ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮೀಣ ಪ್ರದೇಶಗಳಲ್ಲಿ ಕೆರೆ ಕಟ್ಟೆಗಳು ಸಮೃದ್ಧಿಯಾದಾದರೆ ಜನಜಾನುವಾರುಗಳು ಸೇರಿದಂತೆ ರೈತರು ನೆಮ್ಮದಿಯಾಗಿರುತ್ತಾರೆ. ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದಲ್ಲಿ ಸುಮಾರು ಒಂದೂವರೆ ಕೋಟಿ ರು. ವೆಚ್ಚದ ಕೆರೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ಏರಿಗೆ ತಡೆಗೋಡೆ, ಕೋಡಿಗಳ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು ಎಂದರು.
ಕೆರೆಗಳಲ್ಲಿ ನೀರು ತುಂಬಿದಂತಿದ್ದರೆ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲ. ಜೊತೆಗೆ ಅಂತರ್ಜಲ ಮಟ್ಟ ಉತ್ತಮವಾಗಿರುತ್ತದೆ. ಕಳೆದ ಐದು ವರ್ಷಗಳ ಹಿಂದೆ ಅತಿವೃಷ್ಠಿಯಿಂದ ಅಘಲಯ ಕೆರೆ ಸೇರಿದಂತೆ ಸಂತೇಬಾಚಹಳ್ಳಿ ಮತ್ತು ಕಿಕ್ಕೇರಿ ಹೋಬಳಿಯ ಹಲವು ಕೆರೆಗಳು ಹಾನಿಗೀಡಾಗಿವೆ ಎಂದರು.ಹಾನಿಗೀಡಾದ ಕೆರೆಗಳ ದುರಸ್ಥಿಗೆ ಕೋಟ್ಯಂತರ ರು. ಅನುದಾನದ ಅಗತ್ಯವಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದ ಶಾಸಕರಿಗೆ ಸಮರ್ಪಕ ಅನುದಾನ ನೀಡುತ್ತಿಲ್ಲ. ಆದರೂ ನಾನು ಶಕ್ತಿಮೀರಿ ಅನುದಾನ ತಂದು ಹಾಗೂ ತಾಲೂಕನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತೇನೆ ಎಂದರು.
ಈ ವೇಳೆ ಜೆಡಿಎಸ್ ತಾಲೂಕು ಅಧ್ಯಕ್ಷ ಜಾನಕಿರಾಮ್, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಮುಖಂಡ ರಾದ ಬೇಲದಕೆರೆ ನಂಜಪ್ಪ, ನಾಗೇಂದ್ರ ಯೋಗೇಶ್, ಮಹೇಶ್ ಗುತ್ತಿಗೆದಾರ ಮೆಣಸ ಮಧು, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್ ಸೇರಿದಂತೆ ಹಲವರಿದ್ದರು.ವಿಜೃಂಭಣೆಯಿಂದ ನಡೆದ ಆಂಜನೇಯಸ್ವಾಮಿ ಉತ್ಸವ
ಪಾಂಡವಪುರ:ತಾಲೂಕಿನ ಸಣಬದಕೊಪ್ಪಲು ಗ್ರಾಮದಲ್ಲಿ 71ನೇ ವರ್ಷದ ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮಸ್ಥರ ಸಮ್ಮುಖದಲ್ಲಿ ಶ್ರೀಆಂಜನೇಯಸ್ವಾಮಿ ಉತ್ಸವ ಬಹಳ ವಿಜೃಂಭಣೆಯಿಂದ ನೆರವೇರಿತು.ಸ್ವಾಮಿಗೆ ಬೆಳಗ್ಗೆಯಿಂದ ಸಂಜೆವರೆಗೆ ಮಹಾಭಿಷೇಕ, ಅರ್ಚನೆ, ನೈವೇದ್ಯ, ಪೂಜಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು, ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್, ಜಿಪಂ ಮಾಜಿ ಸದಸ್ಯರಾದ ಎಚ್.ಮಂಜುನಾಥ್, ಸಿ.ಅಶೋಕ್, ಎಂಡಿಸಿಸಿ ಮಾಜಿ ನಿರ್ದೇಶಕ ವಿಜೇಂದ್ರಮೂರ್ತಿ, ಗ್ರಾಪಂ ಸದಸ್ಯರಾದ ಉಮಾ ರಾಜೇಗೌಡ, ಲಕ್ಷ್ಮಿ, ಜೆಡಿಎಸ್ ಯುವ ಮುಖಂಡ ಚನ್ನಕೇಶವ, ಲಕ್ಷ್ಮೀಸಾಗರ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಊರಿನ ಯಜಮಾನರು ಇತರರಿದ್ದರು.