ಪ್ರಧಾನಿ ಮೋದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಘಟಕದಿಂದ ಪ್ರತಿಭಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಪ್ರಕರಣದ ವಿಚಾರಕ್ಕೆ ಸಂಬಂಧಿಸಿದ ಕಡತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಉಲ್ಲೇಖವಾಗಿರುವುದರಿಂದ ನೈತಿಕ ಹೊಣೆಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ ನೇತೃತ್ವದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾರಿ ಪ್ರತಿಭಟನೆ ಘಟಕದಿಂದ ಪ್ರತಿಭಟನೆ ನಡೆಯಿತು.ಸೋಮವಾರ ನೂರಾರು ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ದೇಶದ ಘನತೆಗೆ ಈ ಘಟನೆ ಧಕ್ಕೆ ತಂದಿದ್ದು, ಮೋದಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.
ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಮಾತನಾಡಿ, ಜೆಫ್ರಿ ಎಪ್‌ಸ್ಟೀನ್ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಹೆಸರಿನ ಉಲ್ಲೇಖ ಇರುವುದು ದೇಶದ ಪ್ರಜಾಪ್ರಭುತ್ವ, ನೈತಿಕತೆ ಮತ್ತು ಪಾರದರ್ಶಕತೆಯ ಕುರಿತು ಗಂಭೀರ ಪ್ರಶ್ನೆ ಏಳುವಂತೆ ಮಾಡಿದೆ. ಈ ಕುರಿತು ಕೇಂದ್ರ ಸರ್ಕಾರದಿಂದ ಸಮಂಜಸ ಸ್ಪಷ್ಟನೆ ನೀಡದಿರುವುದು ಕೂಡ ಅನುಮಾನ ಹೆಚ್ಚಿಸುತ್ತಿದೆ ಎಂದರು.ಅಮೆರಿಕದ ನ್ಯಾಯ ಇಲಾಖೆ ಬಿಡುಗಡೆ ಮಾಡಿರುವ ಹೊಸ ತನಿಖಾ ಕಡತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಭೇಟಿ ನೀಡಿರುವ ವಿಚಾರದಲ್ಲಿ ಕೆಲ ಅಂಶಗಳಿವೆ. ಇದು ಕೇವಲ ರಾಜಕೀಯ ವಿಚಾರವಲ್ಲ, ರಾಷ್ಟ್ರೀಯ ಘನತೆಯ ವಿಷಯವಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆ ವೇಳೆ ರಸ್ತೆಗಿಳಿಯಲು ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.