ಶಿವಮೊಗ್ಗ: ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನಸಾಮಾನ್ಯರ ಪರಿಶ್ರಮದ ಫಲವಾಗಿ ಇಂದು ನೂತನ ತಾಲೂಕು ಪಂಚಾಯ್ತಿ ಕಟ್ಟಡ ಉದ್ಘಾಟನೆಯಾಗಿರುವುದು ಬಹಳ ಸಂತೋಷವನ್ನು ಉಂಟುಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ತಾಲೂಕು ಪಂಚಾಯಿತಿ ನೂತನ ಕಟ್ಟಡವನ್ನು ಬಹಳ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಇನ್ನು ಬಾಕಿ ಉಳಿದಿರುವ ಕಾಮಗಾರಿಗಳಿಗೆ, ಹೆಚ್ಚಿನ ಅನುದಾನ ತಂದು ಉಳಿದ ಕೆಲಸವನ್ನು ಸಂಪೂರ್ಣ ಮಾಡಲು ಸಹಕರಿಸುವುದಾಗಿ ಭರವಸೆ ನೀಡಿದರು.ಕಾರ್ಯಪಾಲಕ ಅಭಿಯಂತರ ಬಿ.ಎನ್.ಮಂಜುನಾಥ್ ಮಾತನಾಡಿ, ತಾ.ಪಂ. ಕಟ್ಟಡವು ೨ ಕೋಟಿ ರು. ಮೊತ್ತದಲ್ಲಿ ಅನುಮೋದನೆಗೊಂಡಿದ್ದು, 1.72 ಕೋಟಿ ರು. ಮೊತ್ತದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಟ್ಟಡಕ್ಕೆ ತಾರಸಿ ಶೀಟ್ ಸೇರಿದಂತೆ ಇನ್ನೂ ಕೆಲವು ಕಾಮಗಾರಿಗಳು ಬಾಕಿ ಉಳಿದಿದ್ದು, ಸಚಿವರು ಅನುದಾನ ಬಿಡುಗಡೆ ಮಾಡಿಸಿಕೊಡಬೇಕೆಂದು ಮನವಿ ಮಾಡಿದರು.ಶಾಸಕಿ ಶಾರದಾ ಪೂರ್ಯಾನಾಯ್ಕ್ ಮಾತನಾಡಿ, ತಾಪಂ ಕಟ್ಟಡವನ್ನು ಸುಸಜ್ಜಿತವಾಗಿನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ತಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಆಯ್ಕೆಯಾಗಿ ಇಲ್ಲಿ ಉತ್ತಮವಾದ ಆಡಳಿತ ನಡೆಸುವಂತಾಗಲಿ ಎಂದು ಹಾರೈಸಿದರು.ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಚೇತನ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ತಾಲೂಕು ಗ್ಯಾರಂಟಿ ಯೋಜನೆಯ ಅಧ್ಯಕ್ಷ ಎಚ್.ಎಂ.ಮಧು, ಜಿ.ಪಂ.ಸಿಇಒ ಎನ್.ಹೇಮಂತ್, ತಾಪಂ ಇಒ ತಾರಾ ಇತರರಿದ್ದರು.