಿತಿ ಮತ್ತು ನಿರ್ದೇಶಕ

Share this article