28ರಿಂದ ಮಂಗಳೂರಲ್ಲಿ ‘ನಿರ್ದಿಗಂತ ಉತ್ಸವ- 2025’

KannadaprabhaNewsNetwork |  
Published : Feb 16, 2025, 01:45 AM IST
ಪ್ರಕಾಶ್‌ | Kannada Prabha

ಸಾರಾಂಶ

ಹಿರಿಯ ಚಿತ್ರನಟ, ರಂಗಭೂಮಿ ಕಲಾವಿದ ಪ್ರಕಾಶ್‌ರಾಜ್‌ ನೇತೃತ್ವದ ‘ನಿರ್ದಿಗಂತ’ ತಂಡದಿಂದ ಮಂಗಳೂರಿನಲ್ಲಿ ಈ ಬಾರಿ ‘ಸೌಹಾರ್ದದ ಬಳಿ ನಮ್ಮ ಕರಾವಳಿ’ ಎಂಬ ಶೀರ್ಷಿಕೆಯಡಿ ‘ನಿರ್ದಿಗಂತ ಉತ್ಸವ- 2025’ ಫೆ.28ರಿಂದ ಮಾ.3ರವರೆಗೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿರಿಯ ಚಿತ್ರನಟ, ರಂಗಭೂಮಿ ಕಲಾವಿದ ಪ್ರಕಾಶ್‌ರಾಜ್‌ ನೇತೃತ್ವದ ‘ನಿರ್ದಿಗಂತ’ ತಂಡದಿಂದ ಮಂಗಳೂರಿನಲ್ಲಿ ಈ ಬಾರಿ ‘ಸೌಹಾರ್ದದ ಬಳಿ ನಮ್ಮ ಕರಾವಳಿ’ ಎಂಬ ಶೀರ್ಷಿಕೆಯಡಿ ‘ನಿರ್ದಿಗಂತ ಉತ್ಸವ- 2025’ ಫೆ.28ರಿಂದ ಮಾ.3ರವರೆಗೆ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್‌ರಾಜ್‌, ನಗರದ ಸಂತ ಅಲೋಶಿಯಸ್‌ ಪರಿಗಣಿತ ವಿಶ್ವವಿದ್ಯಾನಿಲಯ ಆವರಣದಲ್ಲಿ 4 ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ತುಳು, ಕೊಂಕಣಿ ಸೇರಿದಂತೆ ರಂಗಭೂಮಿ ನಿರ್ದೇಶಕರಿಂದ ರಚನೆಗೊಂಡಿರುವ 8 ನಾಟಕಗಳು ಪ್ರದರ್ಶನಗೊಳ್ಳಲಿವೆ. ಫೆ.28ರಂದು ಬೆಳಗ್ಗೆ 9.30ಕ್ಕೆ ಸಂತ ಅಲೋಶಿಯಸ್‌ ಕಾಲೇಜಿನ ಕುಲಪತಿ ರೆ.ಡಾ. ಪ್ರವೀಣ್‌ ಮಾರ್ಟಿಸ್‌ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಶಯ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಏನೇನು ಕಾರ್ಯಕ್ರಮ?:

ಫೆ.28ರಂದು ಮಧ್ಯಾಹ್ನ 12 ಗಂಟೆಗೆ ಪ್ರಥಮ ನಾಟಕ, ಶಕೀಲ್‌ ಅಹ್ಮದ್‌ ನಿರ್ದೇಶನದ ‘ಫಾರ್‌ ಎ. ಬೈಟ್‌ ಆಪ್‌ ಫುಡ್‌’ನ್ನು ಬಿಜಾಪುರದ ಸ್ಪಿನ್ನಿಂಗ್‌ ಟ್ರೀ ಥಿಯೇಟರ್‌ ತಂಡ ಪ್ರಸ್ತುತಪಡಿಸಲಿದೆ. ಸಂಜೆ 3 ಗಂಟೆಗೆ ಮಂಗಳೂರು ಯಕ್ಷಮಿತ್ರರು ತಂಡದಿಂದ ಕೋಟಿ ಚೆನ್ನಯ್ಯ ಯಕ್ಷಗಾನ, 4 ಗಂಟೆಗೆ ಡಾ. ಗಣನಾಥ ಎಕ್ಕಾರು ಅವರು ‘ಬದಲಾಗುತ್ತಿರುವ ಯಕ್ಷಗಾನದ ಸ್ವರೂಪ’ ಎಂಬ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಸಂಜೆ ಧಾರವಾಡದ ಆಟಮಾಟ ತಂಡ ಹಾಗೂ ಮಹದೇವ ಹಡಪದ ನಿರ್ದೇಶನದ ‘ಗುಡಿಯ ನೋಡಿರಣ್ಣ’ ನಾಟಕ ಪ್ರದರ್ಶನವಿದೆ.

ಮಾ.1ರಂದು ಬೆಳಗ್ಗೆ 10.30ಕ್ಕೆ ಡಾ. ಮೋಹನ್‌ ಕುಂಟಾರು ಅವರು ‘ಕರಾವಳಿಯ ಭಾಷಾ ಸಂಬಂಧದ ಕೊಡುಕೊಳ್ವೆಯ ಸ್ವರೂಪ’ ವಿಷಯದಲ್ಲಿ ಮಾತನಾಡಲಿದ್ದಾರೆ. 12 ಗಂಟೆಗೆ ಸಂತ ಅಲೋಶಿಯಸ್‌ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ತಂಡದಿಂದ ಕ್ಲೆನ್ವಿನ್‌ ನಿರ್ದೇಶನದ ‘ಹ್ಯಾಂಗಾನ್‌’ ಕೊಂಕಣಿ ನಾಟಕ ಪ್ರದರ್ಶನ, 3 ಗಂಟೆಗೆ ಬಂಟ್ವಾಳದ ಶಾರದಾ ಜಿ. ಬಂಗೇರ ಅವರಿಂದ ಪಾಡ್ದನ ಹಾಡು, ಐರಿನ್‌ ರೆಬಲ್ಲೋ ಮತ್ತು ತಂಡದಿಂದ ವೊವಿಯೊ ಕೊಂಕಣಿ ಹಾಡು ಹಾಗೂ ಪೂಜ್ಯ ಸೇಸು ಗೌಡ ಕಲಾ ಟ್ರಸ್ಟ್‌ನಿಂದ ಕುಡುಬಿ ಹಾಡುಗಳು ಪ್ರಸ್ತುತಗೊಳ್ಳಲಿವೆ. ಸಂಜೆ 4 ಗಂಟೆಗೆ ವೆಂಕಟರಮಣ ಐತಾಳ್‌ ಅವರು ‘ಸ್ಥಳೀಯ ಚರಿತ್ರೆಗಳು ಮತ್ತು ಕುಸಿಯುತ್ತಿರುವ ಬಹುತ್ವದ ನೆಲೆ’ ವಿಷಯದಲ್ಲಿ ಮಾತನಾಡುವರು. ಸಂಜೆ 7ಕ್ಕೆ ಕೇರಳದ ಲಿಟಲ್‌ ಅರ್ತ್‌ ಸ್ಕೂಲ್‌ ಆಫ್‌ ಥಿಯೇಟರ್‌ ತಂಡದಿಂದ ಅರುಣ್‌ ಲಾಲ್‌ ನಿರ್ದೇಶನದ ‘ಕುಹೂ: ಆಂತಾಲಜಿ ಆನ್‌ ದ ರೈಲ್ಸ್‌’ ನಾಟಕ ಪ್ರದರ್ಶನ ನಡೆಯಲಿದೆ.

ಮಾ.2ರಂದು ಬೆಳಗ್ಗೆ 10.30ಕ್ಕೆ ನರೇಂದ್ರ ರೈ ದೇರ್ಲ ಅವರಿಂದ ‘ಜೀವ ಸಂರಕ್ಷಣೆ ಮತ್ತು ಆಚರಣಾ ಲೋಕ’ ವಿಷಯ ಪ್ರಸ್ತುತಿ, 12ಕ್ಕೆ ನಿರ್ದಿಗಂತ ತಂಡದಿಂದ ಸವಿತಾ ರಾಣಿ ನಿರ್ದೇಶನದ ‘ರಸೀದಿ ಟಿಕೇಟ್‌’ ಪ್ರದರ್ಶನಗೊಳ್ಳಲಿದೆ. ಸಂಜೆ 3ಕ್ಕೆ ಸಚಿನ್‌ ಅಂಕೋಲ, ಫಾತಿಮಾ ರಲಿಯ, ವಿಲ್ಸನ್‌ ಕಚೀಲ್‌ರಿಂದ ಕಥಾ ಕಾವ್ಯ ಕಾರಣ ಕವನ ವಾಚನ, 4ಕ್ಕೆ ಶ್ರೀನಿವಾಸ ಗಿಳಿಯಾರು ಅವರಿಂದ ‘ಕರಾವಳಿಯ ಸೃಜನಶೀಲತೆಯ ಸ್ವರೂಪ’ ವಿಷಯ ಪ್ರಸ್ತುತಿ, 7ಕ್ಕೆ ನಿರ್ದಿಗಂತ ತಂಡದಿಂದ ಶಕೀಲ್‌ ಅಹ್ಮದ್‌ ನಿರ್ದೇಶನದ ‘ತಿಂಡಿಗೆ ಬಂದ ತುಂಡೇರಾಯ’ ನಾಟಕ ಪ್ರದರ್ಶನವಿದೆ.

ಮಾ.3ರಂದು ಬೆಳಗ್ಗೆ 10.30ಕ್ಕೆ ಡಾ. ಇಂದಿರಾ ಹೆಗ್ಡೆ ಅವರಿಂದ ‘ಕರಾವಳಿ ಸಂಸ್ಕೃತಿಯಲ್ಲಿ ಸ್ತ್ರೀ ಲೋಕದೃಷ್ಟಿ’ ವಿಷಯ ಪ್ರಸ್ತುತಿ, 12ಕ್ಕೆ ಸುಮನಸ ಕೊಡವೂರು ತಂಡದಿಂದ ವಿದ್ದು ಉಚ್ಚಿಲ ನಿರ್ದೇಶನದ ‘ಈದಿ’ ತುಳು ನಾಟಕ, 3ರಿಂದ ಪುತ್ತೂರು ಸಂಸಾರ ತಂಜದಿಂದ ‘ನಾವು ಯಾವಾಗ ಬದಲಾಗುತ್ತೇವೆ’ ಹಾಗೂ ಜೋಡುಮಾರ್ಗ ಸಂಸಾರ ತಂಡದಿಂದ ‘ಈಗ ಹೇಳಿ.. ನಾವೇನ್ಮಾಡೋಣ..? ’ ಬೀದಿ ನಾಟಕಗಳ ಪ್ರದರ್ಶನ, ಫೆ.1ರಿಂದ 3ರವರೆಗೆ ಪ್ರತಿದಿನ ಬೆಳಗ್ಗೆ 9.30ಕ್ಕೆ ಹಿಂದಿನ ದಿನದ ನಾಟಕಗಳ ಬಗ್ಗೆ ಚರ್ಚೆ ಆಯೋಜಿಸಲಾಗಿದೆ.

ಮೈ ಮನಗಳ ಸುಳಿಯಲ್ಲಿ ನಾಟಕ:

ಮಾ.3ರಂದು ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಮಲಯಾಳಂ ನಟಿ ಪಾರ್ವತಿ ತಿರುವೊತ್ತು ಪ್ರಮುಖ ಆಕರ್ಷಣೆಯಾಗಿ ಭಾಗವಹಿಸಲಿದ್ದಾರೆ. ರಾತ್ರಿ 7 ಗಂಟೆಗೆ ನಿರ್ದಿಗಂತ ತಂಡದಿಂದ ಅಮಿತ್‌ ರೆಡ್ಡಿ ನಿರ್ದೇಶನದ ‘ಮೈ ಮನಗಳ ಸುಳಿಯಲ್ಲಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಾಶ್‌ ರಾಜ್‌ ತಿಳಿಸಿದರು.

ರಂಗ ನಿರ್ದೇಶಕ ವಿದು ಉಚ್ಚಿಲ್‌, ಸಂತ ಅಲೋಶಿಯಸ್‌ ಪರಿಗಣಿತಿ ವಿವಿಯ ರಂಗ ಅಧ್ಯಯನ ಕೇಂದ್ರದ ಕ್ರಿಸ್ಟೋಫರ್‌, ರಂಗ ನಿರ್ದೇಶಕ ಅನುಷ್‌ ಶೆಟ್ಟಿ ಇದ್ದರು.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು