ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ. ಹನುಮಂತಪ್ಪ
ಕನ್ನಡಪ್ರಭ ವಾರ್ತೆ, ಕಡೂರುಅ. 12 ರ ಭಾನುವಾರ ದೊಡ್ಡಪಟ್ಟಣಗೆರೆಯ ಕಟ್ಟೆ ಹೊಳೆಯಮ್ಮ ದೇವಸ್ಥಾನದ ಆವರಣದಲ್ಲಿ 7 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸರ್ವ ಸಿದ್ಧತೆ ನಡೆಸಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಸ್.ಬಿ. ಹನುಮಂತಪ್ಪ ತಿಳಿಸಿದರು.
ದೊಡ್ಡ ಪಟ್ಟಣಗೆರೆಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮೇಳನದ ಸರ್ವಾಧ್ಯಕ್ಷರಾಗಿ ತಾಲೂಕಿನ ಪಂಚೆ ಹೊಸಹಳ್ಳಿಯವರಾದ ವಿದುಷಿ ಡಾ.ಪಿ.ಎಚ್.ವಿಜಯಲಕ್ಷ್ಮಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಲಿನಿ ದಿನೇಶ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ಕಸಾಪ ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಿದ್ದಾರೆ.9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಮಲೆನಾಡು ದೇವಾಂಗ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಆರ್.ಗಿರಿಯಪ್ಪ ಉದ್ಘಾಟಿಸಲಿದ್ದಾರೆ. ನಂತರೆ ಅಜ್ಜಂಪುರ ಜಿ.ಸೂರಿ ವೇದಿಕೆಯಲ್ಲಿ ಸಮ್ಮೇಳನಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಲಿದ್ದಾರೆ. ಭುವನೇಶ್ವರಿ ಚಿತ್ರಕ್ಕೆ ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಪುಷ್ಪ ನಮನ ಸಲ್ಲಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರ ಭಾಷಣದ ಪ್ರತಿಯನ್ನು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಬಿಡುಗಡೆಗೊಳಿಸಲಿದ್ದಾರೆ.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮೊದಲ ನುಡಿ, ಸಮ್ಮೇಳನಾಧ್ಯಕ್ಷರ ಪರಿಚಯವನ್ನು ಕಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಲತಾ ರಾಜಶೇಖರ್ ಮಾಡಿಕೊಡಲಿದ್ದಾರೆ. ನಂತರ ವಿದುಷಿ ಡಾ.ಪಿ.ಎಚ್. ವಿಜಯಲಕ್ಷ್ಮಿ ಸಮ್ಮೇಳನಾಧ್ಯಕ್ಷತೆ ಭಾಷಣ ಮಾಡಲಿದ್ದಾರೆ. ಒಟ್ಟು ಮೂರು ಗೋಷ್ಠಿಗಳಿದ್ದು, ಅನ್ನದಾತರ ಅಳಲು ಮೊದಲ ಗೋಷ್ಠಿಯಲ್ಲಿ ಚಂದ್ರಶೇಖರ ನಾರಣಾಪುರ, ವರ್ತಮಾನದಲ್ಲಿ ಮಹಿಳೆ ಎಂಬ ಎರಡನೇ ಗೋಷ್ಠಿಯಲ್ಲಿ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಅಕ್ಕಂಪುರ ಎಸ್.ಶೃತಿ ಪ್ರಬಂಧ ಮಂಡಿಸಲಿದ್ದಾರೆ. ಜಾನಪದರ ಜೀವನ ಮೌಲ್ಯಗಳು ಎಂಬ ಮೂರನೇ ಗೋಷ್ಠಿಯಲ್ಲಿ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್.ಮಲ್ಲೇಶ್ ಗೌಡ ಮಾತನಾಡಲಿದ್ದಾರೆ.ಸಂಜೆ 4 ಗಂಟೆಗೆ ಬಹಿರಂಗ ಅಧಿವೇಶನ ನಡೆಯಲಿದ್ದು, ಕಸಾಪ ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್ ಅಧಿವೇಶನದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖವಾಗಿ ನಾಲಕ್ಕು ನಿರ್ಣಯ ಮಂಡಿಸಲಾಗುತ್ತದೆ. ನಂತರ ಸಮಾರೋಪ ಸಮಾರಂಭ ನಡೆಯ ಲಿದ್ದು, ಮಾಜಿ ಶಾಸಕ ವೈ.ಎಸ್.ವಿ.ದತ್ತ ಸಮಾರೋಪ ನುಡಿಗಳನ್ನಾಡಲಿದ್ದಾರೆ.ಸಮ್ಮೇಳನದಲ್ಲಿ ತಾಲೂಕಿನ ಇತಿಹಾಸ ತಜ್ಞ ಹಿರೇನಲ್ಲೂರು ಪಾಂಡುರಂಗ, ಶಾಸನ ತಜ್ಞ ಡಿ.ಇಸ್ಮಾಯಿಲ್, ಸಿಂಗಟಗೆರೆ ಸಿದ್ದಪ್ಪ ಅವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ, ಕನ್ನಡ ಸಾಹಿತ್ಯ ಸಂಘಟಕರಾದ ಬೀರೂರು ಸೀತಾಲಕ್ಷ್ಮಿ ಹಾಗೂ ವೈ.ಎಸ್. ರವಿಪ್ರಕಾಶ್ ಅವರಿಗೆ ಕನ್ನಡ ಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಇದಲ್ಲದೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ 27 ಜನ ಸಾಧಕರಿಗೆ ಕನ್ನಡ ಸಿರಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಪ್ರತಿನಿಧಿ ಶುಲ್ಕ ಇರುವುದಿಲ್ಲ. ಬೆಳಿಗ್ಗೆ ಉಪಹಾರ ವ್ಯವಸ್ಥೆ ಹಾಗೂ ಮಧ್ಯಾನ್ಹ ಭೋಜನ, ಸಂಜೆ ಲಘು ಉಪಹಾರ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಮತ್ತು ಊಟದ ವ್ಯವಸ್ಥೆ ಪೂರ್ಣ ಜವಾಬ್ದಾರಿಯನ್ನು ಕಟ್ಟೆಹೊಳೆಯಮ್ಮ ಜಾತ್ರಾ ಮಹೋತ್ಸವ ಸಮಿತಿ ವಹಿಸಿಕೊಂಡಿದೆ. ಒಟ್ಟಾರೆ ಸಮ್ಮೇಳನದ ಯಶಸ್ಸಿಗಾಗಿ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ತಾಲೂಕು ಅಧ್ಯಕ್ಷ ಚಿಕ್ಕನಲ್ಲೂರು ಪರಮೇಶ್, ಕೋಶಾಧ್ಯಕ್ಷ ಎಚ್.ಕೆ. ಮಂಜು ನಾಥ್, ರವಿಚಂದ್ರ,ಕೆ.ಜಿ.ವಸಂತ ಕುಮಾರ್, ಓಂಕಾರ ಮೂರ್ತಿ, ಕುರುಬಗೆರೆ ಲೋಕೇಶ್, ಶಾಮಿಯಾನ ರಘು, ಕಾರ್ಯದರ್ಶಿ ಮಹೇಶ್ ಇತರರು ಇದ್ದರು.11 ಕೆಡಿಆರ್ 1ಕಡೂರು ಸಮೀಪದ ದೊಡ್ಡಪಟ್ಟಣಗೆರೆಯಲ್ಲಿ 7 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕಸಾಪ ಮುಖಂಡರುಗಳು ವೇದಿಕೆ ಸಿದ್ಧ ಪಡಿಸಿರುವುದು.