ಕಾರಟಗಿ: ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿಯಲ್ಲಿ ಗುರುವಾರ ಪಿಡಿಒ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಕರ್ನಾಟಕ ಗ್ರಾಮೀಣಾಭಿವೃದ್ಧಿ ಹಾಗೂ ರಾಜ್ ಪಂಚಾಯತ್ ಇಲಾಖೆಯ ನೌಕರರ ಸಂಘ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಹಾಗೂ ನಾನಾ ವೃಂದ ಸಂಘದ ಸಹಯೋಗದಲ್ಲಿ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಎಪಿಎಂಸಿ ಆವರಣದಲ್ಲಿನ ತಹಸೀಲ್ ಕಚೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಕಚೇರಿಯಲ್ಲಿ ಪಿಡಿಒ ರತ್ನಮ್ಮ ಗುಂಡಣ್ಣನವರ ಅವರು ಕರ್ತವ್ಯ ನಿರ್ವಹಿಸುವಾಗಲೇ ಗ್ರಾಪಂ ಸದಸ್ಯೆ ಶಾಂತಮ್ಮ ಹಾಗೂ ಅವರ ಪುತ್ರ ಭೀಮೇಶ ಬಂಡಿವಡ್ಡರ್ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ. ಇದರೊಂದಿಗೆ ಜೀವ ಬೆದರಿಕೆ ಹಾಕುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ತಕ್ಷಣ ಆರೋಪಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರುಪಿಡಿಒ ಸಂಘದ ಜಿಲ್ಲಾ ಘಟಕದ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷ ಜ್ಯೋತಿ ರೆಡ್ಡೇರ್ ಮಾತನಾಡಿ, ಸದಸ್ಯೆಯೇ ಅಧಿಕಾರಿಯ ಮೇಲೆ ಹಲ್ಲೆ ನಡೆಸಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಕೂಡಲೇ ಶಾಂತಮ್ಮ ಅವರ ಸದಸ್ಯತ್ವ ರದ್ದುಪಡಿಸಿ ಅವರ ಪುತ್ರ ಸೇರಿದಂತೆ ಇಬ್ಬರು ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದರು.
ಈ ಹಿಂದೆಯೇ ಪಿಡಿಒಗಳ ಮೇಲೆ ಇದೇ ರೀತಿ ಘಟನೆಗಳು ನಡೆದಿದ್ದು, ಸರ್ಕಾರ ಆ ಪ್ರಕರಣಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕು. ರಾಜ್ಯದಲ್ಲಿ ೧೫೦ಕ್ಕೂ ಹೆಚ್ಚು ಪಿಡಿಒ ಸೇರಿದಂತೆ ನಾನಾ ಇಲಾಖೆ ನೌಕರರ ಮೇಲೆ ಹಲ್ಲೆ ಮಾಡಲಾಗುತ್ತಿದೆ. ಇದರಿಂದ ಕರ್ತವ್ಯ ನಿರ್ವಹಿಸಲು ಸಿಬ್ಬಂದಿ ಭಯಪಡುತ್ತಿದ್ದಾರೆ. ಸರ್ಕಾರ ಇಂತಹ ಘಟನೆಗಳನ್ನು ತಡೆಗಟ್ಟಲು ಹೊಸ ಕಾಯ್ದೆ ಜಾರಿಗೆ ತರಬೇಕು. ಹಲ್ಲೆ ಒಳಗಾದ ಪಿಡಿಒಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ನಾಯಕ ಗ್ರೇಡ್-೨ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ತಾಪಂ ಕಚೇರಿಗೆ ತೆರಳಿ ತಾಪಂ ಯೋಜನಾಧಿಕಾರಿ ರಾಘವೇಂದ್ರ ಗಂಟಿ ಅವರಿಗೆ ಮನವಿ ಸಲ್ಲಿಸಿದರು.ಆರ್‌ಡಿಪಿಆರ್ ಇಲಾಖೆ ನೌಕರರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಹಿರೇಮಠ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಮಂಜುನಾಥ ಹಿರೇಮಠ, ಕಾರ್ಯದರ್ಶಿ ವೆಂಕೋಬ ಚಲುವಾದಿ, ನಿರ್ದೇಶಕರಾದ ಬಸವರಾಜ ರ‍್ಯಾವಳದ, ಗುರುಪ್ರಸಾದ, ಸಲ್ಮಾ ಬೇಗಂ, ಎಡಿಪಿಆರ್ ಕನಕಪ್ಪ, ಪಿಡಿಒಗಳಾದ ಭಾಗೇಶ್ವರಿ, ಬಸಪ್ಪ, ಸಯ್ಯದ್ ಜಿಲಾನಿ ಪಾಶಾ, ಪಂಚಾಯತ್ ರಾಜ್ ಇಲಾಖೆಯ ಮಹಿಬೂಬ್, ಹೇಮಾವತಿ, ಸ್ವಪ್ನಾ, ಸಂದೀಪ್, ಹನುಮಂತಪ್ಪ, ಜಮೀಲ್ ಅಹಮದ್, ವೀರೇಶ, ಪ್ರಕಾಶ, ಅಕ್ಬರ್ ಅಲಿ, ಕಂದಾಯ ಇಲಾಖೆಯ ಸಾವಿತ್ರಿ, ಉಮಾ ಮಹೇಶ್ವರ, ಗಿರೀಶ, ಈಶ್ವರ, ಶಿಕ್ಷಕ ಶಿವರಾಜಕುಮಾರ ಇನ್ನಿತರರು ಇದ್ದರು.