ಕನ್ನಡಪ್ರಭ ವಾರ್ತೆ ಮೂಡಲಗಿ
ಧಾರ್ಮಿಕ, ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ದಾಸೋಹ ಚಕ್ರವರ್ತಿ ಬಂಡಿಗಣಿ ದಾನೇಶ್ವರ ಶ್ರೀಗಳ ಕಾರ್ಯವು ಶ್ಲಾಘನೀಯವಾದುದ್ದು ಎಂದು ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ ವ್ಯಕ್ತಪಡಿಸಿದರು.ತಾಲೂಕಿನ ಅರಭಾವಿ ಪಟ್ಟಣ ವ್ಯಾಪ್ತಿಯ ಸತ್ತಿಗೇರಿ ತೋಟದ ಬಸವಗೋಪಾಲ ಶಿಕ್ಷಣ ಸಂಸ್ಥೆಯ ಅಡಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಭೇಟಿ ನೀಡಿ ಮಾತನಾಡಿದ ಅವರು, ಶಾಲೆಯ ಪ್ರಗತಿ ಕಾರ್ಯಕ್ಕೆ ತಮ್ಮ ಮೆಚ್ಚುಗೆ ಸೂಚಿಸಿದರು. ಸತ್ತಿಗೇರಿತೋಟದಲ್ಲಿ ಕಳೆದ ೮ ವರ್ಷಗಳಿಂದ ಬಂಡಿಗಣಿ ಮಠದ ಶ್ರೀಗಳು ಬಡ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತ ಶೈಕ್ಷಣಿಕ ಸುಧಾರಣೆಗಾಗಿ ಶ್ರಮಿಸುತ್ತಿದ್ದಾರೆ. ಸುಮಾರು ೮೦೦ಕ್ಕೂ ಅಧಿಕ ಮಕ್ಕಳು ಈ ಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಆಂಗ್ಲ ಮಾಧ್ಯಮ ಶಾಲೆಯು
ಎಲ್‌ಕೆಜಿಯಿಂದ ೭ನೇ ತರಗತಿ ಮತ್ತು ಕನ್ನಡ ಮಾಧ್ಯಮದ ಪ್ರೌಢಶಾಲೆಯನ್ನು ಆರಂಭಿಸುವುದರ ಜೊತೆಗೆ ವಸತಿ ನಿಲಯವನ್ನು ನಿರ್ಮಿಸಿಕೊಟ್ಟಿದ್ದಾರೆ. ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶ್ರೀಗಳ ಕಾರ್ಯವನ್ನು ಇಡೀ ಸಮಾಜವೇ ಕೊಂಡಾಡುತ್ತಿದೆ ಎಂದು ಹೇಳಿದರು.ಬಂಡಿಗಣಿ ಮಠವು ಅನ್ನದಾಸೋಹಕ್ಕೆ ಹೆಸರುವಾಸಿಯಾಗಿದೆ. ಅಸಂಖ್ಯಾತ ಭಕ್ತರನ್ನು ಸಂಪಾದಿಸಿರುವ ದಾನೇಶ್ವರ ಶ್ರೀಗಳು ಕರ್ನಾಟಕವೂ ಸೇರಿದಂತೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳ ಅನೇಕ ಪ್ರಸಿದ್ಧ ದೇವಸ್ಥಾನಗಳಲ್ಲಿ ಪ್ರತಿ ವರ್ಷವೂ ಸುಮಾರು ೨೮೨ ಕಡೆಗಳಲ್ಲಿ ಅನ್ನ ದಾಸೋಹವನ್ನು ಏರ್ಪಡಿಸುವ ಮೂಲಕ ದಾಸೋಹ ರತ್ನವಾಗಿ ಕಂಗೋಳಿಸುತ್ತಿದ್ದಾರೆ. ಜಾತಿ, ಮತ, ಪಂಥಗಳೆಂಬ ಭೇದ- ಭಾವ ಮಾಡದೇ ಎಲ್ಲರನ್ನು ಸಮಾನವಾಗಿ ಕಾಣುತ್ತಿರುವ ಆಧುನಿಕ ಬಸವಣ್ಣನವರು ಎಂದು ಶ್ರೀಗಳ ಕಾರ್ಯಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಶಾಲೆಯಿಂದ ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮಹಾಲಿಂಗ ಮಾಡಲಗಿ, ದುರದುಂಡಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಮಪ್ಪ ಸಣ್ಣಲಗಮನ್ನವರ, ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ, ಅಶೋಕ ಖಂಡ್ರಟ್ಟಿ, ಭೀಮಶಿ ಅಂತರಗಟ್ಟಿ, ಸಂಸ್ಥೆಯ ನಿರ್ದೇಶಕರಾದ ಅಲ್ಲಪ್ಪ ಗಣೇಶವಾಡಿ, ಮಹಾನಿಂಗ ಜೋನಿ, ದುಂಡಪ್ಪ ಬೆಳವಿ, ಹಣಮಂತ ಸೋಲ್ಹಾಪೂರಿ, ಭೀಮಶಿ ಬಂಗಾರಿ, ದುಂಡಪ್ಪ ಸತ್ತಿಗೇರಿ, ಬಸಪ್ಪ ಜೋನಿ, ದುಂಡಪ್ಪ ಒಬ್ಬಟ್ಟಗಿ, ವಿಠ್ಠಲ ಒಬ್ಬಟ್ಟಗಿ, ಗೂಳಪ್ಪ ಮಾನೆಪ್ಪಗೋಳ, ಭೀಮಶಿ ಸಣ್ಣ ಯಲ್ಲಮ್ಮನವರ, ಅಜ್ಜಪ್ಪ ಬೆಳವಿ, ಲಕ್ಷ್ಮಣ ಶಿವಾಪೂರಿ, ಶಾಲೆಯ ಪ್ರಧಾನ ಶಿಕ್ಷಕ ಯಲ್ಲಪ್ಪ ಒಬ್ಬಟ್ಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.