ಸಂಭ್ರಮದಿಂದ ತೆರೆಕಂಡ ಶುಖಮುನಿ ತಾತನ ಜಾತ್ರೆ

KannadaprabhaNewsNetwork | Published : Mar 3, 2025 1:45 AM

ಸಾರಾಂಶ

ಭಾವೈಕ್ಯತೆಯ ಜಾತ್ರೆ ಎಂದೆ ಪ್ರಖ್ಯಾತಿಗೊಂಡ ತಾಲೂಕಿನ ದೋಟಿಹಾಳ ಗ್ರಾಮದ ಆರಾಧ್ಯದೈವ ಪವಾಡ ಪುರುಷ ಶ್ರೀ ಅವಧೂತ ಶುಖಮುನಿ ತಾತನ ಜಾತ್ರಾ ಮಹೋತ್ಸವಕ್ಕೆ ಶನಿವಾರ ರಾತ್ರಿ ತೆರೆ ಬಿದ್ದಿತು. ಈ ವೇಳೆ ಪಲ್ಲಕ್ಕಿ ಉತ್ಸವ, ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಿತು.

ಕುಷ್ಟಗಿ: ಭಾವೈಕ್ಯತೆಯ ಜಾತ್ರೆ ಎಂದೆ ಪ್ರಖ್ಯಾತಿಗೊಂಡ ತಾಲೂಕಿನ ದೋಟಿಹಾಳ ಗ್ರಾಮದ ಆರಾಧ್ಯದೈವ ಪವಾಡ ಪುರುಷ ಶ್ರೀ ಅವಧೂತ ಶುಖಮುನಿ ತಾತನ ಜಾತ್ರಾ ಮಹೋತ್ಸವಕ್ಕೆ ಶನಿವಾರ ರಾತ್ರಿ ತೆರೆ ಬಿದ್ದಿತು. ಈ ವೇಳೆ ಪಲ್ಲಕ್ಕಿ ಉತ್ಸವ, ಶ್ರೀಗಳ ಭಾವಚಿತ್ರ ಮೆರವಣಿಗೆ ನಡೆಯಿತು.

ಫೆ. 20ರಂದು ಆರಂಭವಾದ ಈ ಜಾತ್ರೆ ಸುಮಾರು ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯಲ್ಲಿ ಎಲ್ಲ ಕಾರ್ಯಕ್ರಮಗಳೂ ಸಂಪ್ರದಾಯಬದ್ಧವಾಗಿ ನಡೆದವು. ದೋಟಿಹಾಳ, ಕೇಸೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಒಗ್ಗಟ್ಟಾಗಿ ಜಾತ್ರೆ ಯಶಸ್ಸಿಗೆ ಶ್ರಮಿಸಿದರು.

ಪಲ್ಲಕ್ಕಿ ಉತ್ಸವ ಅತ್ಯಂತ ವೈಭವದಿಂದ ನಡೆಯಿತು. ದೇವಸ್ಥಾನ ಕಮಿಟಿ ಅಧ್ಯಕ್ಷ, ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ, ಕಂದಾಯ ನಿರೀಕ್ಷಕ ಅಬ್ದುಲ್ ರಜಾಕ ಮದಲಗಟ್ಟಿ, ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನುಮಂತಪ್ಪ ತಳವಾರ, ದೋಟಿಹಾಳ ಹಾಗೂ ಕೇಸೂರು ಗ್ರಾಪಂ ಆಡಳಿತ ಮಂಡಳಿ ಹಾಗೂ ದೇವಸ್ಥಾನ ಕಮಿಟಿಯವರ ನೇತೃತ್ವದಲ್ಲಿ ಸುಮಾರು ಒಂಬತ್ತು ಸಂಘಗಳಿಗೆ ಪಲ್ಲಕ್ಕಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ನೀಡಲಾಗಿತ್ತು. ಅದರಂತೆ ಎಲ್ಲರೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು.

ಕೊನೆಯ ದಿನ ಪಲ್ಲಕ್ಕಿ ಉತ್ಸವ: ಗುರುವಾರ ಮಹಾರಥೋತ್ಸವ ನಡೆದು ಎರಡನೇ ದಿನ ಶನಿವಾರ ರಾತ್ರಿ ಪಲ್ಲಕ್ಕಿ ಉತ್ಸವ ನಡೆಯಿತು. ಸಾಯಂಕಾಲ 7.30ಕ್ಕೆ ಪಲ್ಲಕ್ಕಿಯು ದೇವಸ್ಥಾನದಿಂದ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಗ್ರಾಮದ ಕೆಲವು ದೇವಸ್ಥಾನಗಳಿಗೆ ಗದ್ದುಗೆಹಾಕಿಸಿ, ಪೂಜೆ ಸಲ್ಲಿಸಲಾಯಿತು. ಆನಂತರ ಪಲ್ಲಕ್ಕಿ ದೇವಸ್ಥಾನ ತಲುಪಿತು. ಆನಂತರ ಭಜನೆಯೊಂದಿಗೆ ಶುಖಮುನಿ ಸ್ವಾಮಿಗಳ ಭಾವಚಿತ್ರ ಮೆರವಣಿಗೆ ನಡೆಸಿ, ಮಠಕ್ಕೆ ಬರುವುದರೊಂದಿಗೆ ಜಾತ್ರೆಗೆ ತೆರೆ ಎಳೆಯಲಾಯಿತು.

ಪಲ್ಲಕ್ಕಿ ಉತ್ಸವ, ಸಪ್ತ ಭಜನೆ, ಅನ್ನದಾಸೋಹ ಹಾಗೂ ರಥೋತ್ಸವದ ಸಂದರ್ಭದಲ್ಲಿ ಭಕ್ತಾದಿಗಳು, ಪಲ್ಲಕ್ಕಿ ಉತ್ಸವದ ಸೇವಾ ಸಮಿತಿಗಳು, ಅನ್ನದಾಸೋಹ ಸಮಿತಿ, ಗ್ರಾಮಸ್ಥರು, ದೇವಸ್ಥಾನದ ಕಮಿಟಿಯವರು, ಕಂದಾಯ ಇಲಾಖೆ, ಪೊಲೀಸ್‌ ಇಲಾಖೆ ನೇತೃತ್ವದಲ್ಲಿ, ಸ್ಥಳೀಯ ಗ್ರಾಪಂ ಆಡಳಿತ ಮಂಡಳಿಯವರ ಸಹಕಾರದಿಂದ ಈ ವರ್ಷದ ಜಾತ್ರೆ ಶಾಂತಿ-ಸೌಹಾರ್ದದಿಂದ ಯಶಸ್ವಿಯಾಗಿ ನಡೆಯಿತು.

ಕೇಸೂರಲ್ಲಿ ಉಡಿ ತುಂಬುವ ಕಾರ್ಯಕ್ರಮ: ಕೇಸೂರು ಗ್ರಾಮದ ವಿರೂಪಾಕ್ಷಯ್ಯಜ್ಜನ ಗದ್ದುಗೆ ಹತ್ತಿರ ಸತತವಾಗಿ ಒಂಬತ್ತು ದಿನಗಳ ಕಾಲ ಅನ್ನದಾಸೋಹ ಕಾರ್ಯಕ್ರಮ ನಡೆಯಿತು. ಶನಿವಾರ ರಾತ್ರಿಯ ಅನ್ನದಾಸೋಹ ಕಾರ್ಯಕ್ರಮದಲ್ಲಿ 13,000 ಶೇಂಗಾ ಹೋಳಿಗೆ ನೀಡಲಾಯಿತು. ಆನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಅಡುಗೆಭಟ್ಟರಿಗೆ ಹಾಗೂ ಅನ್ನದಾಸೋಹಕ್ಕೆ ಸಹಕಾರ ನೀಡಿದ ಮಹನೀಯರಿಗೆ ಸನ್ಮಾನ ಸಮಾರಂಭ ನಡೆಯಿತು.

Share this article