ಶಿವಮೊಗ್ಗ: ವಿಶೇಷ ಚೇತನ ಮಕ್ಕಳು ಮತ್ತು ಕ್ಯಾನ್ಸರ್ ಬಾಧಿತ ಮಕ್ಕಳ ಆರೈಕೆ ಹಾಗೂ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಗಳನ್ನು ತೆರೆಯಬೇಕು ಎಂಬುದು ನನ್ನ ಕನಸು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇದು ಜಾರಿಯಾಗಲಿದೆ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಿಂದ ಶನಿವಾರ ಹಮ್ಮಿಕೊಂಡಿದ್ದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅನೇಕ ಸವಾಲು ಹಾಗೂ ನಾನಾ ಸಮಸ್ಯೆಗಳಿರುವ ಶಿಕ್ಷಣ ಇಲಾಖೆ ಜವಾಬ್ದಾರಿಯನ್ನು ಹೊತ್ತು ಸಾಗುವುದು ಅಷ್ಟು ಸುಲಭದ ಕೆಲಸವಲ್ಲ. ಕಳೆದು ಎರಡೂವರೆ ವರ್ಷದಲ್ಲಿ ಈ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿ, ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡಿದ್ದೇನೆ. ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯನ್ನು ತರಲಾಗಿದೆ. ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ ಸವಿನೆನಪಿಗಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಇವೆರಡು ಮಾದರಿ ಶಾಲೆಗಳನ್ನು ಆರಂಭಿಸುತ್ತೇನೆ ಎಂದರು.
ತೀರ್ಥಹಳ್ಳಿಯಲ್ಲಿ ಶಾಲೆಯೊಂದರಲ್ಲಿ ವಿಶೇಷ ಚೇತನರಿಗೆ ವಿಶೇಷ ಆರೈಕೆ ನೀಡಲಾಗುತ್ತಿದೆ. ಅಲ್ಲಿಗೆ ಹೋದಾಗ ನನಗೆ ಕಣ್ಣೀರು ಬಂತು. ಶಿಕ್ಷಕ ಕುಮಾರ್ ಅವರು ತಮ್ಮ ಜೀವನವನ್ನೇ ಆ ಮಕ್ಕಳಿಗಾಗಿ ಮೀಸಲಿಟ್ಟಿದ್ದಾರೆ. ಇಂತಹ ಮಕ್ಕಳ ಆರೈಕೆಗಾಗಿ ಅಲ್ಲಿ ವಸತಿ ಶಾಲೆ ತೆರೆಯುವ ಉದ್ದೇಶವಿದೆ. ಡಿಡಿಪಿಐ ಅವರು ಈಗಾಗಲೇ ಜಾಗ ಗುರುತಿಸಿದ್ದಾರೆ ಎಂದು ತಿಳಿಸಿದರು.ಇನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಶಾಲೆ ತೆರೆಯುವ ಉದ್ದೇಶ ಇದೆ. ಕ್ಯಾನ್ಸರ್ ಗುಣ ಮಾಡಬಹುದಾದ ಕಾಯಿಲೆ. ನಟ ಶಿವರಾಜ ಕುಮಾರ್ ಸೇರಿ ಹಲವರು ಇದಕ್ಕೆ ಉದಾಹರಣೆ. ಇಂತಹ ಮಕ್ಕಳಿಗೆ ಒಂದರಿಂದ ಹತ್ತನೆ ತರಗತಿವರೆಗೆ ವಸತಿ ಶಾಲೆ ನಿರ್ಮಿಸಲಾಗುತ್ತದೆ. ಇದಕ್ಕಾಗಿ ಸರ್ಕಾರೇತರ ಸಂಸ್ಥೆ ಮುಂದೆ ಬಂದಿದೆ. ಕಿದ್ವಾಯಿ ಬಳಿ ಶಾಲೆ ಆರಂಭಿಸಲಾಗುತ್ತದೆ. ಉದ್ಯಮಿಗಳಾದ ಅಜೀಂ ಪ್ರೇಮ್‌ಜೀ, ಇನ್ಫೋಸಿಸ್ ನಾರಾಯಣಮೂರ್ತಿ ಮತ್ತು ಸುಧಾಮೂರ್ತಿ ದಂಪತಿ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಅಲ್ಲಿ ಆ ಮಕ್ಕಳಿಗೆ ಚಿಕಿತ್ಸೆ ಮತ್ತು ಶಿಕ್ಷಣ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಖಾಸಗಿ ಸಹಭಾಗಿತ್ವ:ಸರ್ಕಾರಿ ಶಾಲೆಗಳಿಗೆ ಖಾಸಗಿ ಸಂಸ್ಥೆಗಳಿಗೆ ನೆರವು ಪಡೆಯಲಾಗುತ್ತಿದೆ. ಅಜೀಂ ಪ್ರೇಮ್ ಜಿ ಅವರ ಸಂಸ್ಥೆ ಈಗಾಗಲೇ ನೆರವು ನೀಡಿದೆ. ಇನ್ಫೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರೊಂದಿಗೆ ಒಂದು ಸಭೆ ನಡೆಸಿದ್ದು, ನೆರವು ಕೋರಲಾಗಿದೆ. ರಾಜ್ಯದಾದ್ಯಂತ ಹಿರಿಯ ವಿದ್ಯಾರ್ಥಿಗಳ ನೆರವು ಪಡೆಯುವ ಕೆಲಸ ನಡೆಯುತ್ತಿದೆ. ಇದಕ್ಕೆ ಸಾರ್ವಜನಿಕ ಸ್ಪಂದನೆ ಚೆನ್ನಾಗಿದೆ. ಸರ್ಕಾರಿ ಶಾಲೆಗಳು ದೇವಸ್ಥಾನವಿದ್ದಂತೆ ಅಲ್ಲಿ ಕಲಿಯುವ ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಪೂರಕ ಪರೀಕ್ಷೆ:ಬಡವರ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸಬಾರದೆಂಬ ಕಾರಣಕ್ಕೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯ ಪಬ್ಲಿಕ್ ಪರೀಕ್ಷೆಗಳನ್ನು ಮೂರು ಹಂತದಲ್ಲಿ ನಡೆಸಿದ್ದೇವೆ. ಆರಂಭದಲ್ಲಿ ಕೆಲವರು ಟೀಕೆ ಮಾಡಿದ್ದರು. ಆದರೆ ಇದರಿಂದ ಬಡವರ, ಕೂಲಿ ಕಾರ್ಮಿಕರ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಅನುಕೂಲವಾಯಿತು. ಸರ್ಕಾರಿ ಕಾಲೇಜುಗಳಲ್ಲಿ ಸಿಇಟಿ ತರಬೇತಿ ನೀಡುವಂತಹ ಕ್ರಾಂತಿಕಾರಿ ನಿರ್ಣಯ ಕೈಗೊಂಡು ಬಡವರ ಮಕ್ಕಳು ತಾಂತ್ರಿಕ ಶಿಕ್ಷಣ ಪಡೆಯಲು ನೆರವಾದೆವು. ಹತ್ತನೇ ತರಗತಿಯ ಪೂರಕ ಪರೀಕ್ಷಾ ಶುಲ್ಕವನ್ನೇ ಪಡೆಯದೆ ಅನುಕೂಲ ಮಾಡಿಕೊಡಲಾಯಿತು ಎಂದು ತಿಳಿಸಿದರು.
ಸಂವಾದದಲ್ಲಿ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ್ ನೇರಿಗೆ, ಹೊನ್ನಾಳಿ ಚಂದ್ರಶೇಖರ್ ಇದ್ದರು.ಶಿಕ್ಷಣ ಸಚಿವನಾಗಿ ಮಾಡಿದ
ಕಾರ್ಯದ ಬಗ್ಗೆ ನನಗೆ ತೃಪ್ತಿ ಇದೆ
ನಮ್ಮ ಸರ್ಕಾರ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನನಗೆ ದೊಡ್ಡ ಖಾತೆಯನ್ನು ವಹಿಸಿದ್ದರು. ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವ ನಾನು ಇಲಾಖೆಯಲ್ಲಿ ಯಾವುದೇ ವಿವಾದಗಳಿಲ್ಲದೆ, ಸಮರ್ಥವಾಗಿ ನಿಭಾಯಿಸಿದ್ದೇನೆ. ಹಿಂದಿನ ಸರಕಾರ ಮಾಡಿದ್ದ ತಪ್ಪುಗಳನ್ನು ಸರಿಪಡಿಸುವುದರೊಂದಿಗೆ ಮಕ್ಕಳ ಮನಸ್ಸಿನಲ್ಲಿ ಬರೀ ಶಿಕ್ಷಣದ ವಿಚಾರಗಳನ್ನು ಮಾತ್ರ ತುಂಬುವ ಕೆಲಸ ಮಾಡಿದ್ದೇನೆ. ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದೆಂದು ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ತಂದಿದ್ದೇನೆ. ಕಳೆದು ಎರಡೂವರೆ ವರ್ಷದಲ್ಲಿ ಸಮರ್ಥವಾಗಿ ನಿಭಾಯಿಸಿ, ವಿದ್ಯಾರ್ಥಿಗಳ ಪರವಾಗಿ ಕೆಲಸ ಮಾಡಿದ್ದೇನೆ. ಈ ಬಗ್ಗೆ ನನಗೆ ತೃಪ್ತಿ ಇದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.ಖಾಸಗಿ ಕನ್ನಡ ಮಾಧ್ಯಮಶಾಲೆಗಳಿಗೆ ಅನುದಾನಿತ ಸೌಲಭ್ಯ?ಶಿವಮೊಗ್ಗ: ಖಾಸಗಿಯಾಗಿ ಆರಂಭಗೊಂಡಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಿತ ಶಾಲೆಗಳನ್ನಾಗಿ ಪರಿವರ್ತಿಸಬೇಕು ಎನ್ನುವ ಬೇಡಿಕೆಯನ್ನು ಸಿಎಂ ಬಳಿ ಇಟ್ಟಿದ್ದು, ಇದಕ್ಕೆ ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಇದನ್ನು ಜಾರಿಗೊಳಿಸುವ ಸಾಧ್ಯತೆಯಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ಹಿಂದೆ 1995 ರವರೆಗೆ ಮಾತ್ರ ಅನುದಾನಿತ ಸೌಲಭ್ಯ ನೀಡಿದ್ದು, ಆ ಬಳಿಕ ಯಾವುದೇ ಶಾಲೆಗಳಿಗೆ ಈ ಸೌಲಭ್ಯ ನೀಡಿಲ್ಲ. 1996ರಿಂದ 2005ರವರೆಗಿನ ಅವಧಿಯಲ್ಲಿ ಪ್ರಾರಂಭಗೊಂಡಿರುವ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಅನುದಾನಿತ ಶಾಲೆಗಳನ್ನಾಗಿ ಮಾಡಿ ಆ ಶಾಲೆಯ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ಹೊರಬೇಕಿದೆ. ಇದಕ್ಕೆ ಸುಮಾರು 800 ಕೋಟಿಗೂ ಅಧಿಕ ಹಣ ಬೇಕಾಬಹುದು. ಈ ನಿಟ್ಟಿನಲ್ಲಿ ಸಿಎಂ ಜೊತೆ ಚರ್ಚೆ ನಡೆಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಇದಕ್ಕೆ ಪೂರಕವಾಗಿ ಸ್ಪಂದಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಸಮಸ್ಯೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ನಾನಾ ಕಾರಣಗಳಿವೆ. ಆದರೆ, ಮುಂದೆ ಈ ರೀತಿ ಸಮಸ್ಯೆ ಉಲ್ಬಣಗೊಳ್ಳಬಾರದು ಎಂಬ ಕಾರಣಕ್ಕೆ ಸರ್ಕಾರಿ ಶಾಲೆಯಲ್ಲೇ ಎಲ್ಕೆಜಿ, ಯುಕೆಜಿಯನ್ನು ಆರಂಭಿಸಲಾಗಿದೆ. ಸದ್ಯ ಈ ವರ್ಷ ರಾಜ್ಯದಲ್ಲಿ 5 ಸಾವಿರ ಶಾಲೆಗಳಲ್ಲಿ ಮಾತ್ರ ಪ್ರಾರಂಭಿಸಲಾಗಿದೆ. ಮುಂದಿನ ವರ್ಷ ಇನ್ನೂ 10 ಸಾವಿರ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭ ಮಾಡಲಾಗುತ್ತಿದೆ. ಹೀಗೆ ಹಂತ ಹಂತವಾಗಿ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಎಲ್ಕೆಜಿ, ಯುಕೆಜಿ ಆರಂಭಿಸಲಾಗುವುದು. ಇದರಿಂದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.
ಮಧು ಬಂಗಾರಪ್ಪ ವಿದಾಯ ಭಾಷಣ?ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿಯೇ ಮುಂದುವರೆಯುತ್ತಾರೆಯೇ ಎಂಬ ಪ್ರಶ್ನೆ ಪತ್ರಿಕಾಗೋಷ್ಠಿಯಲ್ಲಿ ಎದುರಾದರೂ ಅದಕ್ಕೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ. ಆದರೆ ಇಡೀ ಪತ್ರಿಕಾಗೋಷ್ಠಿಯ ಉದ್ದಕ್ಕೂ ತಮಗೆ ಅವಕಾಶ ನೀಡಿದ ಪಕ್ಷ, ಹೈಕಮಾಂಡ್, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರುಗಳಿಗೆ ಕೃತಜ್ಞತೆ ಸಲ್ಲಿಸಿದರು.ಈ ಇಲಾಖೆಯಲ್ಲಿ ತೃಪ್ತಿಕರವಾಗಿ ಕೆಲಸ ಮಾಡಿದ್ದು, ಮುಂದಿನ ದಿನಗಳಲ್ಲಿ ನನ್ನನ್ನು ನೆನಪಿಸಿಕೊಳ್ಳಬೇಕು. ನನಗೆ ಸಚಿವ ಸ್ಥಾನ ನೀಡುವ ಮುನ್ನ ನನ್ನ ಸಾಮರ್ಥ್ಯವನ್ನು ಗುರುತಿಸಿಯೇ ನೀಡಿದ್ದಾರೆ. ಹಿಡಿದ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬೇರೆ ಬೇರೆ ಸಂದರ್ಭದಲ್ಲಿ ಹೈಕಮಾಂಡ್ ಗಮನಿಸಿ ನನಗೆ ಈ ಅವಕಾಶ ನೀಡಿದ್ದಾರೆ ಎಂದರು.ಮಾತಿನುದ್ದಕ್ಕೂ ಮಾಧ್ಯಮದವರು ಸೇರಿ ನನಗೆ ಉತ್ತಮ ರೀತಿಯಲ್ಲಿ ನೆರವು ನೀಡಿದವರಿಗೆ ಕೃತಜ್ಞತೆ ಎಂದರಲ್ಲದೆ, ಚುನಾವಣೆಯಲ್ಲಿ ನನ್ನ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಿ ಗೆದ್ದು ಸಚಿವರಾಗುತ್ತೀರಿ ಎಂದು ಹಾರೈಸಿದ್ದೀರಿ. ಈಗ ಸಚಿವನಾಗಿ ನಿಮ್ಮೆದುರು ಪುನಃ ಸಂವಾದ ನಡೆಸಿದ್ದೇನೆ. ಮುಂದೆಯೂ ನನ್ನನ್ನು ಮರೆಯದೆ ಕರೆಯಿರಿ ಎಂದರು.ಪಕ್ಷ ನನ್ನ ತಾಯಿಯಿದ್ದಂತೆ. ಅದು ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುವವನು ನಾನು. ನೀವು ಮಾಧ್ಯಮದವರು ಬರೆದ ರೀತಿ ಆಗುವುದಿಲ್ಲ. ಆ ಅಧಿಕಾರ ನಿಮಗಿಲ್ಲ. ಸಚಿವ ಸ್ಥಾನ ನೀಡುವ ಅಧಿಕಾರ ಇರುವುದು ನಮ್ಮ ಪಕ್ಷದ ಹೈಕಮಾಂಡ್ ಗೆ ಮಾತ್ರ ಎಂದು ಪರೋಕ್ಷವಾಗಿ ಪರಿಸ್ಥಿತಿಯನ್ನು ಬಿಚ್ಚಿಟ್ಟರು.