ಶಿವಮೊಗ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಸರ್ಕಾರವಾಗಿ ಪರಿವರ್ತನೆ ಆಗುತ್ತಿದ್ದು, ಸಂವಿಧಾನದ ಹಕ್ಕುಗಳನ್ನೇ ಉಲ್ಲಂಘನೆ ಮಾಡಿ, ತುಷ್ಟೀಕರಣ ಅತಿರೇಖಕ್ಕೆ ಮುನ್ನುಡಿ ಬರೆದಿದೆ. ಕೇವಲ ಮುಸ್ಲಿಂ ಯುವಕರಿಗೆ ಪೊಲೀಸ್ ಟ್ರೈನಿಂಗ್ ನಡೆಸುತ್ತಿದೆ. ಇದಕ್ಕೆ ಹಿಂದೂ ಸಮಾಜದ ಧಿಕ್ಕಾರವಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಕಿಡಿಕಾರಿದರು.ಶನಿವಾರ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಅಲ್ಪಸಂಖ್ಯಾತರ ಪರವಾದ ರಾಜ್ಯ ಸರ್ಕಾರದ ಧೋರಣೆಗಳನ್ನು ತೀವ್ರವಾಗಿ ಖಂಡಿಸಿದರು. ಸರ್ಕಾರದ ಕಾರ್ಯಕ್ರಮಗಳು ಈ ಮುಂಚೆ ನಾಡಗೀತೆ, ವಂದೇ ಮಾತರಂ ಗೀತೆಗಳ ಮೂಲಕ ಶುರುವಾಗುವ ಪರಿಪಾಠ ಇತ್ತು. ಆದರೆ, ಈಗ ಸರ್ಕಾರಿ ಕಾರ್ಯಕ್ರಮಗಳು ಕುರಾನ್ ಪಠಣದ ಮೂಲಕ ಶುರುವಾಗುತ್ತಿವೆ. ಇಂತಹ ಕೆಟ್ಟ ಪರಿಪಾಠಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ನಾಂದಿ ಹಾಡಿದ್ದಾರೆ. ಇದು ಅತ್ಯಂತ ಖಂಡನೀಯವಾಗಿದ್ದು. ಮಾತೆತ್ತಿದರೆ ಪ್ರಧಾನಿ ಮೋದಿ ಅವರನ್ನು ಟೀಕಿಸಿ,ಬೋಧನೆ ಮಾಡುವ ಮಹಾಪುರುಷ ಸಂತೋಷ್ ಲಾಡ್, ಸಂವಿಧಾನ ವಿರೋಧಿ ಕ್ರಮಕ್ಕೆ ಚಾಲನೆಕೊಟ್ಟಿದ್ದಾರೆ. ಇದಕ್ಕೆ ಹಿಂದೂ ಸಮಾಜ ಧಿಕ್ಕಾರ ಹೇಳುತ್ತದೆ ಎಂದು ಗುಡುಗಿದರು.ಸಚಿವ ಸಂತೋಷ್ ಲಾಡ್ ಅವರ ಮುಸ್ಲಿಂ ತುಷ್ಟೀಕರಣದ ಕಥೆ ಇದಾದರೆ, ಸರ್ಕಾರ ತುಷ್ಟೀಕರಣ ನೀತಿಗೆ ಇನ್ನಷ್ಟು ಇಂಬು ನೀಡಿ, ಮುಸ್ಲಿಂ ಸಮಾಜದವರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವ ಕೆಲಸ ಮಾಡುತ್ತಿದೆ. ಹಿಂದೂ ಸಮಾಜದ ಯುವಜನರಿಗೆ ಕಾಲೇಜುಗಳ ಕೊರತೆ ಇದ್ದಾಗ್ಯೂ ಮುಸ್ಲಿಂ ಬಾಲಕಿಯರಿಗೆ ಪ್ರತ್ಯೇಕ ಕಾಲೇಜುಗಳನ್ನು ತೆರೆಯುವ ಯೋಚನೆ ಮಾಡುತ್ತದೆ. ಈಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮುಸ್ಲಿಂ ಯುವಜನರಿಗೆ ಅನುಕೂಲ ಮಾಡಿಕೊಡಲು ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ನೇಮಕಾತಿಗೆ ತರಬೇತಿ ನೀಡಲಾಗುತ್ತಿದೆ. ಈ ರೀತಿ ತಾರಾತಮ್ಯ ಯಾಕೆ ? ಎಂದು ಪ್ರಶ್ನಿಸಿದರು.ಮುಸ್ಲಿಂ ಸಮಾಜವೇನು ಪ್ರತ್ಯೇಕವಾಗಿಲ್ಲ, ಒಬಿಸಿಯಲ್ಲೂ ಅವರಿಗೆ ಅವಕಾಶವಿದೆ. ವಿವಿಧ ವಿಭಾಗಗಳಲ್ಲೂ ಅವರಿಗೆ ನೇಮಕಾತಿ ಅವಕಾಶವಿದೆ. ಹೀಗಿದ್ದೂ ಅವರಿಗೆ ಪ್ರತ್ಯೇಕ ಅನುದಾನದ ಮೂಲಕ ತರಬೇತಿ ನೀಡುವುದೇಕೆ? ಇದರ ಉದ್ದೇಶವೇನು?. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆಯೇ ? ಒಂದು ರೀತಿ ಮುಸ್ಲಿಂ ಯುವಕರ ಕಾನೂನುಬಾಹಿರ ಚಟುವಟಿಕೆಗಳಿಗೆ ಕಾನೂನಾತ್ಮಕ ಅವಕಾಶ ನೀಡುವ ಹುನ್ನಾರ ಇದರ ಹಿಂದೆ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದರು.ರಾಜ್ಯದ ರಸ್ತೆಗಳಲ್ಲಿ ಮಾತ್ರ ಗುಂಡಿ ಗೊಟರು ಬಿದ್ದಿಲ್ಲ, ಕಾನಾನು ಸುವ್ಯವಸ್ಥೆ ಕೂಡ ಹಳ್ಳ ಹಿಡಿದಿದೆ. ಸಮಾಜದ ವಿರೋಧಿ ಶಕ್ತಿಗಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ ಎನ್ನುವ ಆತಂಕ ಶುರುವಾಗಿದೆ. ಕಳೆದ 8 ತಿಂಗಳಲ್ಲಿ 84386 ಅಪರಾಧ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಗೂಂಡಾ ರಾಜ್ಯವಿದೆಯೇ ಎನ್ನುವ ಆತಂಕವಿದೆ. ಈ ಬಗ್ಗೆ ಗೃಹಸಚಿವರನ್ನು ಕೇಳಿದರೆ ಎಲ್ಲೋ ಒಂದು ನಡೆದ ಘಟನೆ ಹೇಳುತ್ತೀರಿ ಎಂದು ಉಡಾಫೆಯ ಉತ್ತರ ನೀಡುತ್ತಾರೆ ಎಂದು ಗುಡುಗಿದರು.ರಾಜ್ಯದಲ್ಲೂ ಐ ಲವ್ ಮೊಹಮ್ಮದ್ ಕೃತ್ಯ ನಡೆದಿದೆ. ಕೆಲವು ಮುಸ್ಲಿಂ ಆಂತರಿಕ ಭಯೋತ್ಪಾದಕರು ಇದನ್ನು ಶುರು ಮಾಡಿದ್ದಾರೆ. ಉತ್ತರ ಪ್ರದೇಶದ ಮೌಲನಾ ತೌಫಿಕ್ ರಾಹ್ ಖಾನ್ ಎಂಬಾತ, ಈ ರೀತಿಯ ಕೃತ್ಯಕ್ಕೆ ಸೂತ್ರದಾರನಾಗಿದ್ದು, ಬೆಳಗಾವಿ, ಮೈಸೂರಿನಲ್ಲಿ ಈ ಪ್ರಕರಣಗಳ ಬಯಲಾಗಿವೆ. ಇದರ ನಡುವೆ ಬೆಳಗಾವಿಯಲ್ಲೇ ಮುಸ್ಲಿಂ ಯುವಕರಿಗೆ ಪೊಲೀಸ್ ಸಬ್‌ಇನ್ಸೆಪೆಕ್ಟರ್ ಹುದ್ದೆಗಳ ನೇಮಕಾತಿಯ ತರಬೇತಿ ನಡೆದಿದ್ದು, ಗುಮಾನಿ ಹುಟ್ಟಿಸಿದೆ. ಈ ಕೃತ್ಯಗಳಿಗೆ ಆಮ್ ಆದ್ಮಿ ಪಕ್ಷ, ಎಸ್‌ಡಿಪಿಐ ಪಕ್ಷದ ಕುಮ್ಮಕ್ಕು ಇದೆ. ಐ ಲವ್ ಮೊಹಮ್ಮದ್ ಕೃತ್ಯಕ್ಕೆ ಬೆಂಬಲಿಸುವ ಮುಸ್ಲಿಂ ಸಮಾಜ ತಾಕತ್ತಿದ್ದರೆ ತಮ್ಮ ಅಂಗಡಿ ಮುಂಗಟ್ಟುಗಳ ಮೇಲೆ ಐ ಲವ್ ಮೊಹಮ್ಮದ್ ಎಂದು ನಾಮಫಲಕ ಹಾಕಿಕೊಂಡು ವ್ಯಾಪಾರ ಮಾಡಲಿ ಎಂದು ಸವಾಲು ಹಾಕಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಜ್ಣಾನೇಶ್ವರ್, ಎಚ್.ಕೆ.ದೀನ್ ದಯಾಳ್, ಶ್ರೀನಾಗ್ ಇದ್ದರು.