ಬಾಗಲಕೋಟೆ : ನಂದಗೋಕುಲ ನೆನಪಿಸಿದ ವೇಣು ವಾದನ, ಪಹಾಡಿಧುನ್ ಗೆ ಮನಸೋತ ಶ್ರೋತೃಗಳು, ಚಾರುಕೇಶಿ ರಾಗದ ಸ್ವರಗಳಿಂದ ಮಂತ್ರ ಮುಗ್ಧಗೊಳಿಸಿದ ಸಿತಾರ್, ಜಗದೀಶ ಪುತ್ತೂರ ಅವರ ಭಕ್ತಿ ಸಂಗೀತಕ್ಕೆ ಚಪ್ಪಾಳೆಯ ಸುರಿಮಳೆ. ಇದು ನಗರದ ನವನಗರ ಕಲಾ ಭವನದಲ್ಲಿ ಲಿಂಗರಾಜ ವಾಲಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ದಾಸರ ಶರಣರ ದಿವ್ಯ ಸಂಗಮ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಕಂಡ ದೃಶ್ಯಗಳಿವು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಂದಗೋಕುಲ ನೆನಪಿಸಿದ ವೇಣು ವಾದನ, ಪಹಾಡಿಧುನ್ಗೆ ಮನಸೋತ ಶ್ರೋತೃಗಳು, ಚಾರುಕೇಶಿ ರಾಗದ ಸ್ವರಗಳಿಂದ ಮಂತ್ರ ಮುಗ್ಧಗೊಳಿಸಿದ ಸಿತಾರ್, ಜಗದೀಶ ಪುತ್ತೂರ ಅವರ ಭಕ್ತಿ ಸಂಗೀತಕ್ಕೆ ಚಪ್ಪಾಳೆಯ ಸುರಿಮಳೆ.

ನಗರದ ನವನಗರ ಕಲಾ ಭವನದಲ್ಲಿ ಲಿಂಗರಾಜ ವಾಲಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ ದಾಸರ ಶರಣರ ದಿವ್ಯ ಸಂಗಮ ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಭಾನುವಾರ ಸಂಜೆ ಕಂಡ ದೃಶ್ಯಗಳಿವು.

ದಿ.ಅಂದಾನೆಪ್ಪ ವಾಲಿ ಅವರ ಜನ್ಮ ಶತಮಾನೋತ್ಸವ ನಿಮಿತ್ತ ಹಮ್ಮಿಕೊಂಡ ಭಕ್ತಿ ಸಂಗೀತ ಸುಧೆ ಎರಡನೇ ದಿನವೂ ಜನಮನ ಸೂರೆಗೊಂಡಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅನಘಾ ಪಾಟೀಲ, ಭಾರತ ಹುಣ್ಣಿಮೆ ಪರ್ವಕಾಲದಲ್ಲಿ ಯಲ್ಲಮ್ಮ ದೇವಿಯ ಗೀತೆಗೆ ಧ್ವನಿ ನೀಡುತ್ತಿದ್ದಂತೆ ಎಲ್ಲೆಡೆ ಭಕ್ತಿಯ ಕಂಪು ಸೂಸಿತು.

ಅಭಂಗ ವಾಣಿ, ಅಕ್ಕಮಹಾದೇವಿ ವಚನ, ದಾಸರ ಪದಗಳಿಂದ ರಂಜಿಸಿದರು. ನಂತರ ನಿವೃತ್ತ ಉಪನ್ಯಾಸಕ ಪಂಡಿತ್‌ ಸಿದ್ದರಾಮಯ್ಯ ಮಠಪತಿ ಭೂಪರಾಗದ ಆಲಾಪಗಳಿಂದ ಶ್ರೋತೃಗಳಿಗೆ ಸ್ವರಗಳ ಹೊಸ ಲೋಕ ಪರಿಚಯಿಸಿದರು.

ಪಂಡಿತ್ ಶಿವಲಿಂಗ ರಾಜಾಪೂರ ಅವರ ವೇಣು ವಾದನ ಹಾಗೂ ಪಂಡಿತ್ ಅಂಕುಶ್ ನಾಯಕ ಅವರ ಸಿತಾರ್ ಜುಗಲ್‌ಬಂದಿ, ಚಪ್ಪಾಳೆಯ ಸುರಿಮಳೆಗೆ ಸಾಕ್ಷಿಯಾಯಿತು.

ಒಂದು ಗಂಟೆಗೂ ಹೆಚ್ಚು ಕಾಲ ಜಗದೀಶ ಪುತ್ತೂರ ಹಾಗೂ ತಂಡದವರಿಂದ ನಡೆದ ದಾಸವಾಣಿ ದಾಸರ ಶರಣರ ದಿವ್ಯ ಸಂಗಮಕ್ಕೆ ವೈಭವದ ತೆರೆ ಎಳೆಯಿತು. ಕಲಾವಿದ ಕೆಂಚಪ್ಪ ಬಡಿಗೇರ ವೇದಿಕೆ ಮೇಲೆ ಅದ್ಭುತ ಚಿತ್ರಕಲೆ ಪ್ರದರ್ಶಿಸಿದರು.

ಮಾಜಿ ಸಚಿವ ಅಜಯಕುಮಾರ್ ಸರನಾಯಕ, ಬಸವರಾಜ ಬದಾಮಿ, ಡಾ.ಶೇಖರ ಮಾನೆ, ಡಾ.ವೈಶಾಲಿ ಮಾನೆ, ಡಾ.ಪ್ರಮೋದ ಮಿರ್ಜಿ, ಪ್ರಕಾಶ ತಪಶೆಟ್ಟಿ, ನಾಗರಾಜ ಹದ್ಲಿ, ಕಳಕಪ್ಪ ಬಾದವಾಡಗಿ, ಬಸಲಿಂಗಪ್ಪ ನಾವಲಗಿ, ನಾರಾಯಣದೇಸಾಯಿ, ಚಂದ್ರಕಾಂತ ಅದರಿ, ಟಿ.ಪಿ. ಪಾಟೀಲ, ಪ್ರವೀಣ ಬೋಗಾರ, ಪರಿಮಳಾ ಮನಗೂಳಿ, ಉದ್ಯಮಿ ಪವನ್ ಸೀಮಿಕೇರಿ, ಲೀಲಾವತಿ ಅರೆಬೆಂಚಿ, ಚೆನ್ನಮ್ಮ ಕೋಲಾರ, ಕಿರಣ ಕುಲಕರ್ಣಿ, ಪ್ರವೀಣ ಮಂಕಣಿ, ವೆಂಕಟೇಶ ಕುಲಕರ್ಣಿ, ಕೃಷ್ಣ ದೇಸಾಯಿ, ಶಿವರಾಜ ವಟಗಲ್, ಶ್ರೇಯಾ ಜಡಿಮಠ, ರೇಣುಕಾ ಪಾಟೀಲ ಹಾಗೂ ಕಾರ್ತಿಕ್ ಅಗ್ರೋ ಇಂಡಸ್ಟ್ರೀಸ್ ಹಾಗೂ ಎಲ್.ಎ. ವಾಲಿ ಆ್ಯಂಡ್ ಕಂಪನಿ ಸಿಬ್ಬಂದಿ ಉಪಸ್ಥಿತರಿದ್ದರು. ರಾಜೇಶ್ವರಿ ದೇಶಪಾಂಡೆ ನಿರೂಪಿಸಿದರು.

ನಮ್ಮ ಫೌಂಡೇಶನ್ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಬಾಗಲಕೋಟೆ ಸಂಗೀತ ಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದು ಕೋಟೆ ನಾಡಿನ ಕಲಾ ಶ್ರೀಮಂತಿಕೆಗೆ ನಮ್ಮ ಸಂಸ್ಥೆಯ ಅಳಿಲು ಸೇವೆ. ಮುಂದಿನ ದಿನಗಳಲ್ಲಿ ಸಂಸ್ಥೆಯಿಂದ ಇನ್ನಷ್ಟು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯ ಕೈಗೊಳ್ಳಲಾಗುವುದು.

- ಲಿಂಗರಾಜ ವಾಲಿ, ಉದ್ಯಮಿ, ಬಾಗಲಕೋಟೆ