ಶಿವಮೊಗ್ಗ: ಬಹು ಹಿಂದಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಅರಣ್ಯ ಭಾಗದ ರೈತರಿಗೆ ತೊಂದರೆ ನೀಡಿ ಒಕ್ಕಲೆಬ್ಬಿಸಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅರಣ್ಯ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಏರ್ಪಡಿಸಿದ್ದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಕೆಆರ್‌ಐಡಿಎಲ್, ನೀರಾವರಿ ಇಲಾಖೆಗಳ ಕುರಿತು ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಹೊಸದಾಗಿ ಒತ್ತುವರಿಗೆ ಅವಕಾಶ ಮಾಡಬಾರದು. 1978 ಏಪ್ರಿಲ್ 27ರ ಪೂರ್ವದ ಅರಣ್ಯ ಒತ್ತುವರಿವನ್ನು ಸಕ್ರಮಗೊಳಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರದ ವಿವಿಧ ಭೂ ಮಂಜೂರಾತಿ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಮಂಜೂರು ಮಾಡಲಾದ ರೈತರ ಸಾಗುವಳಿ, ವಸತಿ ಭೂಮಿಗಳನ್ನು ಅರಣ್ಯ ಭೂಮಿ ಇಂಡೀಕರಣ ಪ್ರಸ್ತಾವನೆಯಿಂದ ಕೈಬಿಡುವ ಸಂಬಂಧ ಕೈಗೊಂಡ ಕ್ರಮದ ಕುರಿತು ವರದಿಯನ್ನು ನೀಡಬೇಕು ಎಂದು ತಿಳಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಮಲೆನಾಡಿನ ಭಾಗದಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಸಂಬಂಧ ನೋಟಿಸ್ ನೀಡಲಾಗುತ್ತಿದೆ. ಕೆಲವೆಡೆ ತೊಂದರೆ ನೀಡಲಾಗುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದರು. ಸಿಸಿಎಫ್ ಹನುಮಂತಪ್ಪ ಮಾತನಾಡಿ, ಪಿಎಫ್ ಮತ್ತು ಎಂಎಫ್ ಪ್ರಕರಣಗಳು ಕಿರು ಅರಣ್ಯ ವ್ಯಾಪ್ತಿಗೆ ಬರುತ್ತವೆ. ಇವುಗಳನ್ನು ಸೆಟ್ಲ್ ಮಾಡಬಹುದು, ಈ ಸಂಬಂಧ 375 ಅಧಿಸೂಚನೆಗಳಿವೆ ಎಂದು ತಿಳಿಸಿದರು.ರಸ್ತೆ ಕಾಮಗಾರಿ ಪೂರ್ಣಗೊಳಿಸಿ :
ಸಚಿವರು ಮಾತನಾಡಿ, ಜಿಲ್ಲೆಯ ಎಲ್ಲ ರಾಜ್ಯ ಹೈವೇಗಳು, ಮುಖ್ಯ ರಸ್ತೆಗಳನ್ನು ನವೆಂಬರ್ ಅಂತ್ಯದೊಳಗೆ ಮತ್ತು ಇತರೆ ಎಲ್ಲ ರಸ್ತೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಬೇಕೆಂದು ಪಿಡಬ್ಲ್ಯುಡಿ ಅಧಿಕಾರಿಗಳಿಗೆ ತಾಕೀತು ಮಾಡಿದರು.ಮಳೆ ಮುಗಿದ ತಕ್ಷಣ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಬೇಕು. ಗುಂಡಿಗಳನ್ನು ಮುಚ್ಚುವ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಗುಂಡಿಗಳಿಂದಾಗಿ ದ್ವಿಚಕ್ರ ವಾಹನಗಳ ರಸ್ತೆ ಅಪಘಾತಗಳು ಹೆಚ್ಚುತ್ತಿದ್ದು ಸಾವು-ನೋವು ಸಂಭವಿಸುತ್ತಿದೆ. ಆದ್ದರಿಂದ ಶೀಘ್ರವಾಗಿ ಗುಂಡಿಗಳನ್ನು ಮುಚ್ಚಬೇಕು ಮತ್ತು ರಸ್ತೆಯ ಎಡ್ಜ್ ಹಾಗೂ ಮಧ್ಯಭಾಗವನ್ನು ಮಾರ್ಕಿಂಗ್ ಮಾಡಬೇಕು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವು ಮೂಡಿಸಬೇಕು. ಎನ್‌ಎಚ್ ಕಾಮಗಾರಿಗಳನ್ನು ನಿಗದಿತ ವೇಳೆಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು. ಸಮನ್ವಯದೊಂದಿಗೆ ಕೆಲಸ ಮಾಡಿ:
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಾಗರದ ಕೊಳಚೆ ಪ್ರದೇಶದಲ್ಲಿನ ಮನೆ ನಿರ್ಮಾಣ ಕಾಮಗಾರಿ ನಿಂತು 12 ವರ್ಷ ಆಯ್ತು. 150 ಮನೆಗಳ ಕೆಲಸ ಬಾಕಿ ಇದ್ದು, ಶೀಘ್ರದಲ್ಲಿ ಈ ಕಾಮಗಾರಿ ಆರಂಭಿಸಿ ಪೂರ್ಣಗೊಳಿಸಲು ಕ್ರಮ ವಹಿಸಬೇಕು ಎಂದರು.