ಕಗ್ಗಲಿಪುರದಲ್ಲಿ ಕಾವೇರಿ 5ನೇ ಹಂತದ ಪೈಪ್‌ಲೈನ್‌ ಕಾಮಗಾರಿ ವೇಳೆ ಸ್ಕೌರ್ ವಾಲ್ವ್ ಚೇಂಬರ್‌ಗೆ ಬಿದ್ದು 9ನೇ ತರಗತಿ ವಿದ್ಯಾರ್ಥಿ ಪ್ರೀತಂ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿ ತನಿಖೆಗೆ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಗ್ಗಲಿಪುರದಲ್ಲಿ ಕಾವೇರಿ 5ನೇ ಹಂತದ ಪೈಪ್‌ಲೈನ್‌ ಕಾಮಗಾರಿ ವೇಳೆ ಸ್ಕೌರ್ ವಾಲ್ವ್ ಚೇಂಬರ್‌ಗೆ ಬಿದ್ದು 9ನೇ ತರಗತಿ ವಿದ್ಯಾರ್ಥಿ ಪ್ರೀತಂ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿ ತನಿಖೆಗೆ ಆದೇಶಿಸಿದೆ.

ಮೂವರು ಹಿರಿಯ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಫೆ.5ರ ಒಳಗಾಗಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ತನಿಖಾ ತಂಡದಲ್ಲಿ ಪ್ರಧಾನ ಮುಖ್ಯ ಅಭಿಯಂತರ ಬಿ.ಎಸ್. ದಲಾಯತ್, ಕಾವೇರಿ ನೀರು ವಿಭಾಗದ ಮುಖ್ಯ ಅಭಿಯಂತರ ಎ. ರಾಜಶೇಖರ್ ಹಾಗೂ ಕಾರ್ಯಪಾಲನಾ ವಿಭಾಗದ ಮುಖ್ಯ ಅಭಿಯಂತರ ಮಹೇಶ್ ಕೆ.ಎನ್ ಅವರನ್ನೊಳಗೊಂಡ ತಂಡ ರಚಿಸಲಾಗಿದೆ.

ತನಿಖಾ ತಂಡ ಸ್ಥಳಕ್ಕೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ. ಜಲಮಂಡಳಿಯ ಕಡೆಯಿಂದ ಯಾವುದಾದರೂ ಸುರಕ್ಷತಾ ಲೋಪಗಳಿವೆಯೇ ಎಂಬುದನ್ನು ಪತ್ತೆ ಹಚ್ಚಲಾಗುತ್ತದೆ. ವರದಿ ಬಂದ ನಂತರ ಘಟನೆಗೆ ಯಾರು ಜವಾಬ್ದಾರರು ಎಂಬುದು ಸ್ಪಷ್ಟವಾಗಲಿದೆ. ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿಯ ನಿರ್ಲಕ್ಷ್ಯ ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

ಜ.28ರಂದು ಮನೆಯಿಂದ ಹೊರಗೆ ಹೋಗಿದ್ದ ಪ್ರೀತಂ ವಾಪಸ್ ಮನೆಗೆ ಮರಳಿರಲಿಲ್ಲ. ಈ ಸಂಬಂಧ ಎಲ್ಲೆಡೆ ಹುಡುಕಾಟ ನಡೆಸಿದ್ದ ಪಾಲಕರು, ಅಂತಿಮವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೂರು ದಿನಗಳ ಬಳಿಕ ಜಲಮಂಡಳಿ ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ವಾಸನೆ ಬರುತ್ತಿದ್ದ ಕಾರಣ ಸ್ಥಳೀಯರು ಪರಿಶೀಲಿಸಿದಾಗ ಶ‍ವ ಪತ್ತೆಯಾಗಿತ್ತು. ಬಾಲಕ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಮುಚ್ಚಳ ಇಲ್ಲದ ಚೆಂಬರ್‌ಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಜಲಮಂಡಳಿಯ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದ್ದಾನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಮೃತ ಬಾಲಕನ ಪಾಲಕರು ಆಗ್ರಹಿಸಿದ್ದಾರೆ.