ಖಾಸಗಿ ಶಾಲೆಗಳ ಕಂದಾಯ ವಸೂಲಿಗೆ ಆಗ್ರಹ

KannadaprabhaNewsNetwork | Published : Mar 3, 2025 1:45 AM

ಸಾರಾಂಶ

ಪುರಸಭೆಯಿಂದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಸಾರ್ವಜನಿಕರು ಕಂದಾಯವನ್ನು ಮಾತ್ರ ಪಕ್ಕದ ಪರಗೋಡು, ದೇವರಗುಡಿಪಲ್ಲಿ, ಘಂಟಂವಾರಿಪಲ್ಲಿ ಗ್ರಾಪಂಗಳಿಗೆ ಸಲ್ಲಿಸುತ್ತಿದ್ದಾರೆ. ಆದಾಯ ಗ್ರಾಪಂಗಳಿಗೆ ನಷ್ಟ ಪುರಸಭೆಗೆ 3 ತಿಂಗಳಲ್ಲಿ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದ ತಾಪಂ ಇಒ ಮಾತು ತಪ್ಪಿದ್ದಾರೆ

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಪುರಸಭೆ ವ್ಯಾಪ್ತಿಗೆ ಬರುವ ಎಲ್ಲ ಖಾಸಗಿ ಶಾಲಾ, ಕಾಲೇಜುಗಳು ಪುರಸಭೆಯಿಂದ ಮೂಲಭೂತ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಶುಲ್ಕದ ಹೆಸರಲ್ಲಿ ಲಕ್ಷಾಂತರ ರು.ಗಳನ್ನು ಅವರು ಪಡೆಯುತ್ತಿದ್ದರೂ ಪುರಸಭೆಗೆ ಕಟ್ಟಬೇಕಾದ ಕಂದಾಯವನ್ನು ಮಾತ್ರ ಅವರಿಂದ ವಸೂಲಿ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪುರಸಭೆಯ ಸದಸ್ಯರು ಅಧಿಕಾರಿಗಳನ್ನು ಪ್ರಶ್ನಿಸಿದರು.

ಎ.ಶ್ರೀನಿವಾಸ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪ್ರಶ್ನಿದ ಅ‍ವರು, ಪುರಸಭೆಯಿಂದ ಸೌಲಭ್ಯಗಳನ್ನು ಪಡೆದು ಕಂದಾಯವನ್ನು ವಿವಿಧ ಗ್ರಾಪಂಗಳಿಗೆ ನೀಡಲಾಗುತ್ತಿದೆ. ಮತ್ತೊಂದು ಕಡೆ ವಾಣಿಜ್ಯ ಮಳಿಗೆಗಳ ಲಕ್ಷಾಂತರ ಬಾಡಿಗೆ ವಸೂಲಾತಿ ಮಾಡುತ್ತಿಲ್ಲ. ಪಟ್ಟಣದ ಅಭಿವೃದ್ಧಿ ಆಗುವುದಾದರೂ ಹೇಗೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆ ಕಂದಾಯ ಗ್ರಾಪಂಗೆ

ಪುರಸಭೆಯಿಂದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿರುವ ಸಾರ್ವಜನಿಕರು ಕಂದಾಯವನ್ನು ಮಾತ್ರ ಪಕ್ಕದ ಪರಗೋಡು, ದೇವರಗುಡಿಪಲ್ಲಿ, ಘಂಟಂವಾರಿಪಲ್ಲಿ ಗ್ರಾಪಂಗಳಿಗೆ ಸಲ್ಲಿಸುತ್ತಿದ್ದಾರೆ. ಆದಾಯ ಗ್ರಾಪಂಗಳಿಗೆ ನಷ್ಟ ಪುರಸಭೆಗೆ 3 ತಿಂಗಳಲ್ಲಿ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದ್ದ ತಾಪಂ ಇಒ ಮಾತು ಏನಾಯಿತು. ಅವರನ್ನು ಸಭೆಗೆ ಕರೆಯಿಸಿ ಎಂದು ಒತ್ತಾಯಿಸಿದರು.

ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಪರಿಣಾಮ ಮಧ್ಯೆ ಪ್ರವೇಶ ಮಾಡಿದ ಅಧ್ಯಕ್ಷ ಎ.ಶ್ರೀನಿವಾಸ ಮತ್ತು ಮುಖ್ಯಾಧಿಕಾರಿ ಶ್ರೀನಿವಾಸ ಕೇವಲ 10 ದಿನಗಳು ಸಮಯ ನೀಡಿ ಅವರಿಗೆ ನೋಟಿಸ್ ನೀಡಿ ಎಲ್ಲ ಸಮಸ್ಯೆಗಳಿಗೆ ತಿಲಾಂಜಲಿ ಹಾಡಲಾಗುವುದು ಎಂದರು.

ಪಟ್ಟಣದಲ್ಲಿ ನೀರಿನ ಕೃತಕ ಅಭಾವ

ಬೇಸಿಗೆ ಪ್ರಾರಂಭಕ್ಕೂ ಮೊದಲೇ ಪಟ್ಟಣದ ಜನತೆಗೆ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಕೃತಕ ನೀರಿನ ಅಭಾವ ಸೃಷ್ಟಿಯಾಗಿದೆ. ಚಿತ್ರಾವತಿ ಜಲಾಶಯ ತುಂಬಿ-ತುಳುಕುತ್ತಿದೆ. ಕೊಳವೆಬಾವಿಗಳಲ್ಲಿ ಯಥೇಚ್ಛವಾದ ನೀರಿದೆ. ಅದರೂ ಸಹ ಪಟ್ಟಣದಲ್ಲಿ 10 ದಿನಕ್ಕೊಮ್ಮೆಯಾದರೂ ನೀರು ಸರಬರಾಜು ಮಾಡುತ್ತಿಲ್ಲ ಏಕೆ ಎಂದು ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಪುರಸಭೆ ಸದಸ್ಯರು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಉಪಾಧ್ಯಕ್ಷೆ ಸುಜಾತ ನರಸಿಂಹನಾಯ್ಡು, ಸದಸ್ಯರಾದ ಶ್ರೀನಿವಾಸರೆಡ್ಡಿ, ಎ.ನಂಜುಂಡಪ್ಪ, ಬಿ.ವಿ. ನರಸಿಂಹಮೂರ್ತಿ, ಗಡ್ಡಂ ರಮೇಶ್, ಶ್ರೀನಾಥ, ಶಬಾನ ಪರ್ವಿನ್, ರೇಷ್ಮಾಭಾನು, ನಿಸ್ಸಾರ್ ಅಹಮದ್, ನೂರುಲ್ಲಾ, ಮಧುಸೂದನರೆಡ್ಡಿ, ವನಿತಾದೇವಿ, ನಾಮನಿರ್ದೇಶನ ಸದಸ್ಯರಾದ ಕೆ.ಎನ್. ಹರೀಶ್, ಸರ್ದಾರಭಾಷ, ಆಂಜನೇಯರೆಡ್ಡಿ, ಅನ್ಸರ್‌ಪಾಷ, ಕ್ರಿಕೆಟ್ ಮೂರ್ತಿ, ಕಂದಾಯ ಅಧಿಕಾರಿ ಅತಾವುಲ್ಲಾ ಲೆಕ್ಕಾಧಿಕಾರಿ ಶ್ರೀಧರ್, ಕೃಷ್ಣಪ್ಪ ಮತ್ತಿತರರು ಇದ್ದರು.

Share this article