ಬಾರದ ಆಕ್ಷೇಪ: ಅಂಬೇಡ್ಕರ್‌, ರವೀಂದ್ರ ಹೆಸರು ನಾಮಕರಣಕ್ಕೆ ಪುರಸಭೆ ಒಪ್ಪಿಗೆ

KannadaprabhaNewsNetwork | Published : May 16, 2025 1:53 AM
Follow Us

ಸಾರಾಂಶ

ಪಟ್ಟಣದ ಐ.ಬಿ. ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಹಾಗೂ ಪುರಸಭಾ ಸಭಾಂಗಣಕ್ಕೆ ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಹೆಸರು ನಾಮಕರಣ ಮಾಡಲು ಈ ಹಿಂದೆ ಅನುಮೋದನೆ ನೀಡಿದ್ದನ್ನು ಹೊರಡಿಸಿದ ಪತ್ರಿಕಾ ಪ್ರಕಟಣೆಗೆ ಯಾವುದೇ ಆಕ್ಷೇಪ ಬರದಿರುವುದರಿಂದ ಗುರುವಾರ ಇಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆ ಪುನಃ ಒಪ್ಪಿಗೆ ಸೂಚಿಸಿತು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ಪಟ್ಟಣದ ಐ.ಬಿ. ವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಹಾಗೂ ಪುರಸಭಾ ಸಭಾಂಗಣಕ್ಕೆ ಮಾಜಿ ಶಾಸಕ ದಿ.ಎಂ.ಪಿ. ರವೀಂದ್ರ ಹೆಸರು ನಾಮಕರಣ ಮಾಡಲು ಈ ಹಿಂದೆ ಅನುಮೋದನೆ ನೀಡಿದ್ದನ್ನು ಹೊರಡಿಸಿದ ಪತ್ರಿಕಾ ಪ್ರಕಟಣೆಗೆ ಯಾವುದೇ ಆಕ್ಷೇಪ ಬರದಿರುವುದರಿಂದ ಗುರುವಾರ ಇಲ್ಲಿ ನಡೆದ ಪುರಸಭಾ ಸಾಮಾನ್ಯ ಸಭೆ ಪುನಃ ಒಪ್ಪಿಗೆ ಸೂಚಿಸಿತು.

ಈ ಬಗ್ಗೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಸಭೆಯಲ್ಲಿ ಈ ವಿಚಾರ ಮಂಡಿಸಿದಾಗ ಸಭೆ ಅನುಮೋದನೆ ನೀಡಿತು. ಪಟ್ಟಣದ ಜೆಎಂಎಫ್‌ ಸಿ ನ್ಯಾಯಾಲಯದ ಆವರಣದಲ್ಲಿ ಹೈಮಾಸ್ಟ್‌ ಲೈಟ್‌ಗಳನ್ನು ಅಳವಡಿಸಲು ನ್ಯಾಯಾಧೀಶರ ಸೂಚನೆಯಂತೆ ಸಭೆ ಒಪ್ಪಿಗೆ ಸೂಚಿಸಿತು.

ಈ ಸಂದರ್ಭ ಮಾತನಾಡಿದ ಸದಸ್ಯ ಜಾಕೀರ ಹುಸೇನ ಅವರು ಪ್ರತಿಯೊಂದು ವಾರ್ಡ್‌ಗಳಲ್ಲಿ ಸಹ ಹೈಮಾಸ್ಟ್‌ ಲೈಟ್‌ ಅಳವಡಿಸಿ ಎಂದು ಕೋರಿದರು, ಆಗ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ ಅವರು ಕೆಕೆಆರ್‌ ಡಿಬಿಯಲ್ಲಿ ಶಾಸಕರು ಎಲ್ಲ ವಾರ್ಡ್‌ಗಳಲ್ಲೂ ಹೈಮಾಸ್ಟ್‌ ಲೈಟ್‌ ಅಳವಡಿಸುತ್ತಾರೆ ಎಂದು ಹೇಳಿದರು.

ಪಟ್ಟಣದಲ್ಲಿ ಇರುವ ಸಿಎ ನಿವೇಶನಗಳು ಒತ್ತುವರಿ ಯಾಗಬಾರದು, ಆದ್ದರಿಂದ ಎಲ್ಲ ಸಿಎ ನಿವೇಶನಗಳಿಗೆ ತಂತಿ ಬೇಲಿ ಅಳವಡಿಸಿ ಎಂದು ನಾಮನಿರ್ದೇಶಿತ ಸದಸ್ಯ ಹೇಮಣ್ಣ ಮೋರಗೇರಿ ಕೋರಿದರು.

ನಾಮನಿರ್ದಶನ ಸದಸ್ಯರಿಗೆ ಗೌರವಧನ ಕೊಡಿ ಎಂದು ನಾಮನಿರ್ದೆಶನ ಸದಸ್ಯೆ ಸುಮಾ ಜಗದೀಶ ಮನವಿ ಮಾಡಿದರು. ಆಗ ಇತರ ನಾಮನಿರ್ದೇಶಿತ ಸದಸ್ಯರಾದ ಗುಡಿ ನಾಗರಾಜ, ವಸಂತಪ್ಪ ಹೂವಿನಹಡಗಲಿ ಹಾಗೂ ಸಂಡೂರು ಪುರಸಭೆಗಳಲ್ಲಿ ನೀಡಿದ್ದಾರೆ ಎಂದು ಧ್ವನಿಗೂಡಿಸಿದರು. ಆಗ ಮುಖ್ಯಾಧಿಕಾರಿಗಳು ಸರ್ಕಾರದ ಆದೇಶವಿದ್ದರೆ ತನ್ನಿ ಕೊಡೋಣ ಅಂತಹ ಯಾವುದೇ ಆದೇಶವಿಲ್ಲ ಎಂದು ಉತ್ತರಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿ ಬರುವ ವಿವಿಧ ಏಕ ನಿವೇಶನ ವಸತಿ ವಿನ್ಯಾಸಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೆಶಕರು ತಯಾರಿಸಿರುವ ಕರಡು ಏಕ ನಿವೇಶನ ವಿನ್ಯಾಸಕ್ಕೆ ಸಭೆ ಅನುಮೋದನೆ ನೀಡಿತು.

ಪುರಸಭೆಗೆ ವಿವಿಧ ಯೋಜನೆಗಳಲ್ಲಿ ಬಿಡುಗಡೆಯಾಗಿರುವ ಅನುದಾನಗಳಲ್ಲಿ ಅನುಮೋದನೆ ಪಡೆದ ಕ್ರಿಯಾಯೋಜನೆಯಲ್ಲಿನ ಕಾಮಗಾರಿಗಳನ್ನು ಇ. ಪ್ರೊಕ್ಯೂರ್‌ ಮೆಂಟ್‌ ಮೂಲಕ ಕರೆದಿರುವ ಟೆಂಡರುಗಳಿಗೆ ಸಭೆ ಅನುಮೋದನೆ ನೀಡಿತು.

ಪುರಸಭಾ ಅಧ್ಯಕ್ಷೆ ಎಂ. ಫಾತೀಮಾಭೀ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌. ವೆಂಕಟೇಶ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಎಂಜಿನಿಯರ್‌ ಸಿದ್ದೇಶ, ಆರೋಗ್ಯ ನಿರೀಕ್ಷಕ ಮಂಜುನಾಥ ಸಿಬ್ಬಂದಿ ಹಾಜರಿದ್ದರು.