ಕ್ವೀನ್ಸ್‌ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಆಯೋಜಿಸಿದ್ದ ರೈತರ ಆತ್ಮಹತ್ಯೆಗಳ ತಡೆ ಸಮಿತಿಯ ಪೂರ್ವಭಾವಿ ಸಭೆಯನ್ನು ಸುಪ್ರೀಂ ಕೋರ್ಟ್‌ ಕೃಷಿ ಸುಧಾರಣಾ ಸಮಿತಿಯ ಅಧ್ಯಕ್ಷ ದೇವೇಂದ್ರ ಶರ್ಮಾ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೇಶದ ರೈತರು ಕಳೆದ 25 ವರ್ಷದಲ್ಲಿ 111 ಲಕ್ಷ ಕೋಟಿ ರು. ನಷ್ಟ ಅನುಭವಿಸಿದ್ದಾರೆ. ಆದರೆ ಈ ಬಗ್ಗೆ ಎಲ್ಲೂ ಚರ್ಚೆಯೇ ನಡೆಯುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ಕೃಷಿ ಸುಧಾರಣಾ ಸಮಿತಿಯ ಅಧ್ಯಕ್ಷ ದೇವೇಂದ್ರ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

ರೈತರ ಆತ್ಮಹತ್ಯೆಗಳ ತಡೆ ಸಮಿತಿಯು ಕ್ವೀನ್ಸ್‌ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ವರದಿಯೊಂದರ ಪ್ರಕಾರ, 2000 ದಿಂದ 2025 ರವರೆಗೂ ಕಳೆದ 25 ವರ್ಷದಲ್ಲಿ ದೇಶದ ರೈತರು ಕೃಷಿಯಿಂದಾಗಿ 111 ಲಕ್ಷ ಕೋಟಿ ರು. ನಷ್ಟ ಅನಿಭವಿಸಿದ್ದಾರೆ. ಆದರೆ ಸಂಸತ್‌ನಲ್ಲಿ, ರಾಜ್ಯಗಳ ವಿಧಾನ ಮಂಡಲಗಳಲ್ಲಿ, ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ, ಆರ್ಥಿಕ ಸಂಸ್ಥೆಗಳಲ್ಲಿ, ಅಷ್ಟೇ ಏಕೆ ಮಾಧ್ಯಮದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಇದಕ್ಕೆ ಏನನ್ನಬೇಕು ಎಂದು ಪ್ರಶ್ನಿಸಿದರು.

ರೈತರ ನಷ್ಟ ಭರ್ತಿ ಇಲ್ಲ:

ಕೃಷಿಯೇ ಪ್ರಧಾನವಾಗಿರುವ ದೇಶಗಳಾದ ಅರ್ಜೆಂಟೀನಾ, ವಿಯೆಟ್ನಾಂ, ಭಾರತದಲ್ಲಿ ಅತಿವೃಷ್ಟಿ-ಅನಾವೃಷ್ಟಿಯಿಂದಾಗಿ ಅನ್ನದಾತರು ಅಧಿಕ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಅರ್ಜೆಂಟೀನಾ ಮತ್ತು ವಿಯೆಟ್ನಾಂನಲ್ಲಿ ಅಲ್ಲಿನ ಸರ್ಕಾರಗಳು ಬಜೆಟ್‌ ಮೂಲಕ ರೈತರ ನಷ್ಟವನ್ನು ತುಂಬಿಕೊಡುತ್ತವೆ. ಆದರೆ ಭಾರತದಲ್ಲಿ ಇದು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಆರ್‌.ಪಾಟೀಲ್‌ ಮಾತನಾಡಿ, ರೈತರು ಸಾಲ ಮಾಡಿ ಅದ್ದೂರಿಯಾಗಿ ಮಕ್ಕಳ ವಿವಾಹ ಮಾಡುವುದು ಸರಿಯಲ್ಲ. ಮದ್ಯ ವ್ಯಸನದಿಂದಲೂ ರೈತರು ಸಾಲ ಮಾಡಿ ಮೃತಪಡುತ್ತಿದ್ದಾರೆ ಎಂಬುದನ್ನು ಹಗುರವಾಗಿ ನೋಡಬಾರದು. ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ ವಾರ್ಷಿಕ 46 ಸಾವಿರ ಕೋಟಿ ರು. ರಾಜಸ್ವ ಸಂಗ್ರಹವಾಗುತ್ತದೆ ಎಂದು ಬದುಕನ್ನು ಬಲಿ ತೆಗೆದುಕೊಳ್ಳುವುದು ಸರಿಯಲ್ಲ. ರೈತರ ಆತ್ಮಹತ್ಯೆ ತಡೆಯಲು ಬೆಂಬಲ ಬೆಲೆ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್‌.ಹನುಮಂತಯ್ಯ, ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ.ಅಶೋಕ್‌ ದಳವಾಯಿ, ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷ ಡಾ.ಎ.ಬಿ.ಪಾಟೀಲ್, ರೈತ ಮುಖಂಡ ಕೆ.ಟಿ.ಗಂಗಾಧರ್‌ ಮತ್ತಿತರರು ಉಪಸ್ಥಿತರಿದ್ದರು.

ಆತ್ಮಹತ್ಯೆ ತಡೆಗೆ ಸಲಹೆ

ರೈತರ ಆತ್ಮಹತ್ಯೆ ತಡೆಯವುದಕ್ಕೆ ಸಂಬಂಧಿಸಿದಂತೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಸುಧೀರ್ಘವಾಗಿ ಚರ್ಚೆ ನಡೆಸಿ ಹಲವು ಶಿಫಾರಸುಗಳನ್ನು ಪ್ರಸ್ತುತಪಡಿಸಲಾಯಿತು. ರೈತರು ಸಾಲ ಪಡೆಯಲು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಸಿಬಿಲ್ ಸ್ಕೋರ್ ಪರಿಗಣಿಸಬಾರದು, ವರ್ಷದ 12 ತಿಂಗಳೂ ಖರೀದಿ ಕೇಂದ್ರಗಳನ್ನು ತೆರೆದಿರಬೇಕು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ತಡೆಯಲು ಋಣ ಮುಕ್ತ ಕಾಯ್ದೆ ಜಾರಿಗೆ ತರುವುದು ಸೇರಿದಂತೆ ಹಲವು ಸಲಹೆ ಕೇಳಿಬಂದವು.